ಪಾರದರ್ಶಕತೆಗೆ ಒತ್ತು, ಕೆಇಎ ಲಿಖಿತ ಪರೀಕ್ಷೆ ಅಂಕಗಳೇ ಮಾನದಂಡ, ಸಂದರ್ಶನ ಇಲ್ಲ
ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಇದೇ 7ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಲಿಖಿತ ಪರೀಕ್ಷೆ ನಡೆಸಿ ಸಂಪೂರ್ಣ ಪಾರದರ್ಶಕತೆಯೊಂದಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳೇ ನೇಮಕಾತಿಗೆ ಆಧಾರವಾಗಲಿದ್ದು, ಸಂದರ್ಶನ ಇರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಿರುತ್ತದೆ. ಈ ವಿಷಯಗಳಲ್ಲಿ ಮಾತ್ರ ವಿವರಣಾತ್ಮಕ ಉತ್ತರಗಳನ್ನು ಬರೆಯಬೇಕಾಗುತ್ತದೆ. ಉಳಿದ ವಿಷಯಗಳಲ್ಲಿ ಬಹು ಆಯ್ಕೆ ಪ್ರಶ್ನೆಗಳು ಮಾತ್ರ ಇರುತ್ತವೆ ಎಂದು ಸಚಿವರು ತಿಳಿಸಿದ್ದಾರೆ.
1,242 ಹುದ್ದೆಗಳ ಪೈಕಿ 16 ವಿಷಯಗಳಿಗೆ ಸಂಬಂಧಿಸಿದ 145 ಹುದ್ದೆಗಳು 2015ರಲ್ಲಿ ಭರ್ತಿಯಾಗದ ಹುದ್ದೆಗಳಾಗಿವೆ. ಉಳಿದ 1097 ಹುದ್ದೆಗಳು ಈ ಸಾಲಿನ ನೇಮಕಾತಿಗೆ ಮಂಜೂರಾಗಿರುತ್ತವೆ. 2015ರ ಖಾಲಿ ಹುದ್ದೆಗಳನ್ನು ಹೊರತುಪಡಿಸಿ, ಪ್ರಸಕ್ತ ಸಾಲಿಗೆ 25 ವಿಷಯಗಳಿಗೆ ಈ ನೇಮಕಾತಿ ನಡೆಯಲಿದೆ. ಅರ್ಥಶಾಸ್ತ್ರದಲ್ಲಿ 121, ಕನ್ನಡ 105, ಇತಿಹಾಸ 108, ರಾಜ್ಯಶಾಸ್ತ್ರ 96, ವಾಣಿಜ್ಯ ಶಾಸ್ತ್ರ 171, ಭೌತಶಾಸ್ತ್ರ 74, ರಸಾಯನಶಾಸ್ತ್ರ 82, ಗಣಿತಶಾಸ್ತ್ರ 72, ಸಸ್ಯಶಾಸ್ತ್ರ 51, ಇಂಗ್ಲಿಷ್ 34 ಹುದ್ದೆಗಳ ನೇಮಕಾತಿ ಇದರಲ್ಲಿ ಸೇರಿದ್ದು, ಹೆಚ್ಚಿನ ವಿವರಗಳು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಸಿಗಲಿದೆ ಎಂದು ವಿವರಿಸಿದ್ದಾರೆ.
‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೊಳಿಸಿರುವ ರಾಷ್ಟೀಯ ಶಿಕ್ಷಣ ನೀತಿಯ ಮುಖ್ಯ ಆಶಯ ಇದಾಗಿದೆ. ಹೀಗಾಗಿ, ಸಂಪೂರ್ಣ ಪಾರದರ್ಶಕತೆಯೊಂದಿಗೆ ಪರೀಕ್ಷೆಯಲ್ಲಿನ ಮೆರಿಟ್ ಅನ್ನೇ ಅಳತೆಗೋಲಾಗಿಸಿಕೊಂಡು ನೇಮಕಾತಿ ನಡೆಯಲಿದೆ. ಗುಣಮಟ್ಟದ ಬೋಧಕರು ಗುಣಮಟ್ಟದ ವಿದ್ಯಾರ್ಥಿಗಳನ್ನು ರೂಪಿಸಬಲ್ಲರು ಎಂಬುದು ಸರ್ಕಾರದ ನಿಲುವಾಗಿದೆ’ ಎಂದು ಸಚಿವರು ಹೇಳಿದ್ದಾರೆ.
ವಂಚನೆಗೆ ಒಳಗಾಗಬೇಡಿ
ಉದ್ಯೋಗಾಕಾಂಕ್ಷಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ. ಯಾರೇ ಆಗಲಿ ಆಮಿಷ, ಪ್ರಲೋಭನೆಗಳಿಗೆ ಒಳಗಾಗಬಾರದು. ಪ್ರಭಾವ ಬಳಸಿ ಉದ್ಯೋಗ ಕೊಡಿಸುವುದಾಗಿ ಭರವಸೆ ಕೊಡುವವರನ್ನು ನಂಬಿ ಹಣ, ಪರಿಶ್ರಮ ಹಾಗೂ ಸಮಯದ ನಷ್ಟ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
ಕೆಇಎ ವೆಬ್ ಸೈಟ್ ಮೂಲಕ ಅ.7ರಂದು ಅರ್ಜಿ ಸಲ್ಲಿಕೆ ಶುರುವಾಗಲಿದ್ದು ನವೆಂಬರ್ 6ರಂದು ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸಬಹುದು. ಒಟ್ಟು 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಲ್ಲಿ ಶೇ 5ರಷ್ಟು ಹುದ್ದೆಗಳನ್ನು ಇಲಾಖೆಯ ಗ್ರೂಪ್ ‘ಸಿ’ ವೃಂದದಿಂದ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ ಪಾವತಿಗೆ ನವೆಂಬರ್ 10 ಕೊನೆಯ ದಿನ. ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ ಮತ್ತಿತರ ಮಾಹಿತಿಗಾಗಿ ಕೆಇಎ ವೆಬ್ ಸೈಟ್ https://kea.kar.nic.in ಗಮನಿಸಬಹುದು.