ಪ್ಲಾಂಟ್ ಬಯೋಕೆಮಿಸ್ಟ್ರಿ ಅಧ್ಯಯನದಲ್ಲಿ ಎರಡು ಚಿನ್ನದ ಪದಕ ಗೆದ್ದ ಗುಡಿಬಂಡೆ ವಿದ್ಯಾರ್ಥಿನಿ
by GS Bharath Gudibande
ಗುಡಿಬಂಡೆ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಆದ ಗುಡಿಬಂಡೆ ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಹಿರಿಮೆ ಮತ್ತು ಕೀರ್ತಿಗೆ ಪಾತ್ರವಾಗಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡು ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ.
ಪಟ್ಟಣದ ರೈತರೊಬ್ಬರ ಮಗಳಾದ ಜಿ.ಎ.ನಂದಿನಿ ಅದ್ಬುತ ಸಾಧನೆ ಮಾಡಿದ್ದು, ಇಡೀ ತಾಲೂಕಿನ ಜನತೆ ಹೆಮ್ಮೆಯಿಂದ ಬೀಗುತ್ತಿದ್ದಾರೆ.
ಅವರ ಪೋಷಕರಾದ ಅಶ್ವತ್ಥಪ್ಪ, ಲಕ್ಷ್ಮೀ ಅವರು ಪಟ್ಟಣದ ಬಾಪೂಜಿ ನಗರದ ವಾಸಿಗಳಾಗಿದ್ದು, ಮಗಳ ಸಾಧನೆಯನ್ನು ಕಂಡು ಪುಳಕಿತರಾಗಿದ್ದಾರೆ.
ನಂದಿನಿ ಅವರು ಪ್ರಾಥಮಿಕ ಮತ್ತು ಪ್ರೌಡಶಾಲೆ ಶಿಕ್ಷಣವನ್ನು ತಾಲೂಕಿನ ಸರಕಾರಿ ಶಾಲೆಯಲ್ಲಿಯೇ ಪೂರೈಸಿದ್ದು, ಉನ್ನತ ಶಿಕ್ಷಣಕ್ಕೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ (GKVK) ವಿದ್ಯಾಭ್ಯಾಸಕ್ಕೆ ಸೇರ್ಪಡೆಯಾಗಿ ಪ್ಲಾಂಟ್ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗುಡಿಬಂಡೆಗೂ ಕೀರ್ತಿ ತಂದಿದ್ದಾರೆ.
ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಯುಎಸ್ಎ ಗೋಲ್ಡ್ ಮೆಡಲ್ ಫಾರ್ ಜನರಲ್ ಮೆರಿಟ್ ಮತ್ತು ಡಾ.ಎಲ್. ಸುದರ್ಶನ ಗೋಲ್ಡ್ ಮೆಡಲ್ ಎಂಬ ಎರಡು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ನಂದಿನಿ.
ಎರಡು ಚಿನ್ನದ ಪದಕಗಳ ವಿಜೇತೆಯಾದ ನಂದಿನಿ, ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು, ತನ್ನ ಪದವಿ ಪೂರ್ವ ವಿದ್ಯಾಭ್ಯಾಸದವರೆಗೂ ಸರ್ಕಾರಿ ಶಾಲೆಗಳಲ್ಲೇ ಓದಿದ್ದರು. ನಂತರ ಬಿಎಸ್ಸಿ ಅಗ್ರಕಲ್ಚರ್ ವಿದ್ಯಾಭ್ಯಾಸವನ್ನು ಹಾಸನ ಕೃಷಿ ವಿಶ್ವವಿದ್ಯಾಲಯದಲ್ಲಿ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಪಡೆದು ಓದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು. ನಂತರ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದು ಜಿಕೆವಿಕೆಯಲ್ಲಿ ಕೃಷಿ ವಿಷಯವನ್ನು ವಿದ್ಯಾಭ್ಯಾಸ ಮಾಡುತ್ತಾ ತಾನು ಮಾಡಿದ ಅಧ್ಯಯನದಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದು ಹುಟ್ಟೂರಾದ ಗುಡಿಬಂಡೆ ಹಾಗೂ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ನಂದಿನಿ ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಸಿಬ್ಬಂದಿ, ಪೋಷಕರೂ, ಕುಟುಂಬಸ್ಥರೂ ಸೇರಿದಂತೆ ಶಿಕ್ಷಕರು, ಗುಡಿಬಂಡೆ ತಾಲೂಕಿನ ಸಾರ್ವಜನಿಕರು ಹಾಗೂ ಹಲವು ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಯುತ್ತಿದ್ದಂತೆ ಎಲ್ಲಾ ಮಕ್ಕಳು ಬೇಗ ಆಯ್ಕೆ ಮಾಡುವುದು ಎಂಜಿನಿಯರಿಂಗ್. ಆದರೆ, ನಂದಿನಿಯಂಥ ವಿದ್ಯಾರ್ಥಿಗಳು ರೈತ ಕುಟುಂಬದಿಂದ ಬಂದು ರಾಜ್ಯಮಟ್ಟದಲ್ಲಿ ಎರಡು ಚಿನ್ನದ ಪದಕ ಗಳಿಸುವ ಸಾಧನೆ ಮಾಡಿರುವುದು ಶ್ಲಾಘನೀಯ. ನಂದಿನಿಯ ಸಾಧನೆ ಇನ್ನಷ್ಟು ಎತ್ತರಕ್ಕೇರಲೆಂದು ಹಾರೈಸುತ್ತೇನೆ.
ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಡಿಬಂಡೆ
ನನಗೆ ಚಿನ್ನದ ಪದಕಗಳು ಬಂದಿರುವುದು ತುಂಬಾ ಸಂತಸ ನೀಡದೆ. ನಮ್ಮ ಕಾಲೇಜಿನ ಪ್ರಾಧ್ಯಾಪಕರು ಹಾಗೂ ನನಗೆ ಸಹಕಾರ ನೀಡಿದ ಪೋಷಕರಿಗೆ, ನನ್ನ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಜಿ.ಎ.ನಂದಿನಿ, ಜಿಕೆವಿಕೆ ಕೃಷಿ ವಿದ್ಯಾರ್ಥಿ