ಎಸ್ ಎಂ ಕೃಷ್ಣ ಕೇವಲ ರಾಜಕಾರಣಿ ಅಷ್ಟೇ ಅಲ್ಲ, ಸಾಂಸ್ಕೃತಿಕ ಲೋಕದ ರಾಯಭಾರಿ ಎಂದ ಹೆಚ್.ವಿಶ್ವನಾಥ್
ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರನ್ನು ಅವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈ ವರೆಗೂ ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿಗಳು, ಸಾಧಕರನ್ನು ಆಹ್ವಾನಿಸಲಾಗುತ್ತಿತ್ತು. ಆದರೆ ಈ ವರ್ಷ ಸರ್ಕಾರ ಹಿರಿಯ ರಾಜಕೀಯ ಮುತ್ಸದ್ದಿಗೆ ಅವಕಾಶ ನೀಡುವ ಮೂಲಕ ರಾಜಕಾರಣಿಗಳ ಬಗ್ಗೆ ಇದ್ದ ಸಮೂಹ ಸನ್ನಿಯನ್ನು ಹೋಗಲಾಡಿಸಿದೆ ಎಂದರು.
ದಸರಾ ಉದ್ಘಾಟನೆಗೆ ಎಸ್. ಎಂ. ಕೃಷ್ಣರನ್ನು ಆಯ್ಕೆ ಮಾಡಿ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆಂದು ವಿಶ್ವನಾಥ್ ಹೇಳಿದರು.
ಎಸ್ ಎಂ ಕೃಷ್ಣರವರು ಕೇವಲ ರಾಜಕಾರಣಿಯಾಗಿರದೇ, ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದಾರೆ. ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಉತ್ತಮ ಬೆಳವಣಿಗೆ ಆಗಿದೆ ಎಂದರು.
ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಐಟಿಬಿಟಿ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಯಿತು. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಜಾಗತೀಕವಾಗಿ ಗುರುತಿಸಿಕೊಳ್ಳುವಂತಾಯಿತು. ಶಿಸ್ತು ಸಂಯಮಕ್ಕೆ ಹೆಸರಾಗಿರುವ ಕೃಷ್ಣರವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ದಸರಾಕ್ಕಿರುವ ಮಹತ್ವದಷ್ಟೇ ಕೃಷ್ಣರವರ ಮಹತ್ವವನ್ನು ಸಾರುತ್ತಿದೆ ಎಂದರು.