ಕೆರೆ ಕೋಡಿ ನೋಡಲು ಓಡೋಡಿ ಬಂದ ಪ್ರವಾಸಿಗರು
By GS Bharath Gudibande
ಗುಡಿಬಂಡೆ: ನಾಲ್ಕೈದು ವರ್ಷಗಳ ಬಳಿಕ ರಾಜ್ಯಲ್ಲಿಯೇ 4ನೇ ಅತಿ ದೊಡ್ಡ ಕೆರೆಯಾದ ಇಲ್ಲಿನ ಅಮಾನಿ ಭೈರಸಾಗರ ಕೆರೆ ಕೋಡಿ ಹರಿದಿದೆ.
ಕಳೆದ ತಿಂಗಳಿಂದ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಇಂದು ಕೆರೆ ಕೋಡಿ ಹೋಗಿದ್ದು, ತಾಲೂಕಿನ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಆಕಾಶದಿಂದ ನೋಡಿದರೆ ಭಾರತದ ಭೂಪಟದಂತೆ ಕಾಣುವ ಅಮಾನಿ ಭೈರಸಾಗರ ಕೆರೆಯು ಸುತ್ತಲೂ ಹಸಿರು ಆವರಿಸಿಕೊಂಡು ನಡುವೆ ವಿಶಾಲವಾದ ನೀರಿನ ಸಾಗರದಂತೆ ಕಾಣಿಸುತ್ತದೆ. ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿ ನಿರ್ಮಾಣವಾಗಿರುವ ಕೆರೆಕಟ್ಟೆ ಮೇಲೆ ಸಾಗಿದರೆ ಎಂಥವರಿಗೂ ಆಹ್ಲಾದಕರವಾದ ಅನುಭವ ಸಿಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಕೆರೆಗಳಲ್ಲಿ ಒಂದಾಗಿರುವ ಅಮಾನಿ ಭೈರಸಾಗರವು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು; ಅದರ ಜತೆಗೆ ಒಂದೆಡೆ ಹಸಿರ ಸಿರಿ, ಇನ್ನೊಂದೆಡೆ ಐತಿಹಾಸಿಕ ತಾಣಗಳು, ಏಳುಸುತ್ತಿನ ಕೋಟೆಯ ಸುರಸದ್ಮಗಿರಿ, ಜತೆಗೆ ಸಾಲು ಸಾಲು ಗಿರಿ ಶ್ರೇಣಿ ಕಣ್ಮನ ಸೆಳೆಯುತ್ತದೆ.
ಇವೆಲ್ಲವುಗಳಿಗೆ ಕಲಶ ಇಟ್ಟಂತೆ ಪಟ್ಟಣಕ್ಕೆ ಪ್ರವೇಶ ಪಡೆಯುವ ಮುನ್ನವೇ ಎದುರಾಗುವ ಈ ಕೆರೆ ಒಮ್ಮೆಲೆ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ.
ಎಲ್ಲಿದೆ ಈ ಕೆರೆ?
ಈ ಕೆರೆ ನೋಡಲು ಹೋಗಬೇಕಾದರೆ ಚಿಕ್ಕಬಳ್ಳಾಪುರ ನಗರದಿಂದ 35 ಕಿ.ಮೀ. ಕ್ರಮಿಸಿ ಗುಡಿಬಂಡೆ ಪಟ್ಟಣಕ್ಕೆ ಹೋಗಬೇಕು. ಬೆಂಗಳೂರಿನಿಂದ ಕೇವಲ 100 ಕಿ.ಮೀ ದೂರದಲ್ಲಿದೆ. ಗುಡಿಬಂಡೆದ ಮೇಲೆ ಹತ್ತಿದರೆ ಭಾರತದ ಭೂಪಟದಂತೆ ಕಾಣುವ ಈ ಕೆರೆಯನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ.
ಐತಿಹಾಸಿಕ ಕೆರೆ ಕಥೆ
ಸುಮಾರು 400 ವರ್ಷಗಳ ಹಿಂದೆ ಈ ಪ್ರದೇಶವನ್ನಾಳಿದ ಹಾವಳಿ ಭೈರೇಗೌಡರು ಕಟ್ಟಿಸಿದ ಕೆರೆ ಇದು. ಜನರ ಹಿತ ಕಾಯುತ್ತಿದ್ದ ಕ್ರಾಂತಿಕಾರಿ ಮನೋಭಾವದ ಪಾಳೇಗಾರನಾಗಿದ್ದ. ಆತನ ದೂರದೃಷ್ಟಿ ಪ್ರತೀಕವೇ ಗುಡಿಬಂಡೆ ಬೆಟ್ಟದ ಏಳು ಸುತ್ತಿನಕ ಓಟೆ, ಅಮಾನಿ ಭೈರಸಾಗರ ಕೆರೆ ಇತ್ಯಾದಿ.
ಪ್ರಾಂತೀಯ ಮನೋಭಾವನೆ ಹೆಚ್ಚಾಗಿದ್ದ ಅಂದಿನ ಕಾಲದಲ್ಲಿ ನಿರ್ಮಾಣವಾದ ಈ ಕೆರೆ ಕಾಕತಾಳೀಯ ಎಂಬಂತೆ ಕ್ರಮೇಣ ರಾಷ್ಟ್ರೀಯ ಸಮಗ್ರತೆಯನ್ನು ಸಾರುವ ಭಾರತದ ಭೂಪಟದಂತೆ ರೂಪುಗೊಂಡಿದೆ. ಬರಪೀಡಿತ ಪ್ರದೇಶವಾದ ಗುಡಿಬಂಡೆಗೆ ಈ ಕೆರೆಯೇ ಜೀವಾಳ. ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹಚ್ಚಿಕೊಂಡು, ಅಭಿವೃದ್ಧಿ ಕಾಣದಿರುವ ಗುಡಿಬಂಡೆ ಜನರಿಗೆ ಅಂದಿನಿಂದ ಇಂದಿನವರೆಗೂ ಭೈರಸಾಗರದ ನೀರೇ ಜೀವಜಲ.
ಕೆರೆಗೆ ಹಾರ
ನಾವು ಪಠ್ಯದಲ್ಲಿ ಓದಿದಂತೆ ಕೆರೆಗೆಹಾರದ ಕಥೆಯೂ ಇಲ್ಲಿಯೂ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಕೆರೆಯ ನಿರ್ಮಾಣ ಕಾಲದಲ್ಲಿ ನೀರಿನ ರಭಸಕ್ಕೆ ಕೆರೆ ಕಟ್ಟೆಯು ನಿಲ್ಲದೆ ಪದೇಪದೆ ಒಡೆದು ಹೋಗುತ್ತಿತ್ತು. ಇದನ್ನು ನಿಲ್ಲಿಸಬೇಕೆಂದರೆ ಒಬ್ಬ ಗರ್ಭಿಣಿ ಹೆಂಗಸನ್ನು ಕೆರೆಗೆ ಬಲಿ ಕೊಡಬೇಕೆಂದು ಹಿರಿಯರು ಸಲಹೆ ನೀಡಿದರಂತೆ. ಯಾರ ಬಲವಂತ, ಒತ್ತಾಯವಿಲ್ಲದೆ ಸ್ವ ಇಚ್ಚೆಯಿಂದ ಬಲಿಯಾಗಬೇಕೆಂಬುದು ನಂಬಿಕೆ ಇತ್ತಂತೆ. ಅದರಂತೆ ಬಲಿಗೆ ಹುಡುಕಾಟ ನಡೆಸಿದ ಪಾಳೇಯಗಾರರಿಗೆ ಅಂಥ ಮಹಿಳೆ ಸಿಗದಿದ್ದಾಗ ಚಿಂತೆಗೀಡಾಗಿದ್ದ ಭೈರೇಗೌಡರ ಮನದಾಳವನ್ನು ಅರಿತ ಅವರ ಗರ್ಭಿಣಿ ಸೊಸೆ ಒಡ್ಡೆಮ್ಮ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಎಲ್ಲರಿಗೂ ಒಳ್ಳೆಯದಾಗುವುದಾದರೆ ತಾನು ಕೆರೆಗೆ ಅರ್ಪಣೆ ಮಾಡಿಕೊಳ್ಳಲು ಸಿದ್ದಳಾದಳು ಎಂಬ ಕಥೆ ಇದೆ.
ಅದರಂತೆ ಇಡೀ ಸಾವಿರಾರು ಜನರು ಸಂಭ್ರಮದ ನಡುವೆ ಆಕೆಗೆ ದೈವದಂತೆ ಪೂಜಿಸಿ, ಆಕೆಯನ್ನು ಕೆರೆಯ ಮಧ್ಯ ಭಾಗಕ್ಕೆ ಕರೆತಂದು ಶ್ರದ್ದಾಭಕ್ತಿಯಿಂದ ಪೂಜಿಸಲ್ಪಟ್ಟು, ಆಕೆ ಜೀವಂತವಿದ್ದಾಗಲೇ ಮಣ್ಣನ್ನು ಸುರಿದು ಕೆರೆಯ ಕಟ್ಟೆಯನ್ನು ಕಟ್ಟುತ್ತಾರೆಂದು ಹೇಳಲಾಗಿದೆ. ಅಂದಿನಿಂದ ಕೆರೆಯ ಕಟ್ಟೆಯು ಸುಭದ್ರವಾಗಿ ನಿಂತಿತು ಎಂದು ಹೇಳಲಾಗುತ್ತಿದೆ. ತನ್ನ ಮುತ್ತೈದೆತನವನ್ನು ಬಲಿಕೊಟ್ಟ ಆ ಸಾಧ್ವಿಯ ಸಲುವಾಗಿ ನೀರು ಕೆಂಪಾಯಿತು ಎಂದು ನಂಬಿದ ಜನತೆ ಈಗಲೂ ಕೆರೆ ಕಟ್ಟೆಯ ಮಧ್ಯಭಾಗದಲ್ಲಿ ಒಡ್ಡೆಮ್ಮ ಗುಡಿಗೆ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಪ್ರತಿ ವರ್ಷ ಗುಡಿಬಂಡೆ ಸುತ್ತಮುತ್ತಲಿನ ಜನರು ದೀಪಾರಾಧನೆ ಮಾಡಿ ಭಕ್ತಿಯಿಂದ ಒಡ್ಡೆಮ್ಮನನ್ನು ಪೂಜಿಸುತ್ತಾರೆ.
ಇಲ್ಲಿಗೆ 6 ಕಿ.ಮೀ ದೂರದಲ್ಲಿರುವ ಪಂಚಗಿರಿಗಳಲ್ಲೊಂದಾದ ಧೇನುಗಿರಿ (ಆವಲಕೊಂಡ)ಯಲ್ಲಿ ಉಗಮವಾಗುವ, ಕೇವಲ ಮಳೆಗಾಲದಲ್ಲಿ ಮಾತ್ರ ಹರಿಯುವ ʼಕುಶಾವತಿʼ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದೊಡ್ಡಕೆರೆ ಇದಾಗಿದ್ದು, ಅಂದಾಜಿನಂತೆ ಸುಮಾರು 300 ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರುಣಿಸುತ್ತದೆ. ಈ ಕೆರೆಯನ್ನೇ ನಂಬಿರುವ ರೈತರ ಹಸಿವನ್ನು ತಣಿಸುತ್ತಿದೆ.
ಕೋಡಿ ಹರಿದ ನೀರು ಎಲ್ಲಿಗೆ ಹೋಗುತ್ತದೆ?
ಈ ಕೆರೆ ತುಂಬಿದ ನಂತರ ಕೋಡಿ ಹರಿದ ನೀರು ತಾಲೂಕಿನ ದಪ್ಪರ್ತಿ, ಹಂಪಸಂದ್ರ, ಕಡೇಹಳ್ಳಿ ಮೂಲಕ ನೆರೆಯ ಆಂಧ್ರ ಪ್ರದೇಶದ ಚಿಲಮತ್ತೂರು, ಕೋಡೂರು ಮುಖಾಂತರ ಬುಕ್ಕಪಟ್ಟಣಂ ಕೆರೆ ಸೇರಿ ಪಾಲಾರ್ ನದಿ ಮೂಲಕ ಸಮುದ್ರ ಸೇರುತ್ತದೆ. ಇದಲ್ಲದೇ ಮತ್ತೊಂದು ಕಡೆ ಹರಿಯುವ ಕೋಡಿ ನೀರು ಪಕ್ಕದ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಕೆರೆಗೆ ಸೇರುತ್ತದೆ.
ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಕೆರೆ ಕುಂಟೆಗಳು ತುಂಬಿವೆ. ಪಟ್ಟಣದ ಅಮಾನಿ ಭೈರಸಾಗರ ಕೆರೆ ಕೋಡಿ ಹೋಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪ್ರವಾಸಿಗರು, ತಾಲೂಕಿನ ಜನರು, ಮಕ್ಕಳು, ಹಿರಿಯರು ಕೆರೆ ಕೋಡಿ ಬಳಿ ಬಂದು ಜಲರಾಶಿಯನ್ನು ಕಂಡು ಸಂಸತಸ ವ್ಯಕ್ತಪಡಿಸಿದರು.
ಸುಮಾರು 4-5 ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಹರಿಯುತ್ತಿರುವುದು ನಮಗೆ ಸಂತೋಷವಾಗಿದೆ. ಕೆರೆ ಕೋಡಿ ಹೋಗುತ್ತಿರುವ ವಿಷಯ ತಿಳಿದ ತಕ್ಷಣ ನಾವು ಮಕ್ಕಳ ಮತ್ತು ಕುಟುಂಬದ ಜತೆಗೆ ಬಂದು ಸ್ವಲ್ಪ ಸಮಯ ನೀರಿನಲ್ಲಿ ಆಟವಾಡಿದ್ದು ಖುಷಿ ನೀಡಿದೆ.
ಶ್ರೀನಾಥ್ ಜಿ.ವಿ., ಸ್ಥಳೀಯ
ಕೆರೆ ಕೋಡಿ ನೋಡಲು ಬಂದವರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಯಿತು.
ಕೆರೆ ಕೋಡಿಯಲ್ಲೇ ಲಸಿಕೆ
ವಿಶೇಷವೆಂದರೆ, ತಾಲೂಕು ಆಸ್ಪತ್ರೆ ಸಿಬ್ಬಂದಿ ಅಮಾನಿ ಭೈರಸಾಗರ ಕೋಡಿಯ ಬಳಿಯೇ ಲಸಿಕೆ ಪಡೆಯದೇ ಇದ್ದವರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಮತ್ತು ಸಿಬ್ಬಂದಿ ಅನೇಕರಿಗೆ ಲಸಿಕೆ ನೀಡಿದರು.