ಕೆರೆಗೆ ಹರಿಯಬೇಕಾದ ನೀರು ರಸ್ತೆ, ತೋಟಗಳಿಗೆ ನುಗ್ಗುತ್ತಿದೆ!!; ಚಿಕ್ಕಬಳ್ಳಾಪುರದಲ್ಲಿ ಅವೈಜ್ಞಾನಿಕ, ಅಕ್ರಮ ಯೋಜನೆಗಳಿಗೆ ಹಣದ ಹೊಳೆ
ಚಿಕ್ಕಬಳ್ಳಾಪುರ: ರಿಯಲ್‌ಎಸ್ಟೇಟ್ ಕುಳಗಳ ಕಾಕದೃಷ್ಟಿ ಹಾಗೂ ಕೆರೆಗಳ ಒತ್ತುವರಿ ಕಾರಣಕ್ಕೆ ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ರಸ್ತೆಗಳು ಹಳ್ಳಕೊಳ್ಳಗಳಾಗಿದ್ದು, ಜನರು ತೀವ್ರ ಇಕ್ಕಟ್ಟಿಗೆ ಒಳಗಾಗಿದ್ದಾರೆ.
ಕೆಲ ವರ್ಷಗಳಿಂದ ಈಚೆಗೆ ನಗರದಲ್ಲಿ ಅಕ್ರಮ ಯೋಜನೆಗಳು, ಸರಕಾರಿ ಪ್ರಾಯೋಜಿತ ಒತ್ತುವರಿಗಳು ಹಾಗೂ ಕೆರೆಗಳ ಆಕ್ರಮಣ ಹೆಚ್ಚಾಗಿದ್ದು, ಅದರ ಪರಿಣಾಮ ರಾಜಕಾಲುವೆಗಳು ಮುಚ್ಚಿಹೋಗಿದ್ದು ಆ ಕಾಲುವೆಗಳಲ್ಲಿ ಹರಿಯಬೇಕಾದ ಮಳೆ ನೀರು ಬಡಾವಣೆಗಳಿಗೆ ನುಗ್ಗಿ ರಸ್ತೆಗಳ ಮೇಲೆ ಹರಿಯುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಗೊಂಡಿರುವ ಅಕ್ರಮ, ಅನಧಿಕೃತ ಯೋಜನೆಗಳಿಂದ ಜನರು ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳುತ್ತಿದ್ದು, ಹೊಳೆಯಂತೆ ಹರಿಯುತ್ತಿರುವ ಹಣ ಗುತ್ತಿಗೆದಾರರ ಜೇಬು ಸೇರುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಜಿಲ್ಲಾಡಳಿತದ ಜತೆಗೆ ಚಿಕ್ಕಬಳ್ಳಾಪುರ ನಗರಸಭೆ ರೂಪಿಸುತ್ತಿರುವ ಅವೈಜ್ಞಾನಿಕ, ಅಸಮರ್ಪಕ ಯೋಜನೆಗಳು ಜನರಿಗೆ ವರವಾಗುವ ಬದಲು ಶಾಪವಾಗುತ್ತಿವೆ. ಸರಿಯಾದ ಪ್ಲ್ಯಾನ್ ಇಲ್ಲದೆ ಕೇವಲ ತಮಗೆ ಬೇಕಾದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕೆ ಅನಗತ್ಯ ಯೋಜನೆಗಳನ್ನು ರೂಪಿಸಿ ಅತ್ತ ಹಣವನ್ನು ಪೋಲು ಮಾಡುವುದರ ಜತೆಗೆ, ಇತ್ತ ಜನರಿಗೂ ಭಾರೀ ತೊಂದರೆ ಮಾಡುವ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ.
ಚಿಕ್ಕಬಳ್ಳಾಪುರ ನಗರದಲ್ಲಿ ರಸ್ತೆಗಳು ಹೊಂಡಗಳಾಗಿ ಬದಲಾಗಿದ್ದರೂ ಅವುಗಳನ್ನು ದುರಸ್ಥಿ ಮಾಡಲು ಗಮನ ಹರಿಸದ ಸರಕಾರದ ಕೋಟ್ಯಂತರ ರೂಪಾಯಿಗಳನ್ನು ಅವೈಜ್ಞಾನಿಕ ಯೋಜನೆಗಳ ಮೇಲೆ ಮನಸೋಇಚ್ಛೆ ಸುರಿಯುತಿದೆ ಎಂದು ಚಿಕ್ಕಬಳ್ಳಾಪುರದ ಬಿಜೆಪಿ ನಾಯಕರೊಬ್ಬರು ಸಿಕೆನ್ಯೂಸ್‌ನೌ ಜತೆ ಮಾತನಾಡುತ್ತಾ ದೂರಿದರು.
ಉಸ್ತುವಾರಿ ಸಚಿವರ ಬೆಂಬಲ
ಜಿಲ್ಲಾ ಸಚಿವ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಇಂಥ ಅವೈಜ್ಞಾನಿಕ ಯೋಜನೆಗಳಿಗೆ ಅತಿ ಉತ್ಸಾಹದಿಂದ ಪ್ರೋತ್ಸಾಹ ನೀಡುತ್ತಿದ್ದು, ಜಿಲ್ಲಾಡಳಿತ ಹಾಗೂ ನಗರಸಭೆ ಆಡಳಿತಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದು ಅವರು ಆರೋಪಿಸುತ್ತಾರೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಆ ಬಗ್ಗೆ ಜಿಲ್ಲಾಡಳಿತ ಅಲಕ್ಷ್ಯ ತೋರುತ್ತಿದೆ ಎಂಬ ದೂರಿದೆ.
ಮಳೆ ಅಬ್ಬರಕ್ಕೆ ಚಿಕ್ಕಬಳ್ಳಾಪುರ ತತ್ತರ
ಚಿಕ್ಕಬಳ್ಳಾಪುರವು ರಾಜ್ಯದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲಾ ಕೇಂದ್ರವಾಗಿದ್ದು, ಭೂಗಳ್ಳರಿಗೆ ಅಧಿಕಾರಶಾಹಿಗೆ ಮತ್ತು ರಾಜಕಾರಣಿಗಳಿಗೆ ಲೂಟಿ ಹೊಡೆಯಲು ಪ್ರಶಸ್ತ್ಯ ತಾಣವಾಗಿದೆ. ಅತ್ಯಂತ ಸೂಕ್ಷ್ಮ ಜೀವಿವೈವಿಧ್ಯ ತಾಣವಾದ ನಂದಿಬೆಟ್ಟದ ಸುತ್ತ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಒಂದೆಡೆಯಾದರೆ, ರಿಯಲ್ ಎಸ್ಟೇಟ್ ದಂಧೆಗೆ ಕುಮ್ಮಕ್ಕು ನೀಡುತ್ತಾ ಸ್ಥಳೀಯರನ್ನು ಬೀದಿಪಾಲು ಮಾಡಿ ಅವರ ಜಮೀನುಗಳನ್ನು ಉಳ್ಳವರಿಗೆ ಪರಭಾರೆ ಮಾಡಿಸುತ್ತಿರುವ ಬೃಹತ್‌ಜಾಲವೇ ಇಲ್ಲಿ ಕಾರ್ಯಪ್ರವೃತ್ತವಾಗಿದೆ. ಅಲ್ಲಿನ ಭೂಮಿಗಳ ಮೇಲೆ ಬೇನಾಮಿಗಳ ಹೂಡಿಗೆ ಹೆಚ್ಚಾಗುತ್ತಿದೆ ಎಂದು ಕೆಲ ದಿನಗಳ ಹಿಂದೆ ನಾಡಿನ ಹೆಸರಾಂತ ದಿನಪತ್ರಿಕೆ ʼಪ್ರಜಾವಾಣಿʼ ವರದಿ ಮಾಡಿತ್ತು.
ಕೆರೆಯನ್ನೇ ನುಂಗುವ ಹುನ್ನಾರ
ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ, ಚಿಕ್ಕಬಳ್ಳಾಪುರ ನಗರಕ್ಕೆ ಕೇವಲ 0.5 ದೂರದಲ್ಲಿರುವ ಅಪ್ಪಯ್ಯನಕುಂಟೆ ಕೆರೆ ಮೇಲೆ ಈಗ ಭೂರಕ್ಕಸರ ಕಣ್ಣು ಬಿದ್ದಿದ್ದು, ಅದನ್ನು ಸರಕಾರಿ ಪ್ರಾಯೋಜಿತ ಯೋಜನೆಗಳ ಮೂಲಕವೇ ನುಂಗಿ ತೇಗಿಬಿಡಲು ಹುನ್ನಾರ ನಡೆದಿದೆ. ಕೆರೆಗಳ ಸಂರಕ್ಷಣೆಯ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದರೂ ಅದನ್ನು ಅಲಕ್ಷಿಸಿ ಇಡೀ ಕೆರೆಯನ್ನೇ ಅಪೋಷನ ತೆಗೆದುಕೊಳ್ಳಲು ಹುನ್ನಾರ ನಡೆದಿದ್ದು, ಇದಕ್ಕೆ ಜಿಲ್ಲಾಡಳಿತ ಕೂಡ ಸಾಥ್ ನೀಡಿದೆ ಎನ್ನಲಾಗಿದೆ.
ಕೆರೆ ಕುಂಟೆ, ಕಾಲುವೆಗಳ ರಕ್ಷಣೆಗೆ ಸರಕಾರ ಹೊರಡಿಸಿರುವ ಆದೇಶ.
ದಿಬ್ಬೂರು ರಸ್ತೆಯಲ್ಲಿರುವ ಅಪ್ಪಯ್ಯನಕುಂಟೆ ಕೆರೆಯನ್ನು ಅಧಿಕೃತವಾಗಿಯೇ ಜಿಲ್ಲಾಡಳಿತ ಒತ್ತುವರಿ ಮಾಡಿಕೊಂಡು ಕ್ಲಬ್ ಹೌಸ್ ನಿರ್ಮಾಣ ಮಾಡಲು ಅತಿ ಉತ್ಸಾಹದಿಂದ ಹೊರಟಿದ್ದು, ಆ ಭಾಗದ ಜನರಿಗೆ ಮುಖ್ಯ ಜಲಮೂಲವಾದ ಈ ಕೆರೆಯನ್ನು ಮರುಭೂಮಿಯನ್ನಾಗಿ ಮಾಡುವ ಷಡ್ಯಂತ್ರದ ಒಂದು ಭಾಗ ಇದಾಗಿದೆ.
ಈಗಾಗಲೇ ಕ್ಲಬ್ ಹೌಸ್ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಕೆರೆಗೆ ಮಳೆ ನೀರಿನ ಸಂಪರ್ಕ ಕೊಂಡಿಗಳಾಗಿರುವ ಫೀಡರ್ ಚಾನೆಲ್ ಹಾಗೂ ರಾಜ ಕಾಲುವೆಗಳೆಲ್ಲವನ್ನೂ ಮಣ್ಣಿನಿಂದ ಮುಚ್ಚಲಾಗಿದೆ. ಪರಿಣಾಮವಾಗಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ನೀರು ಕೆರೆ ಸೇರುವ ಬದಲು ಅಕ್ಕಪಕ್ಕದ ತೋಟಗಳು, ಸಮೀಪದ ಮನೆಗಳು ಹಾಗೂ ರಸ್ತೆಗಳಿಗೆ ನುಗ್ಗಿದೆ. ಇದರಿಂದಾಗಿ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಕೃಷಿ ಭೂಮಿಗೆ ನೀರು ಪ್ರವಾಹೋಪಾದಿಯಲ್ಲಿ ನುಗ್ಗಿದ್ದರಿಂದ ಬೆಳೆಗಳು ನಾಶವಾಗಿವೆ. ರೈತರು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅಲ್ಲದೆ, ಹೆದ್ದಾರಿ ಬಳಿ ಚಿಕ್ಕಬಳ್ಳಾಪುರ ನಗರ ಹಾಗೂ ದಿಬ್ಬೂರಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ವಾಪಸಂದ್ರದ ಹತ್ತಿರದ ಅಂಡರ್‌ಪಾಸ್‌ಸಂಪೂರ್ಣವಾಗಿ ಜಲಾವೃತವಾಗಿದ್ದು, ಜನರು ಮೊಣಕಾಲುದ್ದ ನೀರಿನಲ್ಲೇ ಓಡಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿದರೆ ಅವರೋ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ, ಜನರ ಪಾಡು ತಪ್ಪುತ್ತಿಲ್ಲ.
ಅಪ್ಪಯ್ಯನಕುಂಟೆ ಕೆರೆ / ಸಂಗ್ರಹ ಚಿತ್ರ
ಅಪ್ಪಯ್ಯನಕುಂಟೆ ಕೆರೆ ಪಕ್ಷದಲ್ಲೇ ಭೂಮಿ ಹೊಂದಿರುವ ಕೆಲಸ ರೈತರು ಸಿಕೆನ್ಯೂಸ್ ನೌ ಬಳಿ ತಮ್ಮ ಅಳಲು ತೋಡಿಕೊಂಡಿದ್ದು, ಹೆಸರು ಹೇಳುವುದಕ್ಕೂ ಅವರು ಭಯಪಡುತ್ತಿದ್ದಾರೆ. ಶುದ್ಧವಾದ ಪರಿಸರವನ್ನು ಹಾಳು ಮಾಡುವುದಲ್ಲದೆ, ಜಲಮೂಲಗಳನ್ನು ಹಾಳು ಮಾಡಿ ಚಿಕ್ಕಬಳ್ಳಾಪುರವನ್ನು ಕಾಂಕ್ರಿಟ್ ಜಂಗಲ್ ಮಾಡಲಾಗುತ್ತಿದೆ.
ಇನ್ನು, ಜಲಾವೃತವಾಗಿರುವ ಅಂಡರ್‌ಪಾಸ್ ತುಂಬಿರುವ ನೀರನ್ನು ತೆರವುಗೊಳಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಶತಪ್ರಯತ್ನ ಮಾಡುತ್ತಿದ್ದರೂ ಆ ಕೆಲಸದಲ್ಲಿ ಅದು ಯಶಸ್ವಿಯಾಗಿಲ್ಲ. ಇದರಂದ ಚಿಕ್ಕಬಳ್ಳಾಪುರ- ಮಂಚನಬೆಲೆ, ದಿಬ್ಬೂರು ನಡುವೆ ನಿತ್ಯ ಸಂಚಾರ ಮಾಡುವ ಜನರಿಗೆ ಭಾರೀ ಸಮಸ್ಯೆಯಾಗಿದೆ.