ಉತ್ತಮ ಜೀವನಕ್ಕೆ, ಉತ್ತಮ ದೇಶ ನಿರ್ಮಾಣಕ್ಕಾಗಿ ಕಾಲ್ನಡಿಗೆ
By Gs Bharath Gudibande
ಗುಡಿಬಂಡೆ: ನಾವು ಕುಡಿಯುವ ನೀರು, ಸೇವಿಸುವ ಆಹಾರ ಎಲ್ಲವೂ ಕಲುಷಿತ. ವಿಷಮಯ ಜೀವನ ನಡೆಸುತ್ತಿದ್ದೇವೆ. ಹಾಗಾಗಿ ಜನರು ತಮ್ಮ ಜೀವನದ ಅಭ್ಯಾಸವನ್ನು ಬದಲಿಸಿಕೊಳ್ಳಬೇಕು. ಬದಲಾವಣೆಗಾಗಿ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ಚಿಂತಕ ಬೆಂಗಳೂರಿನ ಹೆಚ್.ಕೆ.ವಿವೇಕಾನಂದ ತಿಳಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬುದ್ಧ ಸಮಾಜ ನಿರ್ಮಾಣದ ಜ್ಞಾನಭಿಕ್ಷಾ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾವಿ ಪ್ರಜೆಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಂದಿನ 15 ವರ್ಷಗಳಲ್ಲಿ ಸಮಾಜದ ಸ್ಥಿತಿ ಸಂಪೂರ್ಣ ಬದಲಾಗಿ ಜನರ ಜೀವನಮಟ್ಟ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ನಾವು ಎಚ್ಚೆತುಕೊಂಡು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ದಿಗ್ಗಜ ಕ್ರಿಕೆಟಿಗರ ಜಾಹಿರಾತಿನಿಂದ ಯುವಜನರು ಹಾಳು
ಭಾರತರತ್ನ ಪಡೆದ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ ಹಣಕ್ಕಾಗಿ ಜನರ ಜೀವನ ಹಾಳು ಮಾಡುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ನಟ-ನಟಿಯರು ಸಮಾಜಕ್ಕೆ ಆದರ್ಶರಾಗಬೇಕು. ಸಮಾಜ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡದೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ನೋವು ವ್ಯಕ್ತಪಡಿಸಿದರು.
ಸ್ವದೇಶಿ ವಸ್ತು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ
ಮುಂದಿನ 15 ವರ್ಷಗಳಲ್ಲಿ ಈಗಿನ ವಿದ್ಯಾರ್ಥಿಗಳೇ ಮುಖ್ಯವಾಹಿನಿಯಲ್ಲಿ ಇರುತ್ತಾರೆ. ಆದ್ದರಿಂದ ಮಕ್ಕಳು ವಿಷ ಇರುವ ತಂಪು ಪಾನೀಯಗಳ ಬದಲಿಗೆ ರೈತ ಬೆಳೆದ ಎಳನೀರು ಕುಡಿಯಬೇಕು. ಅದರಿಂದ ಇಲ್ಲಿನ ರೈತ ಉತ್ತಮ ಬದುಕು ಕಟ್ಟಿಕೊಳ್ಳುತ್ತಾನೆ. ಜತೆಗೆ ಜನರ ಆರೋಗ್ಯ ಸುಧಾರಿಸುತ್ತದೆ. ನಮ್ಮ ಮನೆಯನ್ನು ಮೊದಲು ದೇವಸ್ಥಾನ, ಬಸ್ ನಿಲ್ದಾಣ ಇತ್ಯಾದಿಗಳಿಂದ ಗುರುತಿಸುತ್ತಿದ್ದೆವು. ಈಗ ಬಾರ್ ಡಾಬಾಗಳಿಂದ ಗುರುತಿಸುವಷ್ಟು ಕೆಳಹಂತಕ್ಕೆ ಹೋಗುತ್ತಿದ್ದೇವೆ ಎಂದು ವಿವೇಕಾನಂದ ಅವರು ಬೇಸರ ವ್ಯಕ್ತಪಡಿಸಿದರು.
ಸಮಾಜದ ಸುಧಾರಣೆಗೆ ಸಹಕರಿಸಿ
ಪ್ರತಿ ಕ್ಷೇತ್ರದಲ್ಲೂ ಯಂತ್ರ ಮತ್ತು ತಂತ್ರಜ್ಞಾನ ಸುಧಾರಣೆ ಆಗುತ್ತಿದೆ. ಆದರೆ ನಮ್ಮ ಮಾನವೀಯ ಗುಣ, ಕರ್ತವ್ಯ, ವ್ಯಕ್ತಿತ್ವ ಕೆಳಗೆ ಬರುತ್ತಿದೆ. ಅದು ದೊಡ್ಡ ಆತಂಕಕಾರಿ. ಜ್ವಾನವನ್ನು ಬೆಳೆಸುವ ಗ್ರಂಥಾಲಯಗಳನ್ನು ಜನ ಮರೆಯುತ್ತಿದ್ದಾರೆ. ಮಾನಹಾನಿ ಮಾಡುವ ಬಾರ್ʼಗಳ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದು ಬದಲಾವಣೆ ಯಾಗಬೇಕು. ಇದಕ್ಕೆ ಇಂದಿನ ಮಕ್ಕಳಾದ ನಿಮ್ಮಿಂದ ಮಾತ್ರ ಸಾಧ್ಯ. ಇಂದಿನಿಂದಲೇ ಎಲ್ಲರೂ ಪ್ರಮಾಣ ಮಾಡಬೇಕು ಕೆಟ್ಟ ಅಭ್ಯಾಸಗಳನ್ನು, ದುಷ್ಚಟಗಳನ್ನು ಬಿಟ್ಟು ಮಾನವೀಯ ಮೌಲ್ಯಗಳಿಗೆ ಹೆಚ್ಚು ಮಹತ್ವ ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಯಾರು ಎಚ್.ಕೆ.ವಿವೇಕಾನಂದ?
ರಾಜ್ಯ ಕಂಡ ವಿಶಿಷ್ಟ ಶೈಲಿಯ ಬರಹಗಾರ, ಚಿಂತಕ. ಬೀದರ್ ಜಿಲ್ಲೆಯಿಂದ ಅವರ ಪಾದಯಾತ್ರೆ ಆರಂಭವಾಗಿದ್ದು, ಕಳೆದ 340 ದಿನಗಳಿಂದ ನಿರಂತರವಾಗಿ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡು ಗುರುವಾರದಂದು ಗುಡಿಬಂಡೆಗೆ ಬಂದಿದ್ದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ನಂತರ ಬಾಗೇಪಲ್ಲಿ ಕಡೆಗೆ ಹೊರಟರು.
ಈ ಸಂದರ್ಭದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್, ಉಪನ್ಯಾಸಕರಾದ ಮಂಜು ಭಾರ್ಗವಿ, ಬಿ.ಜೆ.ರಾಮಣ್ಣ, ಮೋಹನ್ ಕುಮಾರ್, ನಾಗರತ್ನ, ಚಂದುಶ್ರೀ, ಶಿಕ್ಷಕ ರಾಜಶೇಖರ್, ಮನೋಹರ್, ಹಿರಿಯ ಕವಿ ಪ್ರೆಸ್ ಸುಬ್ಬರಾಯಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಮಂಜುನಾಥ, ಪರಿಸರ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಭರತ್, ಮುಖಂಡ ಎಂಟಿಎಸ್ ಶ್ರೀನಾಥ್ ಕಾಲೇಜಿನ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಇಂದಿನ ಸಮಯದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ, ಆರೋಗ್ಯ ಸಮಾಜ ನಿರ್ಮಾಣ ಮಾಡಲು ಯುವಕರ ಪಾತ್ರದ ಬಗ್ಗೆ 24 ಜಿಲ್ಲೆಗಳಲ್ಲಿ ಕಾಲ್ನಡಿಗೆ ಮೂಲಕ 10 ಸಾವಿರ ಕಿಮೀ ದೂರ ಕ್ರಮಿಸಿ ಪ್ರತಿ ಸ್ಥಳದಲ್ಲಿ ಅರಿವು ಮೂಡಿಸುತ್ತಿರುವ ವಿವೇಕಾನಂದ ಅವರ ಕಾರ್ಯ ಶ್ಲಾಘನೀಯ.
ಕಾರ್ಗಿಲ್ ವಿ.ಲಕ್ಷ್ಮೀನಾರಾಯಣ, ಜಿಂಟಿ ಕಾರ್ಯದರ್ಶಿ, ಮಾಜಿ ಸೈನಿಕರ ಸಂಘ, ಚಿಕ್ಕಬಳ್ಳಾಪುರ ಜಿಲ್ಲೆ