ಸಚಿವ ಡಾ.ಸುಧಾಕರ್ ತವರೂರು ಪೆರೇಸಂದ್ರದಲ್ಲಿಕಾಂಗ್ರೆಸ್ ಕಾಲ್ನಡಿಗೆ
by M Krishnapa Chikkaballapura
ಚಿಕ್ಕಬಳ್ಳಾಪುರ: ಕೆಟ್ಟ ರಾಜಕಾರಣ ಮಾಡುತ್ತಿರುವ ಬಿಜೆಪಿ ಸರಕಾರ 13 ಸಾವಿರ ಕೋಟಿ ರೂಪಾಯಿಗಳ ವೆಚ್ಚದ ಎತ್ತಿನ ಹೊಳೆ ಯೋಜನೆಯ ನೀರನ್ನು ಚಿಕ್ಕಬಳ್ಳಾಪುರ, ಕೋಲಾರ ತಲುಪಲು ಬಿಡುತ್ತಿಲ್ಲ ಎಂದು ಮಾಜಿ ಸಚಿವ, ಶಾಸಕ ಕೃಷ್ಣಭೈರೇಗೌಡ ಆರೋಪಿಸಿದರು.
ಬೆಲೆ ಏರಿಕೆ ವಿರುದ್ದ ಸಚಿವ ಡಾ.ಸುಧಾಕರ್ ತವರೂರು ಪೆರೇಸಂದ್ರದಲ್ಲಿ ಪಕ್ಷದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.
ಸ್ವಾರ್ಥಿಗಳು ನೀರು ಹರಿಯುವ ಯೋಜನೆಯನ್ನು ತುಮಕೂರಿನವರೆಗೆ ಮಾಡಿಕೊಂಡಿದ್ದಾರೆ. ಅದು ಚಿಕ್ಕಬಳ್ಳಾಪುರಕ್ಕೆ ತಲುಪುವ ಲಕ್ಷಣಗಳಿಲ್ಲ. ಇಲ್ಲಿನ ಜನರ ಕಾಳಜಿ ರೈತರ ಹಿತಾಸಕ್ತಿ ಬಿಜೆಪಿ ಸರಕಾರಕ್ಕೆ ಬೇಕಿಲ್ಲ. ಎತ್ತಿನಹೊಳೆ ಯೋಜನೆ ತೋರಿಸಿಕೊಂಡು ಕೆಲವರು ಸೀಟು ಭದ್ರ ಮಾಡಿಕೊಂಡರು. ಕನಿಷ್ಠ ಕುಡಿಯುವ ನೀರನ್ನು ಕೊಡದೇ ಬಿಜೆಪಿ ಸರಕಾರ ನಮ್ಮ ಜಿಲ್ಲೆಗಳಿಗೆ ಭಾರೀ ಅನ್ಯಾಯ ಮಾಡಿದೆ ಎಂದರು ಅವರು.
ಕೋವಿಡ್ʼನಿಂದ ಹಲವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಜನರಿಗೆ ಕಷ್ಟ ಬಂದಾಗ ಅಗತ್ಯ ನೆರವು ನೀಡಬೇಕು. ಆದರೆ ಈ ಸರಕಾರ ಜನರನ್ನು ನಡುನೀರಿನಲ್ಲಿ ಕೈ ಬಿಟ್ಟಿದೆ ಎಂದು ಅವರು ದೂರಿದರು.
ಕೇರಳ ರಾಜ್ಯದಲ್ಲಿ ಪ್ರತೀ ತಿಂಗಳು ಮನೆ ಬಾಗಿಲಿಗೆ ರೇಷನ್ ಸಿಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ನಿಗದಿಯಾದ ಪಡಿತರವನ್ನೇ ಸರಿಯಾಗಿ ವಿತರಿಸುತ್ತಿಲ್ಲ. ಸರಕಾರಕ್ಕೆ ಇಷ್ಟೊಂದು ದರಿದ್ರ ಸ್ಥಿತಿ ಎದುರಾಗಿದೆಯೇ ಎಂದು ಕೃಷ್ಣ ಭೈರೇಗೌಡ ಪ್ರಶ್ನಿಸಿದರು.
ವೃಷಭಾವತಿ ವ್ಯಾಲಿಯಿಂದ ಇಲ್ಲಿಗೆ ನೀರು ತರಲು ವ್ಯವಸ್ಥೆ ಆಗಿತ್ತು? ಆದರೆ ಬಿಜೆಪಿ ಸರಕಾರ ಆ ನೀರನ್ನು ತುಮಕೂರಿಗೆ ತೆಗೆದುಕೊಂಡು ಹೋಗಿದೆ. ಚಿಕ್ಕಬಳ್ಳಾಪುರದ ಜನರಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರೂ ಕೂಡ ಜಿಲ್ಲೆಯ ಸಚಿವರು ಮೌನಕ್ಕೆ ಶರಣಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾಲ್ನಡಿಗೆ ಜಾಥಾ ಸಮಾವೇಶದಲ್ಲಿ ಶಾಸಕರುಗಳಾದ ರಮೇಶ್ ಕುಮಾರ್ , ಸುಬ್ಬಾರೆಡ್ಡಿ, ಶಿವಶಂಕರ್, ಮಾಜಿ ಸಚಿವರಾದ ವಿ ಮುನಿಯಪ್ಪ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ , ಕೆಪಿಸಿಸಿ ಮುಖಂಡರುಗಳಾದ ಮಧು ಬಂಗಾರಪ್ಪ, ವಿನಯ್ (ಶ್ಯಾಂ) ಮಾತನಾಡಿದರು.
ಈ ಸಂದರ್ಭದಲ್ಲಿ ಕೋವಿಡ್ ಸಂತ್ರಸ್ತರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ವಿನಯ್ ಶ್ಯಾಂ ಅವರು ಜಿ ಹೆಚ್ ಎನ್ ಪೌಂಡೇಷನ್ ವತಿಯಿಂದ ಆರ್ಥಿಕ ನೆರವು ನೀಡಿದರು.
ಬಿಜೆಪಿ ಸರಕಾರವನ್ನು ತಿರಸ್ಕರಿಸಿ: ವಿನಯ್
ಮಂಡಿಕಲ್ಲು ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಏನಿದೆ ಎಂಬುದು ಇಂದು ಸಾಬೀತಾಗಿದೆ. ಜನ ಸಮೂಹದ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದು ಕೆಪಿಸಿಸಿ ಸದಸ್ಯ ವಿನಯ್ ಹೇಳಿದ್ದಾರೆ.
ಕಾಲ್ನಡಿಗೆ ಜಾಥಾ ನಂತರದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಂಬುದು ದೊಡ್ಡ ಹಡಗು. ಇಲ್ಲಿಗೆ ಯಾರೇ ಬರಲಿ, ಯಾರೇ ಹೋಗಲಿ ಹಡಗು ಮಾತ್ರ ಮುಳುಗುವುದಿಲ್ಲ. ರಾಜ್ಯ ಸರಕಾರ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೋವಿಡ್ʼನಿಂದ ಜನ ಸಂಕಟಕ್ಕೆ ಒಳಗಾಗಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಸ್ಕೀಂ ಮಾಡಿ ಹಣ ಕೊಡುತ್ತೇವೆಂದರು. ಎಷ್ಟು ಜನಕ್ಕೆ ಹಣ ಬಂದಿದೆ ಗೊತ್ತಿಲ್ಲ. ಆದರೆ ನಾವು ಜಿ.ಹೆಚ್.ಎನ್ ಪೌಂಡೇಷನ್ ವತಿಯಿಂದ ಕೈಲಾದ ಮಟ್ಟಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದೇವೆ. ನಾವು ನಿಮ್ಮೊಂದಿಗಿದ್ದೇವೆ, ಹೆದರ ಬೇಡಿ ಎಂದರು.