ಅಧಿಕಾರಿಗಳ ಅಲಕ್ಷ್ಯ; ರೈತರ ಜಮೀನಿಗೆ ನುಗ್ಗಿದ ನೀರು, ಅಪಾರ ಬೆಳೆ ನಾಶ
By GS Bharath Gudibande
ಗುಡಿಬಂಡೆ: ಇಲ್ಲಿನ ಅಮಾನಿ ಭೈರಸಾಗರ ಕೆರೆ ತುಂಬಿ ಕೋಡಿ ಹರಿಯುತ್ತಿರುವುದು ಒಂದೆಡೆ ಜನರಿಗೆ ಸಂತೋಷ ತಂದಿದ್ದರೆ, ಮತ್ತೊಂದೆಡೆ ಅವೈಜ್ಞಾನಿಕವಾಗಿ ತೂಬಿನಲ್ಲಿ ನೀರು ಹೊರಬಿಟ್ಟಿದ್ದೇ ತಡ ರೈತರ ಜಮೀನುಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಅಮಾನಿ ಭೈರಸಾಗರ ಕೆರೆ 4-5 ವರ್ಷಗಳ ಬಳಿಕ ತಂಬಿದ್ದೇ ತಡ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಗಳ ಜತೆಗೆ ಗುಡಿಬಂಡೆ ಹಾಗೂ ವಾಟದಹೊಸಳ್ಳಿ ಜನರ ನಿದ್ದೆಗೆಡಿದೆ.
ಅಪಾರ ಪ್ರಮಾಣದ ಬೆಳೆ ಹಾನಿ
ಅಮಾನಿ ಭೈರಸಾಗರ ಕೆರೆಯ ತೂಬಿನಲ್ಲಿ ವಾಟದಹೊಸಳ್ಳಿ ಕೆರೆಗೆ ಬಿಟ್ಟ ನೀರು ಆ ಕೆರೆಗೆ ಹೋಗುವ ಬದಲು ತಾಲೂಕಿನ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಗೆ ಕಾರಣವಾಯಿತು.
ಅನೇಕ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು. ತಮ್ಮ ಜೀವನಾಡಿ ಆಗಬೇಕಿದ್ದ ನೀರು ತಮ್ಮ ಬೆಳೆಯನ್ನು ನಾಶ ಮಾಡಿದ್ದಕ್ಕಾಗಿ ರೈತರು ಕಣ್ಣೀರು ಹಾಕಿದರು. ಸದ್ಯಕ್ಕೆ ಬೆಳೆ ನಾಶದ ಅಂದಾಜು ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ನೀರಿನ ರಭಸಕ್ಕೆ ಒಂದು ಸಾಕ್ಷಿ.
ಯಾಕೆ ಹೀಗಾಯಿತು?
ಯಾವುದೇ ವೈಜ್ಞಾನಿಕ ಮುಂದಾಲೋಚನೆ ಅಥವಾ ಅಂದಾಜಿಲ್ಲದೆ ನೀರು ಬಿಟ್ಟಿದ್ದೇ ಈ ಎಡವಟ್ಟಿಗೆ ಕಾರಣ. ಕಾಲುವೆಗಳ ಸಾಮರ್ಥ್ಯಕ್ಕೆ ತಕ್ಕಂತೆ ನೀರು ಹೊರಬಿಡದೇ ಹೆಚ್ಚು ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಸಮಸ್ಯೆಯಾಗಿದೆ ಎಂದು ರೈತರು ಹೇಳಿದ್ದಾರೆ. ವಾಟದಹೊಸಹಳ್ಳಿ ಕೆರೆಗೆ ಹೋಗವ ನೀರೆಲ್ಲ ವಾಬಸಂದ್ರ ಹಾಗೂ ಕೆರೆ ಕಟ್ಟೆಯ ಕೆಳಗಿರುವ ರೈತರ ಜಮೀನಿಗೆ ನುಗ್ಗಿದೆ.
ಈ ಕಾರಣಕ್ಕಾಗಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು ಕೂಡಲೇ ತೂಬು ಬಂದ್ ಮಾಡುವಂತೆ ಒತ್ತಾಯ ಮಾಡಿದರು.
ಹೂವಿನ ತೋಟಕ್ಕೆ ನುಗ್ಗಿದ ನೀರು.
ಭತ್ತ, ರಾಗಿ ಹಾಗೂ ಚೆಂಡು ಹೂ ಬೆಳೆ ನಾಶ
ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಅಮಾನಿ ಭೈರಸಾಗರ ಕೆರೆ ಕೋಡಿ ಹರಿಯುತ್ತಿದೆ. ಕೋಡಿ ಹೋಗುತ್ತಿರುವ ನೀರು ಹಂಪಸಂದ್ರ ಮತ್ತಿತರೆ ಕೆರೆಗಳಿಗೆ ಹೋಗಿ ಸೇರುತ್ತಿದೆ. ಇದರ ಬೆನ್ನಲ್ಲೇ ವಾಟದಹೊಸಳ್ಳಿ ಅಮಾನಿ ಕೆರೆಗೆ ಹೆಚ್ಚು ನೀರು ಬಿಡುವಂತೆ ಸ್ವತಃ ಆ ಗ್ರಾಮದವರು ಗುಡಿಬಂಡೆ ತಾಲೂಕು ಆಡಳಿತವನ್ನು ಒತ್ತಾಯ ಮಾಡಿದ್ದರು.
ಇವರು ಅಷ್ಟು ಮಾಡಿದ್ದರೆ ಸಾಕಿತ್ತು. ನೀರು ಹೊರಬಿಡುವ ಸಂದರ್ಭದಲ್ಲಿ ತೂಬಿನಲ್ಲಿ ಇಳಿದು ನೀರಿನ ಹೊರ ಹರಿವನ್ನು ಏರಿಕೆ ಮಾಡಿದ್ದು ಎಡವಟ್ಟಿಗೆ ಕಾರಣವಾಯಿತು. ಎಕಾಏಕಿ ಅಪಾರ ಪ್ರಮಾಣದಲ್ಲಿ ಹೊರನುಗ್ಗಿದ ಪ್ರವಾಹೋಪಾದಿಯಲ್ಲಿ ರೈತರ ಜಮೀನುಗಳಿಗೆ ನುಗ್ಗಿ ದೊಡ್ಡ ಪ್ರಮಾಣದ ನಷ್ಟ ಉಂಟು ಮಾಡಿತು.
ಇದರಿಂದ ರೊಚ್ಚಿಗೆದ್ದ ರೈತರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ತೂಬಿನಲ್ಲಿ ಹೊರ ಹರಿವಿನ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದರು. ಇದರಿಂದ ಕಾಲುವೆಗಳಲ್ಲಿ ಹರಿಯುತ್ತಿದ್ದ ನೀರಿನ ಮಟ್ಟ ಕಡಿಮೆಯಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಕಾಲುವೆಯಲ್ಲಿ ಸಾಗುತ್ತಿರುವ ನೀರು.
ಎಕಾಏಕಿ ಅಮಾನಿ ಭೈರಸಾಗರ ಕೆರೆಯ ತೂಬನ್ನು ನಿರ್ದಿಷ್ಟ ಮಿತಿಯ ಅಂದಾಜಿಲ್ಲದೆ ಎತ್ತಿದ್ದು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ರಾಜ ಕಾಲುವೆಯನ್ನು ಸರಿಯಾಗಿ ನಿರ್ವಹಣೆ ಮಾಡಿದಿರುವ ಕಾರಣಕ್ಕೆ ನಮ್ಮ ಜಮೀನುಗಳಿಗೆ ನೀರು ನುಗ್ಗಿ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ನಮಗೆ ಪರಿಹಾರ ಬೇಕು.
ವಿಶ್ವನಾಥ್, ಗುಡಿಬಂಡೆ ರೈತ