ಎತ್ತಿನಹೊಳೆ ನೀರು ಬರದಿದ್ದರೆ ಜನ ಕೊರಳುಪಟ್ಟಿ ಹಿಡ್ಕೋತಾರೆ
ಸಕಲೇಶಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರು ಇನ್ನೆಷ್ಟು ದಿನ ಕೊಳಚೆ ನೀರು ಕುಡಿಯಬೇಕು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು; ಎತ್ತಿನಹೊಳೆ ಯೋಜನೆ ಟೇಕಾಫ್ ಆಗಿ 8-9 ವರ್ಷವಾಗಿದೆ. ದಶಮಾನೋತ್ಸವ ಹತ್ತಿರದಲ್ಲೇ ಇದೆ. ಕೆಸಿ ವ್ಯಾಲಿ, ಹೆಚ್.ಎನ್.ವ್ಯಾಲಿ ನೀರಿನ ಅಪಾಯ ಹೇಗಿರುತ್ತದೆ ಎಂಬುದು ಮುಂದೆ ಗೊತ್ತಾಗುತ್ತದೆ ಎಚ್ಚರಿಸಿದರು.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಬೆಂಗಳೂರು ನೀರು ಕೊಟ್ಟೆವು ಎಂದು ಉದ್ದುದ್ದ ಭಾಷಣ ಮಾಡುತ್ತಾರೆ. ನಮ್ಮ ಪಕ್ಷದಿಂದಲೇ ಗೆದ್ದವರೊಬ್ಬರು ಕುಮಾರಸ್ವಾಮಿ ಅವರು ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಾರೆ ಎಂದು ಹೇಳಿದ್ದಾರೆ. ಅವರ ಮನೆಗೆ ಕೆಸಿ ವ್ಯಾಲಿ ಮೂಲಕ ಬಂದು ಕೆರೆಗಳಿಗೆ ಬಂದು ತುಂಬುವ ನೀರನ್ನು ಕಳಿಸುವುದು ಒಳ್ಳೆಯದು. ಅದನ್ನು ಅವರು ಬಳಸಿ ನೋಡಬೇಕು” ಎಂದು ಪರೋಕ್ಷವಾಗಿ ಕೋಲಾರ ಶಾಸಕ ಶ್ರೀನಿವಾಸ ಗೌಡರಿಗೆ ಹೆಚ್ಡಿಕೆ ಬಿಸಿ ಮುಟ್ಟಿಸಿದರು.
ನೀರಿನ ವಿಷಯದಲ್ಲಿ ನಾನು ಲಘುವಾಗಿ ಮಾತನಾಡಲ್ಲ. ಜನರ ಜೀವ ಮುಖ್ಯ. ಅವರ ಬದುಕಿನ ಜತೆ ಚೆಲ್ಲಾಟ ಆಡೋದು ಬೇಡ. ಚಿಲ್ಲರೆ ರಾಜಕಾರಣ ಮಾಡುವುದು ನನ್ನ ಜಾಯಮಾನವಲ್ಲ ಎಂದು ಅವರು ಕುಟುಕಿದರು.
ನೀರು ಬರದಿದ್ದರೆ ಜನ ಕೊರಳುಪಟ್ಟಿ ಹಿಡ್ಕೋತಾರೆ
ಎರಡೂ ಜಿಲ್ಲೆಗಳಿಗೆ ಮಾತು ಕೊಟ್ಟಿರುವುದು ಸಿದ್ದರಾಮಯ್ಯ ಅವರೇ. ಅವರೇ ಸರಕಾರದ ಮೇಲೆ ಒತ್ತಡ ಹೇರಿ ಯೋಜನೆ ಬೇಗ ಮುಗಿಯುವಂತೆ ನೋಡಿಕೊಳ್ಳಬೇಕು. ಕೆಲ ದಿನಗಳ ಹಿಂದೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ದೊಡ್ಡ ಭಾಷಣ ಮಾಡಿ, ಎತ್ತಿನಹೊಳೆ ರೂವಾರಿ ನಾನೇ, 14,000 ಕೋಟಿ ರೂ. ಕೊಟ್ಟಿದ್ದು ನಾನೇ ಎಂದು ಹೇಳಿದವರು ಯಾರು? ನಾಳೆ ಜನರಿಗೆ ಉತ್ತರ ಕೊಡಬೇಕಾದವರು ಇವರೆ. ಜನ ಕಾಯುವಷ್ಟು ದಿನ ಕಾಯುತ್ತಾರೆ, ತಾಳ್ಮೆಗೆಟ್ಟರೆ ಕುತ್ತಿಗೆಗೆ ಕೈಹಾಕುತ್ತಾರೆಂದು ಅವರು ಎಚ್ಚರಿಕೆ ನೀಡಿದರು.
ಸಮ್ಮಿಶ್ರ ಸರಕಾರದಲ್ಲಿ ಸ್ವಾತಂತ್ರ್ಯವಿಲಿಲ್ಲ
ಹದಿನಾಲ್ಕು ತಿಂಗಳ ಕಾಲ ಸಮ್ಮಿಶ್ರ ಸರಕಾರದಲ್ಲಿ ನನಗೆ ಜನಪರವಾಗಿ ಕೆಲಸ ಮಾಡಲು ಸ್ವಾತಂತ್ರ್ಯ ಇರಲಿಲ್ಲ. ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ನಾಯಕರು ಅಡ್ಡಿಪಡಿಸುತ್ತಿದ್ದರು. ಆಗ ಜಲ ಸಂಪನ್ಮೂಲ ಇಲಾಖೆ ಕಾಂಗ್ರೆಸ್‌ನವರ ಕೈಯ್ಯಲ್ಲಿತ್ತು. ಒಬ್ಬ ಅಧಿಕಾರಿಯನ್ನು ಅಲ್ಲಿಗೆ ಪೋಸ್ಟಿಂಗ್ ಮಾಡಬೇಕಾದರೂ ಅವರ ಅನುಮತಿ ಪಡೆಯಬೇಕಿತ್ತು. ಇನ್ನು, ಯೋಜನೆಗಳನ್ನು ಅವರ ಹಂತದಲ್ಲಿ ಫೈನಲ್ ಮಾಡಿಕೊಂಡು ಆಮೇಲೆ ಮುಖ್ಯಮಂತ್ರಿ ಬಳಿ ಬರುತ್ತಿದ್ದರು ಎಂದು ಸಮ್ಮಿಶ್ರ ಸರಕಾರದಲ್ಲಿ ತಾವು ಎದುರಿಸಿದ ಉಸಿರುಗಟ್ಟುವ ವಾತಾವರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.