ಜಿ.ಪಂ. ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಭಜರಂಗದಳ ಮುಖಂಡರು ಭಾಗಿ
By GS Bharath Gudibande
ಗುಡಿಬಂಡೆ: ಭಾರತದ ಭೂಪಟದಂತೆ ಕಾಣುವ, ತಾಲೂಕಿನ ನೂರಾರು ಹಳ್ಳಿಗಳಿಗೆ ಜೀವನಾಡಿಯಾಗಿರುವ ಅಮಾನಿ ಭೈರಸಾಗರ ಕೆರೆ ಕೋಡಿ ಹರಿದಿರುವುದು ತುಂಬಾ ಸಂತೋಷದ ಸಂಗತಿ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಆಶೀರ್ವಾದ ಪಡೆದು ಗಂಗೆಯನ್ನು ಪೂಜಿಸಿದ ನಂತರ ಕೆರೆಗೆ ಬಾಗೀನ ಅರ್ಪಿಸಿ ಅವರು ಮಾತನಾಡಿದರು.
ಗುಡಿಬಂಡೆ ತಾಲೂಕು ಎಲ್ಲಾ ಕ್ಷೇತ್ರಗಳಲ್ಲಿ ಪ್ರಖ್ಯಾತಿಯನ್ನು ಪಡೆಯುತ್ತಿದೆ. ಪರಿಸರ, ಅರಣ್ಯ, ಶಿಕ್ಷಣ ಹೀಗೆ ರಾಜ್ಯದಲ್ಲಿ ತನ್ನದೇ ಕೀರ್ತಿ ಹೊಂದಿದೆ, ಅಮಾನಿ ಭೈರಸಾಗರ ಕೆರೆ ತುಂಬಿರುವುದು ಹಾಗೂ ಸತತವಾಗಿ ಮಳೆಯಿಂದ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ತುಂಬಿರುವುದು ರೈತರಿಗೆ ಸಂತಸದ ವಿಷಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, “ಈ ವರ್ಷ ರಾಜ್ಯಾದ್ಯಂತ ಮಳೆಯಾಗಿ, ರೈತರಿಗೆ ಅನುಕೂಲವಾಗಬೇಕು ಹಾಗೂ ಅಮಾನಿ ಭೈರಸಾಗರ ಕೆರೆ ಸದಾ ಹರಿಯುತ್ತಾ ಈ ಭಾಗದ ಜನರಿಗೆ, ರೈತರಿಗೆ ಕೃಷಿಗೆ ವರದಾನವಾಗಿದೆ. ಶ್ರೀ ವೈದ್ಯನಾಥೇಶ್ವರ ದೇವರ ಜೀರ್ಣೋದ್ದಾರದ ನಂತರ ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಕೋಡಿ ಹರಿದು ರೈತರಿಗೆ ಹಾಗೂ ಜನರಿಗೆ ಸಂತೋಷ ನೀಡಿದೆ” ಎಂದರು.
ಈ ಸಂದರ್ಭದಲ್ಲಿ ಪೆರೇಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಕೃಷ್ಣಾರೆಡ್ಡಿ, ಭಜರಂಗದಳ ಜಿಲ್ಲಾ ಸಂಚಾಲಕ ಗರುಡಾಚಾರ್ಲಹಳ್ಳಿ ಜಿ.ಎ.ಅಮರೇಶ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಬಾಲಕೃಷ್ಣ, ವಿಶ್ವಹಿಂದು ಪರಿಷತ್ ತಾಲೂಕು ಅಧ್ಯಕ್ಷ ನರಸಿಂಹರೆಡ್ಟಿ, ಭಜರಂಗದಳ ತಾಲೂಕು ಸಂಚಾಲಕ ಗಂಗೇಶ್, ಬಿಜೆಪಿ ಪದ್ಮಾವತಿ, ಕಮ್ಮಗುಟ್ಟಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪೃಥ್ವಿರಾಜ್ ರೆಡ್ಡಿ, ಸದಸ್ಯರಾದ ಲೋಕೇಶ್ ಗೌಡ, ಹರೀಶ್ ರೆಡ್ಡಿ, ಮುತ್ಯಾಲಪ್ಪ, ಶ್ರೀನಾಥ್, ಭಜರಂಗದಳದ ಕಾರ್ಯಕರ್ತ ಶ್ರೀನಾಥ್, ಕಿರಣ್, ಗಂಗರಾಜ್, ರಾಮಪಟ್ಟಣದ ಅರವಿಂದ್, ನಾಗಭೂಷಣ್ ರೆಡ್ಡಿ, ಚೆಂಡೂರು ಗಜೇಂದ್ರ ಸೇರಿ ಅನೇಕರು ಭಾಗವಹಿಸಿದ್ದರು.
ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ ಕೋಡಿ ಹರಿದಿರುವುದು ಸಂತಸದ ಸಂಗತಿ. ಈ ಕೆರೆ ಅಭಿವೃದ್ಧಿ ಮಾಡಲು ಸರಕಾರ ಮುಂದಾಗಬೇಕು. ಪ್ರವಾಸಿಗರು ಹೆಚ್ಚಾಗುತ್ತಿರುವ ಕಾರಣ ಬೋಂಟಿಗ್ ವ್ಯವಸ್ಥೆ ಮಾಡಿದರೆ ಚೆನ್ನಾಗಿರುತ್ತದೆ.
ಜಿ.ಎ.ಅಮರೇಶ್, ಜಿಲ್ಲಾ ಸಂಚಾಲಕ, ಭಜರಂಗದಳ