ಬಾಗೇಪಲ್ಲಿ ಸರಕಾರಿ ಶಾಲೆ ಶಿಕ್ಷಕಿಯ ಮಾರ್ಗದರ್ಶನದಲ್ಲಿ ಕಲಾಕೃತಿ ತಯಾರಿಸಿದ ಮಕ್ಕಳು
ಬಾಗೇಪಲ್ಲಿ: ತಾಲೂಕಿನ ಯಲ್ಲಂಪಲ್ಲಿ ಸರಕಾರಿ ಪ್ರೌಢಶಾಲೆ ಶಾಲೆಯಲ್ಲಿ ಯಾವುದೂ ವೇಸ್ಟ್ ಅಲ್ಲ. ನಾವು, ನೀವು ಬಿಸಾಡುವ ಬಳಕೆಗೆ ಯೋಗ್ಯವಲ್ಲದ ವಸ್ತುಗಳೇ ಮಕ್ಕಳ ಕಲಾಷೃಷ್ಟಿಗೆ ಕಚ್ಛಾವಸ್ತುಗಳು. ವಿದ್ಯಾರ್ಥಿಗಳು ಅವುಗಳನ್ನೇ ಬಳಸಿಕೊಂಡು ಚೆಂದದ ಆಕೃತಿಗಳನ್ನು ತಯಾರು ಮಾಡುತ್ತಿದ್ದಾರೆ.
ಬಿಸಾಡಿದ ವಸ್ತುಗಳಿಂದಲೇ ರೆಡಿ ಮಾಡಿದ ಆ ಆಕೃತಿಗಳನ್ನು ನೋಡಿದರೆ ಒಂದು ಕ್ಷಣ ಆಶ್ಚರ್ಯ ಆಗುವುದು ಗ್ಯಾರಂಟಿ. ಆ ಶಾಲಾ ಮಕ್ಕಳು ವೇಸ್ಟ್ ವಸ್ತುಗಳಿಂದ ಸೃಷ್ಟಿಸಿರುವ ಕಲಾಕೃತಿಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ಚಿತ್ರಕಲಾ ಶಿಕ್ಷಕಿಯ ಮಾರ್ಗದರ್ಶನದಲ್ಲಿ ರಂಗುರಂಗಾಗಿ ಕಲಾಕೃತಿಗಳು ಹೊರಹೊಮ್ಮಿದೆ.
ಸುಮಾರು194 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿ ಹಲವಾರು ಮಕ್ಕಳು ಕಲಾಕೃತಿಗಳಚನ್ನು ತಯಾರು ಮಾಡುತ್ತಿದ್ದು, ಅವರಿಗೆ ಕಲಾ ಶಿಕ್ಷಕಿ ರಸೀದಾ ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಶಿಕ್ಷಕಿ ರಸೀದಾ ಅವರು; “ಸ್ವಲ್ಪ ಕ್ರಿಯೇಟಿವಿ ಮತ್ತು ತಾಳ್ಮೆ ಇದ್ದರೆ ಇವುಗಳಲ್ಲಿ ಬಹುತೇಕ ತ್ಯಾಜ್ಯ ವಸ್ತುಗಳಿಗೆ ಕಲಾರೂಪ ನೀಡಲು ಸಾಧ್ಯವಿದೆ. ಇವುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾರ್ಪಡಿಸಿ ಶಾಲೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು” ಎನ್ನುತ್ತಾರೆ.
ಮಕ್ಕಳು ಬಹಳ ಆಸಕ್ತಿಯಿಂದ ಕ್ರಾಫ್ಟ್ ಮಾಡುವುದನ್ನು ಕಲಿಯುತ್ತಿದ್ದಾರೆ. ಅತ್ಯಂತ ಸೃಜನಶೀಲತೆಯಿಂದ ಅವರು ತಯಾರಿಸುವ ಕಲಾಕೃತಿಗಳು ಎಲ್ಲರಿಗೂ ಇಷ್ಟವಾಗುತ್ತಿವೆ. ಅದರಲ್ಲೂ ನಿರುಪಯುಕ್ತ ವಸ್ತುಗಳನ್ನು ಬಳಕೆ ಮಾಡಿಕೊಂಡು ಅವರು ಕಲಾಕೃತಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.
-ರಸೀದಾ, ಕಲಾ ಶಿಕ್ಷಕಿ
ನಿರುಪಯುಕ್ತ ವಸ್ತುಗಳ ಆಕೃತಿಗಳು
ವೇಸ್ಟ್ ಆಗಿ ಕಸದ ಬುಟ್ಟಿ ಸೇರಿದ ಪ್ಲ್ಯಾಸ್ಟಿಕ್, ತೆಂಗಿನ ಚಿಪ್ಪು, ಪೇಪರ್, ತಂತಿ, ಬಟ್ಟೆಗಳ ಕವರ್, ಸೀಸದ ಪೆನ್ಸಿಲ್, ತ್ಯಾಜ್ಯ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿ ಅವುಗಳಿಗೆ ಹೊಸ ರೂಪ ನೀಡುವ ಮೂಲಕ ಹೊಸದೊಂದು ಕಲಾ ಜಗತ್ತನ್ನೇ ಶಾಲಾ ಮಕ್ಕಳು ಅನಾವರಣಗೊಳಿಸಿದ್ದಾರೆ.
ಪ್ರಮುಖವಾಗಿ ಪ್ಲ್ಯಾಸ್ಟಿಕ್ ಕ್ಯಾರಿಬ್ಯಾಗ್ಗಳಿಂದ ಹೂವುಗಳ ನಿರ್ಮಾಣ. ಹಾಲಿನ ಪ್ಯಾಕೇಟ್ʼಗಳನ್ನು ಕತ್ತರಿಸಿ ಚೆಂದದ ಹೂವಿನ ಮಾಲೆ ಮಾಡಿರುವುದು ಹಾಗೂ ಬಾಟಲಿ, ತೆಂಗಿನ ಚಿಪ್ಪು, ಕಪ್ಪೆ ಚಿಪ್ಪು, ಪ್ಲಾಸ್ಟಿಕ್ ಸಾಮಗ್ರಿ, ಹಾಳೆ, ಥರ್ಮೋಕೊಲ್, ಗೋಣಿಚೀಲ, ಬೆಂಕಿ ಪೊಟ್ಟಣ, ಪಿವಿಸಿ ಪೈಪ್, ಗಾಜು, ಪ್ಲಾಸ್ಟಿಕ್ ವೈರ್, ದಾರ, ಡಬ್ಬಿ, ಬಂಬೂ, ಹುಲ್ಲು, ಮರಳು, ಪ್ಲಾಸ್ಟರ್ ಆಫ್ ಪ್ಯಾರಿಸ್, ಪೊರಕೆ ಕಡ್ಡಿ ಸೇರಿದಂತೆ ಮುಂತಾದ ವಸ್ತುಗಳಿಂದ ಅವರು ತಯಾರಿಸಿರುವ ಕಲಾಕೃತಿಗಳು ಚಿತ್ತಾಕರ್ಷಕವಾಗಿವೆ.
ಕರ್ನಾಟಕ ರಾಜ್ಯಾದ್ಯಂತ ಮೈಸೂರು, ದಾವಣಗೆರೆ, ಮಂಡ್ಯ, ಶಿವಮೊಗ್ಗ ಮತ್ತಿತರೆ ಜಿಲ್ಲೆಯಲ್ಲಿ ಈ ಮಕ್ಕಳಿಂದ ಅರಳಿರುವ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ ಎಂದು ಶಿಕ್ಷಕಿ ರಸೀದಾ ಹೇಳುತ್ತಾರೆ.
ಕಲಾಕೃತಿಗಳನ್ನು ಇಲ್ಲಿನ ವಿದ್ಯಾರ್ಥಿಗಳು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷಕಿ ಅವರೇ ಕಾರಣ. ಅವರಿಂದಲೇ ನಾವು ಇಂತಹ ಕಲೆ ಕಲಿತಿದ್ದೇವೆ ಎಂದು ಮಕ್ಕಳು ಹೇಳುವ ಮಾತು.
ಒಟ್ಟಿನಲ್ಲಿ ಕಸದ ಬುಟ್ಟಿಗೆ ಸೇರಿದ್ದ ವಸ್ತುಗಳಿಗೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸ ರೂಪ ನೀಡುತ್ತಿರುವುದು ಅವರ ಪೋಷಕರಿಗೂ ಖುಷಿ ತಂದಿದೆಯಲ್ಲದೆ, ಶಾಲೆಗೂ ಹೆಮ್ಮೆ ತಂದಿದೆ.