ಸಿಂಧಗಿ, ಹಾನಗಲ್ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಟೀಕಿಸಿದ್ದ ಸಿದ್ದರಾಮಯ್ಯಗೆ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ
ಎತ್ತಿನಹೊಳೆ ಯೋಜನೆಯಿಂದ ಯಾರ ಕಿಸೆ ತುಂಬಿಸಿದ್ದೀರಿ ಸಿದ್ದರಾಮಯ್ಯ ಎಂದು ಪ್ರಶ್ನಿಸಿದ ದಳಪತಿ
ಬೆಂಗಳೂರು: ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್ ಕೊಡುವುದು ಬಿಡುವುದು ನಮ್ಮ ಪಕ್ಷದ ಆಂತರಿಕ ವಿಚಾರ. ಅವರಿಗೆ ಟಿಕೆಟ್ ಕೊಡಿ, ಇವರಿಗೆ ಟಿಕೆಟ್ ಕೊಡಿ ಎಂದು ಹೇಳಲು ಸಿದ್ದರಾಮಯ್ಯ ಯಾರು? ಹೂ ಈಸ್ ಸಿದ್ದರಾಮಯ್ಯ?
ಹೀಗೆ ಖಾರವಾಗಿ, ಆಕ್ರೋಶದಿಂದ ಪ್ರಶ್ನೆ ಮಾಡಿದವರು ಜೆಡಿಎಸ್ ಪಕ್ಷದ ವರಿಷ್ಠ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಇದು ನಮ್ಮ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಇದು ನಮ್ಮ ನಿಲುವೂ ಕೂಡ. ಈ ಉಸಾಬರಿ ಸಿದ್ದರಾಮಯ್ಯ ಅವರಿಗೆ ಯಾಕೆ ಎನ್ನುವುದು ನನ್ನ ಪ್ರಶ್ನೆ” ಎಂದರು.
ಮುಂದುವರಿದು ಅವರು ಹೇಳಿದ್ದಿಷ್ಟು
ಮುಸ್ಲಿಂ ಅಭ್ಯರ್ಥಿ ಹಾಕಿದರೆ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಅಂತ ಆರೋಪ ಮಾಡುತ್ತಾರೆ. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ ಅನ್ನುತ್ತಾರೆ. ಓಬಿಸಿ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಹೊರಟಿದ್ದಾರೆ ಎನ್ನುತ್ತಾರೆ. ಹಾಗಾದರೆ ನಾವು ಯಾರನ್ನು ಅಭ್ಯರ್ಥಿ ಮಾಡಬೇಕು? ಪ್ರತಿಯೊಂದಕ್ಕೂ ಈ ದೊಣ್ಣೆ ನಾಯಕನ ಅಪ್ಪಣೆ ಪಡೆಯಬೇಕೆ? ಬೇರೆಯವರ ಮರ್ಜಿಗೆ ತಕ್ಕಂತೆ ನಾವು ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕೆ?
ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಟಿಕೆಟ್ ಕೊಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಆ ಸಮುದಾಯಕ್ಕೆ 20ಕ್ಕೂ ಹೆಚ್ಚು ಟಿಕೆಟ್ ನೀಡುತ್ತೇವೆ.
ಸಿದ್ದರಾಮಯ್ಯ ಅವರನ್ನು ಕೇಳಿಕೊಂಡು ಟಿಕೆಟ್ ಕೊಡಬೇಕಾ? ಯಾರನ್ನು ಅಭ್ಯರ್ಥಿ ಮಾಡಬೇಕು? ಮಾಡಬಾರದು? ಎನ್ನುವುದು ನಮ್ಮ ವಿವೇಚನೆ. ನಮಗೆ ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳುವುದಕ್ಕೆ ಸಿದ್ದರಾಮಯ್ಯ ಯಾರು ಎನ್ನುವುದು ಮತ್ತೆ ಮತ್ತೆ ನಾನು ಕೇಳುವ ಪ್ರಶ್ನೆ.
ನಾವು ಎಲ್ಲರಿಗಿಂತ ಮೊದಲೇ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ಸ್ವಂತ ಅಭ್ಯರ್ಥಿಗಳ ದಿಕ್ಕಿಲ್ಲ. ಇನ್ನೂ ಮೀನಾಮೇಷ ಎಣಿಸುತ್ತಿವೆ.
ಜಾತಿ ರಾಜಕೀಯ ಮಾಡಬಾರದು ಅಂತ ಅದೇ ಕಾಂಗ್ರೆಸ್ ಪಕ್ಷದವರೇ ಹೇಳುತ್ತಾರೆ. ಇವರು ನೋಡಿದರೆ ಮಾಡೋದು ಜಾತಿ ರಾಜಕೀಯವನ್ನೇ. ಒಕ್ಕಲಿಗ ಸಮುದಾಯದವರು ನಮ್ಮನ್ನು ಕೈ ಬಿಡೋದಿಲ್ಲ. ಇದು ಅವರಿಗೆ ಗೊತ್ತಿರಲಿ. ಈಗ ಮತ್ತೆ ನಮ್ಮ ಸಮುದಾಯದ ನಾಯಕರನ್ನು ಹೈಜಾಕ್ ಮಾಡಲು ಹೊರಟಿದ್ದಾರಲ್ಲ? ಅದನ್ನು ಏನಂತಾರೆ? ಅದು ಯಾವ ಸೀಮೆ ರಾಜಕೀಯ? ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 38-40 ಸೀಟಿಗೆ ಬಂದು ನಿಲ್ಲುತ್ತದೆ.
ʼಸಿದ್ದಹಸ್ತʼ ನಾಯಕರು ನಮ್ಮ ವಿರುದ್ಧ ಟೀಕೆ ಮಾಡಿದ್ದಾರೆ. ನಾವು ರೈತರ ಮಕ್ಕಳು, ನಮ್ಮನ್ನು ನಂಬಿ. ಅವರು ಮಣ್ಣಿನ ಮಕ್ಕಳು, ನಂಬಬೇಡಿ ಅಂತ ಕೋಲಾರದಲ್ಲಿ ಹೇಳಿದ್ದಾರೆ. ಆದರೆ, ಜನರಿಗೆ ಯಾರನ್ನು ನಂಬಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅವರಿಗೆ ನಂಬಿಕೆ ಇಲ್ಲದ ಕಾರಣಕ್ಕೆ ನಮ್ಮ ಪಕ್ಷದ ನಾಯಕರನ್ನು ಎಗರಿಸಿಕೊಂಡು ಹೋಗುತ್ತಿದ್ದಾರೆ.
ನಮ್ಮ ಸರಕಾರ ಬಂದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುತ್ತೇವೆ ಎಂದು ಮತ್ತೆ ಬರುಡೆ ಬಿಡುತ್ತಿದ್ದಾರೆ. ಇಷ್ಟು ದಿನ ಹರಿದ ನೀರೆಲ್ಲಿ? ಎತ್ತಿನಹೊಳೆ ಯೋಜನೆ 8 ಸಾವಿರದಿಂದ ಈಗ 24 ಸಾವಿರ ಕೋಟಿಗೆ ಹೋಗಿದೆ. ಈ ಯೋಜನೆ ಹೆಸರಿನಲ್ಲಿ ಯಾರ ಕಿಸೆ ತುಂಬಿಸಿದ್ದೀರಿ ಸಿದ್ದರಾಮಯ್ಯ? ಕೋಲಾರ, ಚಿಕ್ಕಬಳ್ಳಾಪುರಕ್ಕೆ ಅನ್ಯಾಯ ಮಾಡಿದ್ದೇನೆ ಅಂತಾರೆ. ನೀವೇನು ಕಿಸಿದಿದ್ದೀರಿ? ಎಲ್ಲವೂ ಜನರಿಗೆ ಗೊತ್ತಿದೆ.