ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಬಿಚ್ಚಿಟ್ಟ ರಹಸ್ಯ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದ್ದೇಗೆ ಎಂದು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು;
ಜೆಡಿಎಸ್ ಅಧಿಕಾರಕ್ಕೆ ಬಂದರೆ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈ ಮನುಷ್ಯ ಆ ಕೆಲಸ ಹೇಗೆ ಮಾಡುತ್ತಾನೆ ಎಂದು ಅನ್ನಿಸುತ್ತಿತ್ತು. ವಿಧಿಯಾಟ ಬೇರೆ ಇತ್ತು. ಬಿಜೆಪಿ 106, ಕಾಂಗ್ರೆಸ್ 78 ಹಾಗೂ ಜೆಡಿಎಸ್ ಪಕ್ಷಕ್ಕೆ 37 ಸೀಟು ಬಂತು. ನಿಚ್ಚಳ ಬಹುಮತ ಕಳೆದ ಬಾರಿ ಯಾರಿಗೂ ಬರಲಿಲ್ಲ. ಆಗ ನಾನು ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿ ಅವರಿಗೆ ಹೇಳಿದ್ದೆ.
ಕಾಂಗ್ರೆಸ್ಗೆ ಹೆಚ್ಚು ಸೀಟುಗಳು ಬಂದಿದೆ. ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಅಭಾಸ ಆಗುತ್ತದೆ. ಹೀಗಾಗಿ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದಿದ್ದೆ. ಖರ್ಗೆ ಅವರು ಕೂಡ ಅದಕ್ಕೆ ಒಪ್ಪಿದ್ದರು. ಸೋನಿಯಾ ಗಾಂಧಿ ಅವರನ್ನು ಒಪ್ಪಿಸುತ್ತೇನೆ ಎಂದು ಗುಲಾಮ್ ನಬಿ ಆಜಾದ್ ಕೂಡ ಹೇಳಿದ್ದರು. ಆದರೆ ಮತ್ತೆ ಅವರೇ ಬಂದು ಕುಮಾರಸ್ವಾಮಿ ಸಿಎಂ ಆಗಬೇಕೆಂದು ನಮ್ಮನ್ನು ಒಪ್ಪಿಸಿದರು.
ನೂರಾರು ಸೀಟು ಇಟ್ಟುಕೊಂಡಿದ್ದ ಯಡಿಯೂರಪ್ಪ ವಿಪಕ್ಷ ನಾಯಕ ಆದರು. ಸಾಲ ಮನ್ನಾ ಮಾಡುತ್ತಿರಾ ಇಲ್ವಾ ಎಂದು ಏಕವಚನದಲ್ಲೇ ಮಾತನಾಡಿದ್ದರು. ಯಡಿಯೂರಪ್ಪ ಅವರು ಏಕವಚನದಲ್ಲಿ ಮಾತನಾಡಿದ್ದನ್ನು ಟಿವಿಯಲ್ಲೇ ನೋಡಿದ್ದೆ. ಅದೇ ರೀತಿ ಬಜೆಟ್ ವಿಷಯದಲ್ಲಿ ಕೂಡ ಸಿದ್ದರಾಮಯ್ಯ ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರ ಎಲ್ಲ ಭಾಗ್ಯಗಳನ್ನು ಮುಂದುವರಿಸಲು ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರ ಎಲ್ಲಾ ಷರತ್ತಿನ ಜೊತೆಗೆ ಕುಮಾರಸ್ವಾಮಿ ಸಾಲ ಮನ್ನಾ ಮಾಡಿದರು.
ಕುಮಾರಸ್ವಾಮಿ ಆರ್ಥಿಕ ತಜ್ಞ ಏನಲ್ಲ. ಸಿದ್ದರಾಮಯ್ಯ ಹಾಗೆ ಸಾಕಷ್ಟು ಬಾರಿ ಬಜೆಟ್ ಮಂಡಿಸಿಲ್ಲ. ಆದರೆ ಸಂಪನ್ಮೂಲ ಕ್ರೋಢೀಕರಿಸಿ ಕುಮಾರಸ್ವಾಮಿ ಸಾಲ ಮನ್ನಾ ಯೋಜನೆ ತಂದರು. ಹಿಂದಿನ ಎಲ್ಲ ಯೋಜನೆಗಳಿಗೆ ಹಣ ಹೊಂದಿಸಿದರು. ಹೇಳಿದ ಮಾತನ್ನು ಕುಮಾರಸ್ವಾಮಿ ಮಾಡುತ್ತಾರೆ ಎಂಬುದನ್ನು ಸಾಬೀತುಪಡಿಸಿದರು.
ಆರ್ಎಸ್ಎಸ್ ಸಂಘಟನೆಯನ್ನು ಹೊಗಳಿಲ್ಲ
ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ನಾನು ಆರ್ಎಸ್ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು. ಅಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು. ಬಾಂಕ್ವೆಟ್ ಹಾಲ್ನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು. ನಾನೇ ಬಾಂಕ್ವಟ್ ಹಾಲ್ ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು. ನಾನು ಆ ಸಭೆಯಲ್ಲೇ ಹೇಳಿದ್ದೆ. ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದಿದ್ದೆ. ನಾವು ತುರ್ತುಪರಿಸ್ಥಿತಿಗೆ ಬೆಂಬಲಿಸುತ್ತೇವೆ ಎಂದು ಹೇಳಿ ಅನೇಕರು ಬರೆದುಕೊಟ್ಟರು. ನನಗೂ ಆರ್ಎಸ್ಎಸ್ʼಗೂ ಏನ್ ಸಂಬಂಧ ಇದೆ. ಆರ್ಎಸ್ಎಸ್ ಬಗ್ಗೆ ನನಗೆ ಗಂಧಗಾಳಿ ಗೊತ್ತಿಲ್ಲ. ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು.
ಪಂಚರತ್ನ ಕಾರ್ಯಕ್ರಮ
ಏಳು ದಿನ ಕಾರ್ಯಾಗಾರ ಮಾಡಿದ್ದೇವೆ. ಕಾರ್ಯಾಗಾರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು. ನಾನು ಕೂಡ ಕಾರ್ಯಾಗಾರದಲ್ಲಿ ಏಳು ದಿನ ಭಾಗಿಯಾಗಿದ್ದೆ. ಕಾರ್ಯಾಗಾರದಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮದ ಬಗ್ಗೆ ಅವರೊಬ್ಬರೇ ಆಲೋಚಿಸಿ ಮಾಡಿದ್ದಾರೆ. ಕುಮಾರಸ್ವಾಮಿ ಅವರೇ ಸ್ವತಃ ಈ ಕಾರ್ಯಕ್ರಮ ಮಾಡಿದ್ದಾರೆ. ಇದು ತುಂಬಾ ಉತ್ತಮವಾದ ಕಾರ್ಯಕ್ರಮ. ಮಿಷನ್123 ನಮ್ಮ ಗುರಿ. 2023ಕ್ಕೆ ನಮ್ಮ ಪಕ್ಷಕ್ಕೆ ಶಕ್ತಿ ನೀಡಿದರೆ ಈ ಪಂಚರತ್ನ ಕಾರ್ಯಕ್ರಮವನ್ನು ಕೊಡುತ್ತೇನೆ ಎಂದು ಕುಮಾರಸ್ವಾಮಿ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಅಭ್ಯರ್ಥಿಯೇ ಬೇಕಾ?
ಹಾನಗಲ್ ಹಾಗೂ ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವಿ. ಬಸವಕಲ್ಯಾಣದಲ್ಲೂ ಮುಸ್ಲಿಂ ಅಭ್ಯರ್ಥಿ ಹಾಕಿದ್ದೆ. ನಾರಾಯಣರಾವ್ ಕೂಡ ನನ್ನ ಶಿಷ್ಯ. ಜಾತಿ ನೋಡಿ ನಾನು ಬೆಳೆಸಲಿಲ್ಲ. ಯಾರನ್ನೆಲ್ಲ ಬೆಳೆಸಿದ್ದೇನೆ ಎಂದು ಹೇಳಲ್ಲ. ಬಸವಕಲ್ಯಾಣದಲ್ಲಿ 50 ಸಾವಿರ ಮುಸ್ಲಿಂ ಮತಗಳಿವೆ. ಹೀಗಾಗಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ. ಅದಕ್ಕೂ ಮುನ್ನ ಖೂಬಾಗೆ ಟಿಕೆಟ್ ಆಫರ್ ಮಾಡಿದ್ದೆ. ಆದರೆ ಖೂಬಾ ಪಕ್ಷೇತರ ಅಭ್ಯರ್ಥಿ ಆಗುತ್ತೇನೆ ಎಂದಿದ್ದರೂ ಸಿಂಧಗಿಯಲ್ಲಿ ಮೊದಲು ಮನುಗೂಳಿಗೆ ರಾಜಕೀಯವಾಗಿ ಅವಕಾಶ ಕೊಟ್ಟಿದ್ದೆ ನಾನು. ಆದರೆ ಇವತ್ತು ಅವರ ಮಗ ಕಾಂಗ್ರೆಸ್ʼಗೆ ಹೋಗಿದ್ದಾರೆ. ಮನೆ ಮಗನಂತೆ ಬೆಳಸಿಕೊಂಡು ಬಂದೆ. ಸಂಕಷ್ಟದಲ್ಲೂ ಮಂತ್ರಿ ಮಾಡಿದೆವು. ಇಡೀ ಸಿಂದಗಿಗೆ ನೀರನ್ನು ಕೊಡಲೆಬೇಕು ಅಂತ ಮನಗೂಳಿ ಕಾಲವಾದ ನಂತರ ಅವರ ಮಗನನ್ನು ಕಾಂಗ್ರೆಸ್ ನಾಯಕರು ಕರೆದುಕೊಂಡು ಹೋದರು. ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ? ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ? ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ಮುಸ್ಲಿಂರನ್ನು ನೀವು ಗುತ್ತಿಗೆ ಪಡೆದಿಲ್ಲ. ನಾನು ಬೆಳೆಸಿದ್ದ ಮುಸ್ಲಿಂ ಮುಖಂಡ (ಜಮೀರ್) ಈಗ ಅವರ ಬಲಗೈ ಶಕ್ತಿ ಕೊಟ್ಟವರು. ಅವರನ್ನು ಬಲಗೈ ಭಂಟ ಎನ್ನಲ್ಲ.
ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರ್ತಾ ಇದೆ ಅಂತ ಗೊತ್ತಿದೆ. ನೆಹರು ಅವರ ನಂತರ ಕಾಲದಿಂದ ಕಾಲಕ್ಕೆ ಯಾವ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ನನ್ನನ್ನು ಕೆಣಕಲು ಹೋಗಬೇಡಿ. ಕೆಣಕಿದರೆ ಸರಿ ಇರಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದರು.