ಡಿಗ್ರಿ ಓದುವಾಗಲೇ 76 ಕ್ರಿಮಿನಲ್ ಮೊಕದ್ದಮೆ ಎದುರಿಸಿದ್ದ ಜಿವಿಎಸ್
by Ra Na Gopala Reddy Bagepalli
ಬಾಗೇಪಲ್ಲಿ: ಇತ್ತೀಚಿನ ದಿನಗಳಲ್ಲಿ ಕಾಟಾಚಾರಕ್ಕೆ, ಸುದ್ದಿಗಾಗಿ, ಪ್ರಚಾರಕ್ಕಾಗಿ ಹಾಗೂ ಮನವಿ ಪತ್ರಗಳನ್ನ ನೀಡುವುದಕ್ಕೆ ಮಾತ್ರ ಹೋರಾಟಗಳನ್ನು ಸೀಮಿತಗೊಳಿಸಿರುವ ಪರಿಣಾಮ ಹೋರಾಟಗಳ ಮತ್ತು ಹೋರಾಟಗಾರರ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಜಾ ಸಂಘರ್ಷ ಸಮಿತಿ ಸಂಸ್ಥಾಪಕ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಪಟ್ಟಣದ ರಾಯಲ್ ಫಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂ.ಜಿ.ವಿ.ಅಶ್ವತ್ಥನಾರಾಯಣರೆಡ್ಡಿ ಅವರ 11ನೇ ವರ್ಷದ ವರ್ಧಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದುವರಿದು ಅವರು ಹೇಳಿದ್ದಿಷ್ಟು;
ಕಾಂ.ಜಿ.ವಿ.ಅಶ್ವತ್ಥನಾರಾಯಣರೆಡ್ಡಿ ಅವರು 1972ರಲ್ಲಿ ಭೂಮಿ ಹೋರಾಟ ಪ್ರಾರಂಭ ಮಾಡಿದವರಲ್ಲಿ ಮೊದಲಿಗರು. ಭಂಜರ ಭೂಮಿ ಬಡವರಿಗೆ ಹಂಚಿಕೆ ಮಾಡುವಲ್ಲಿ ಹೋರಾಟ ಮಾಡಿ ಒಂದೇ ತಿಂಗಳಿನಲ್ಲಿ ಇಡೀ ಜಿಲ್ಲೆಯಲ್ಲಿಯೇ ವ್ಯಾಪಿಸಿತು.ಇದರಲ್ಲಿ ಬಾಗೇಪಲ್ಲಿ ತಾಲ್ಲೂಕು ಸೇರಿಕೊಂಡಿತ್ತು. ಈ ಹೋರಾಟದಲ್ಲಿ 3600 ಜನ ಜೈಲು ಸೇರಿದ್ದರು. ಇದರಲ್ಲಿ ಮೂಂಚೂಣಿಯಲ್ಲಿದ್ದ ನಾಯಕರೇ ಅಶ್ವತ್ಥನಾರಾಯಣರೆಡ್ಡಿ .
ಈ ಹೋರಾಟದ ಪ್ರತಿಫಲವಾಗಿ 12 ಲಕ್ಷ ಕುಟುಂಬಗಳಿಗೆ ಸರ್ಕಾರ ಭೂಮಿ ನೀಡಲು ಸಾಧ್ಯವಾಯಿತು. ಈ ಭೂಮಿ ಹೋರಾಟದಲ್ಲಿ ನಾನು ಸಹ ಭಾಗಿಯಾಗಿ ಜೈಲಿಗೆ ಹೋಗಬೇಕಾಯಿತು. ಅಂದು ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ನನ್ನ ಮೇಲೆ 76 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು. ಅಂದಿನ ಹೋರಾಟಗಳಿಗೂ ಇಂದಿನ ಹೋರಾಟಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬಡವರಿಗೆ ಭೂಮಿ ಹಂಚಿಕೆ ಮಾಡಬೇಕೆಂದು 1982ರಲ್ಲಿ ಹೋರಾಟ ಪ್ರಾರಂಭವಾಯಿತು. ಈ ಹೋರಾಟದ ಮುಂದಾಳತ್ವವನ್ನು ಕಾಂ.ಜಿ.ವಿ.ಅಶ್ವತ್ಥನಾರಾಯಣರೆಡ್ಡಿ ವಹಿಸಿದ್ದರು.
ಹೋರಾಟಗಳು ತ್ರೀವ್ರವಾಗಬೇಕು. ದೀರ್ಘಕಾಲಿಕ ಹೋರಾಟಗಳಾಗಿರಬೇಕು, ಯಾವುದೇ ಸಮಸ್ಯೆಯನ್ನು ತೆಗೆದುಕೊಂಡು ಹೋರಾಟ ಪ್ರಾರಂಭ ಮಾಡಿದರೆ ಅದಕ್ಕೆ ಒಂದು ಅಂತಿಮ ಸ್ವರೂಪವನ್ನು, ಅಂತಿಮ ಫಲಿತಾಂಶವನ್ನು ಪಡೆಯುವ ರೀತಿಯಲ್ಲಿ ಹೋರಾಟಗಳನ್ನು ನಡೆಸಿದರೆ ಮಾತ್ರ ಹಿಂದಿನ ಹೋರಾಟಗಳಿಗೆ ನಾವು ಗೌರವ ನೀಡಿದಂತಾಗುತ್ತದೆ.
ಭೂಮಿ, ಕೂಲಿ,ಮನೆ, ನಿವೇಶನ ಸೇರಿದಂತೆ ಮೂಲಭೂತ ಸಮಸ್ಯೆಗಳ ತೆಗೆದುಕೊಂಡು ಹೋರಾಟ ಮಾಡುತ್ತಿದ್ದರು ಆದರೆ ಉಳುವವನಿಗೆ ಭೂಮಿ ಕೊಡಿ ಎನ್ನುವ ಹೋರಾಟದ ಬದಲಿಗೆ ನಮ್ಮ ಭೂಮಿ ಕಾಯಂ ಮಾಡಿ ಎನ್ನುವ ರೀತಿಯಲ್ಲಿ ಹೋರಾಟಗಳನ್ನು ರೂಪಿಸುವ ಮೂಲಕ ಈ ಹಿಂದಿನ ಹೋರಾಟಗಳ ಸ್ವರೂಪವೇ ಬದಲಿಸಲಾಗಿದೆ.
ರಾಜಕೀಯ ಅಧಿಕಾರ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವಂಥ ಮನೋಭಾವ ಜನರಲ್ಲಿ ಬಂದಿದೆ. ಆದರೆ ರಾಜಕೀಯ ಅಧಿಕಾರ ಬೇಕು ಎನ್ನುವ ಉದ್ದೇಶ ಅಂದಿನ ದಿನಗಳಲ್ಲಿ ಹೋರಾಟಗಾರರಲ್ಲಿ ಇರಲಿಲ್ಲ, ಕಾಂ.ಜಿ.ವಿ.ಅಶ್ವತ್ಥನಾರಾಯಣರೆಡ್ಡಿ ಅವರು ಯಾವುದೇ ರಾಜಕೀಯ ಅಧಿಕಾರವನ್ನು ಬಯಸದೆ ನಿರಂತರವಾಗಿ ಬಡವರ ಸಮಸ್ಯೆಗಳ ಪರಿಹಾರಕ್ಕಾಗಿ ಇಡೀ ತಮ್ಮ ಜೀವನವನ್ನೇ ಮುಡಪಾಗಿಟ್ಟಂತಹ ಹೋರಾಟಗಾರ ಇಂತಹ ಹೋರಾಟಗಾರರ ಹಾದಿಯಲ್ಲಿ ಮೂಲಭೂತ ಸಮಸ್ಯೆಗಳ ಬಗ್ಗೆ ನಿಸ್ವಾರ್ಥವಾಗಿ ಫಲಿತ ಸಿಗುವವರೆವಿಗೂ ಹೋರಾಟಗಳನ್ನು ಮಾಡುವುದನ್ನು ಹೋರಾಟಗಾರರು ಮೈಗೂಡಿಸಿಕೊಳ್ಳಬೇಕಾಗಿದೆ.
ಈ ಸಂದರ್ಭದಲ್ಲಿ ಪ್ರಜಾ ಸಂಘರ್ಷ ಸಮಿತಿಯ ಚೆನ್ನರಾಯಪ್ಪ, ನಲ್ಲಪರೆಡ್ಡಿಪಲ್ಲಿ ಅರ್.ಎನ್ .ರಾಜು, ಗೋಪಾಲಕೃಷ್ಣ, ಜುಬೇರ್, ಎಲ್.ವೆಂಕಟೇಶ್, ಟಿ.ವೆಂಕಟೇಶ್, ಜಿ.ಎಂ.ರಾಮಕೃಷ್ಣಪ್ಪ ಮತ್ತಿತರರು ಇದ್ದರು.