ಮಹಾಲಕ್ಷ್ಮಿ ಬಡಾವಣೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಪೂಜ್ಯ ಗುರುಗಳ ಕಂಚಿನ ಪ್ರತಿಮೆ
ಆದಿಚುಂಚನಗಿರಿ: ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ ನಲವತ್ತೆಂಟನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಮತ್ತು ಶ್ರೀಗುರು ಸಂಸ್ಮರಣೋತ್ಸವ ಸಮಾರಂಭವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.
ಶ್ರೀ ಗುರು ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಚೈತನ್ಯ ಮೂರ್ತಿಗೆ ಪುಷ್ಪಾಭಿಷೇಕ ಮಾಡಿ ಆರತಿ ಬೆಳಗಿ ಭಕ್ತಿ ಸಮರ್ಪಿಸಿದ ನಂತರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವದಿಸಿದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರು; “ಪರಮಪೂಜ್ಯ ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಶ್ರೀ ಮಠದ ಪೀಠಾಧ್ಯಕ್ಷರಾಗಿ ನಲವತ್ತೆಂಟು ಸಂವತ್ಸರಗಳು ಕಳೆದಿವೆ. ತಮ್ಮ ಸೇವೆಯ ಮೂಲಕವೇ ಸರ್ವಜನ ಮಾನಸದಲ್ಲಿ ವಿರಾಜಮಾನರಾಗಿರುವ ಶ್ರೀ ಗುರುವಿಗೆ ಶಾಶ್ವತ ಪಟ್ಟಾಭಿಷೇಕ ನಿರಂತರವಾಗಿ ನಡೆಯುತ್ತಿರುತ್ತದೆ” ಎಂದು ನುಡಿದರು.
“ಪೂಜ್ಯ ಗುರುಗಳು ಪೀಠಾಧಿಕಾರಕ್ಕೆ ಬಂದ ಸಂದರ್ಭದಲ್ಲಿ ಯಾವ ಮನೆ ಶಾಶ್ವತವಾಗಿ ಅವಿದ್ಯೆಯಿಂದ ಕೂಡಿದೆಯೋ ಅಂತಹ ಮನೆಗಳ ಮಕ್ಕಳಿಗೆ ವಿದ್ಯೆಯನ್ನು ನೀಡಬೇಕು. ನಮ್ಮ ಜೀವಿತದ ಸಂದರ್ಭದಲ್ಲಿ ಹತ್ತು ಸಾವಿರ ಮಂದಿ ಮಕ್ಕಳಿಗಾದರೂ ವಿದ್ಯೆಯನ್ನು ನೀಡುವಂತಾಗಬೇಕೆಂದು ಸಂಕಲ್ಪಿಸಿದ್ದರು. ಆದರೆ ಪೂಜ್ಯ ಗುರುಗಳ ಜೀವಿತಾವಧಿಯಲ್ಲಿಯೇ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ವಿದ್ಯೆಯನ್ನು ಪಡೆಯುತ್ತಿದ್ದರು. ಗುರುಗಳ ಸತ್ಸಂಕಲ್ಪಕ್ಕೆ ಅಂತಹ ಶಕ್ತಿಯಿತ್ತು. ಅಂತಹ ಮಹಾಯೋಗಿ 1800 ವರ್ಷಗಳ ಇತಿಹಾಸವನ್ನುಳ್ಳ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಪೀಠಾಧಿಕಾರಿಯಾಗಿ ಬಂದು ಪರುಷಮಣಿಯಂತೆ ಇಡೀ ಜಗತ್ತನ್ನು ಉದ್ಧರಿಸಿ ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇಂಥ ಮಹಾ ಮಹಿಮೆಯನ್ನುಳ್ಳ ಗುರುಗಳನ್ನು ಪಡೆದಿರುವ ನಾವೇ ಧನ್ಯರು” ಎಂದು ಶ್ರೀಗಳವರು ನುಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಚಿವ ಗೋಪಾಲಯ್ಯ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ದೂರ ದೃಷ್ಠಿಯ ಫಲವಾಗಿ ಇಂದು ಈ ಸಮಾಜದ ಅಸಂಖ್ಯಾತ ಅಕ್ಷರ ವಂಚಿತ ಮಕ್ಕಳು ವಿದ್ಯಾವಂತರಾಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಈ ಮಠ ಕೇವಲ ಒಕ್ಕಲಿಗರ ಮಕ್ಕಳಿಗಷ್ಟೇ ಸೀಮಿತವಾದುದಲ್ಲ. ಎಲ್ಲಾ ಜಾತಿ ವರ್ಗ ಮತ ಧರ್ಮದ ಮಕ್ಕಳಿಗೂ ಶಿಕ್ಷಣವನ್ನು ಸಲ್ಲಿಸುತ್ತಿದೆ. ಸಮಾಜದ ಎಲ್ಲಾ ವರ್ಗದವರಿಗೂ ತನ್ನ ಅಪರಿಮಿತ ಸೇವೆಯನ್ನು ಸಲ್ಲಿಸುತ್ತಿದೆ. ಇದಕ್ಕೆಲ್ಲ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸತ್ಸಂಕಲ್ಪವೇ ಕಾರಣವಾಗಿದೆ ಎಂದು ತಿಳಿಸಿ, ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಪೂಜ್ಯ ಗುರುಗಳ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ; ಪರಮಪೂಜ್ಯ ಗುರೂಜಿ ಅವರೊಡನೆಯ ತಮ್ಮ ಸ್ಮರಣೀಯ ನೆನಪುಗಳನ್ನು ಹಂಚಿಕೊಂಡರು. ಶ್ರೀ ಕ್ಷೇತ್ರದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇಗುಲವನ್ನು ನಿರ್ಮಿಸುವಾಗ ತನಗೂ ಸೇವೆಯನ್ನು ಸಲ್ಲಿಸುವ ಭಾಗ್ಯವನ್ನು ನನಗೆ ದಯಪಾಲಿಸಿದ್ದರು ಎಂದು ಸ್ಮರಿಸಿಕೊಂಡರು. ಶ್ರೀ ಗುರುಗಳ ಕೃಪೆಯಿಂದ ಲೋಕಸಭಾ ಸದಸ್ಯರಾಗಲು, ರಾಜ್ಯದ ಸಚಿವರಾಗಲು ಶಾಸಕನಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾಗಿತ್ತು ಎಂದರು.
ವಾಗ್ಮಿ ಪ್ರೊ. ಕೃಷ್ಣೇಗೌಡರು ಮಾತನಾಡಿ, “ಕ್ರಿಸ್ತ ಹುಟ್ಟಿದ ನಂತರದ ಕಾಲವನ್ನು ಕ್ರಿಸ್ತಶಕ ಎಂದು ಗುರುತಿಸುತ್ತಾರೆ. ಅಂತೆಯೇ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳವರ ನಂತರದ ಕಾಲವನ್ನು ಶ್ರೀಗುರು ಬಾಲಗಂಗಾಧರ ಶಕೆ ಎಂದು ನಾವು ಗುರುತಿಸಬಹುದು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ದೇಶ ತೀವ್ರ ಬರಗಾಲದ ಸ್ಥಿತಿಯಲ್ಲಿತ್ತು. ನಮ್ಮ ನಾಡಿನಲ್ಲಿ ಅವಿದ್ಯಾವಂತರೇ ತುಂಬಿ ಕೊಂಡಿದ್ದರು. ಅಂತಹ ಕಾಲದಲ್ಲಿ ನಮ್ಮ ಜನರಿಗೆ ವಿದ್ಯೆಯನ್ನು, ಜ್ಞಾನವನ್ನು ನೀಡದೆ ನಮ್ಮ ಸಮಾಜದ ಬಡತನವನ್ನು ಮೌಢ್ಯವನ್ನು ತೊಲಗಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಇಡೀ ನಾಡಿನಾದ್ಯಂತ ಶಾಲೆಗಳನ್ನು ತೆರೆಯಲು ಪ್ರಾರಂಭಿಸಿದ ಫಲವಾಗಿ ಇಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ಒಂದು ಲಕ್ಷದ ನಲವತ್ತೆಂಟು ಸಾವಿರ ಮಂದಿ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದ್ದರಿಂದ ನಮ್ಮ ಸಮಾಜದ ಪಾಲಿಗೆ, ಶ್ರೀಮಠದ ಪಾಲಿಗೆ ಇದು ಬಾಲಗಂಗಾಧರನಾಥ ಸ್ವಾಮಿ ಶಖೆಯಾಗಿದೆ” ಎಂದು ತಿಳಿಸಿದರು.
ಇದೇ ಶುಭ ಸಂದರ್ಭದಲ್ಲಿ ಮಹಾಸ್ವಾಮಿಗಳವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ಮುವ್ವತ್ತೈದು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವದಿಸಿದರು.
ಪ್ರೊ.ಶಿವರಾಮರೆಡ್ಡಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಚಂದ್ರಶೇಖರಶೆಟ್ಟಿ, ಹೇಮಲತಾ ಗೋಪಾಲಯ್ಯ, ಆದಿಚುಂಚನಗಿರಿ ಮಹಾಸಂಸ್ಥಾನದ ಎಲ್ಲಾ ಶಾಖಾಮಠಗಳ ಸ್ವಾಮಿಗಳವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀ ಪ್ರಸನ್ನನಾಥಸ್ವಾಮಿಗಳವರು ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು.