ಗುಡಿಬಂಡೆಯಲ್ಲಿ ಚೋಳರ ಕಾಲದ 3 ತಮಿಳು ಶಿಲಾಶಾಸನ
By Gs Bharath Gudibande
ಗುಡಿಬಂಡೆ: ಪುಟ್ಟ ತಾಲೂಕೇ ಆದರೂ ಐತಿಹಾಸಿಕ ಸಂಪತ್ತಿನ ಆಗರವಾದ ಗುಡಿಬಂಡೆಯು ಪ್ರಾಚ್ಯವಸ್ತು ಇಲಾಖೆ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಗಳ ತೀವ್ರ ಅಸಡ್ಡೆಗೆ ಗುರಿಯಾಗಿದೆ.
ತಾಲೂಕಿನಲ್ಲಿ ಐತಿಹಾಸಿಕ ದೇವಾಲಯಗಳು, ಶಿಲಾ ಶಾಸನಗಳು, ಕಲ್ಯಾಣಿಗಳು, ಬಾವಿ ಕೆರೆ ಕಟ್ಟೆಗಳು, ಬೆಟ್ಟಗುಡ್ಡಗಳಲ್ಲಿ ಸ್ಮಾರಕ, ಕೋಟೆಗಳು ಇದ್ದು, ಅವುಗಳನ್ನು ಸಂರಕ್ಷಿಸುವ ಪ್ರಯತ್ನ ನಡೆದಿಲ್ಲ. ಕಾಲ ಕ್ರಮೇಣ ಆ ಐತಿಹಾಸಿಕ ಸಂಪತ್ತು ಅಳಿವಿನತ್ತ ಸಾಗುತ್ತಿದ್ದು, ತಾಲೂಕಿನ ಜನ ಆಘಾತಗೊಂಡಿದ್ದಾರೆ.
ರಾಜ್ಯದ ಗಡಿ ಭಾಗದಲ್ಲಿ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಡಿಬಂಡೆ ಅಪ್ಪಟ ಕನ್ನಡದ ನೆಲ. ಆದರೂ ರಾಜ್ಯದ ಅತಿ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ. ದಶಕಗಳೇ ಕಳೆದರೂ ಅಭಿವೃದ್ಧಿ ಕಾಣದ ತಾಲೂಕು ಆಗಿ ಉಳಿದುಬಿಟ್ಟಿದೆ. ಇಂಥ ತಾಲೂಕಿನ ಗ್ರಾಮವೊಂದರಲ್ಲಿ ಮೂರು ತಮಿಳು ಶಾಸನಗಳು ಇರುವುದನ್ನು ಕೆಲ ವರ್ಷಗಳ ಹಿಂದೆ ಪತ್ತೆ ಹಚ್ಚಲಾಗಿದೆ.
ನೂರಾರು ವರ್ಷಗಳಿಂದ ಬಯಲಲ್ಲಿ ಸೊರಗುತ್ತಿರುವ ಈ ಅಪರೂಪದ ಶಾಸನಗಳನ್ನು ಸಂರಕ್ಷಿಸಿ, ಅವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಸಂಬಂಧಪಟ್ಟ ಯಾವ ಇಲಾಖೆಯೂ ಮಾಡಿಲ್ಲ. ಈಗಲಾದರೂ ಅದಕ್ಕೆ ಚಾಲನೆ ದೊರೆಯಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ.
ಶತಮಾನಗಳ ಇತಿಹಾಸವುಳ್ಳ ಗುಡಿಬಂಡೆ ತಾಲೂಕಿನಲ್ಲಿ ಐತಿಹಾಸಿಕ ಪರಂಪರೆಯ ದೊಡ್ಡ ಕಥೆಯೇ ಅಡಗಿದೆ. ಇತಿಹಾಸ ಹೇಳುವ ದೇವಾಲಯಗಳು, ಬೆಟ್ಟಗುಡ್ಡಗಳು, ಕೆರೆ ಕುಂಟೆಗಳು, ಶಿಲ್ಪಗಳು, ಶಾಸನಗಳು, ಕೋಟೆ ಕೊತ್ತಲಗಳು, ತಾಳೆಗರಿ ಹಸ್ತಪ್ರತಿಗಳು, ಕುರುಹು ಚಿಹ್ನೆಗಳು, ಮಂದಿರ ಬಸದಿಗಳು, ವೀರಗಲ್ಲುಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಇಂದು ಇವೆಲ್ಲವೂ ಅಳಿವಿನತ್ತ ಸಾಗುತ್ತಿವೆ.
ಈ ಪೈಕಿ ಶಿಲಾಶಾಸನಗಳೂ ಇದ್ದು, ಮೂರು ವಿಭಿನ್ನ ತಮಿಳು ಶಾಸನಗಳು ನಮ್ಮ ಇತಿಹಾಸದ ಕಳಸಕ್ಕೆ ಮುನ್ನುಡಿ ಬರೆಯುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯದ ಖ್ಯಾತ ಇತಿಹಾಸಕಾರ ಹಾಗೂ ಕೋಲಾರ ಜಿಲ್ಲೆಯ ಇತಿಹಾಸದ ಕುರಿತು ಸಮಗ್ರ ಅಧ್ಯಯನ ಮಾಡಿರುವ ಪ್ರೊ.ನರಸಿಂಹನ್ ಅವರ ಸೂಚನೆಯಂತೆ ಗುಡಿಬಂಡೆ ತಾಲೂಕಿನ ನಂಚಾರ್ಲು ಗ್ರಾಮದ ಇತಿಹಾಸದ ಅಧ್ಯಯನ ಮಾಡಿರುವ ಇತಿಹಾಸಕಾರ ಸ.ನ.ನಾಗೇಂದ್ರ ನೇತೃತ್ವದ ತಂಡ ಮಹತ್ವದ ಈ ಶಾಸನಗಳನ್ನು ಗುರುತಿಸಿದೆ.
ತಾಲೂಕಿನ ಸೋಮೇನಹಳ್ಳಿ ಹೋಬಳಿಗೆ ಸೇರಿದ ದೊಡ್ಡನಂಚರ್ಲು, ಚಿಕ್ಕನಂಚರ್ಲು, ತಿರುಮಣಿ ಗ್ರಾಮಗಳ ಕುರಿತು ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಹೇಳುವ ಅಪರೂಪದ ತಮಿಳು ಬರಹ ಹೊಂದಿರುವ ಮೂರು ಪ್ರತ್ಯೇಕ ಶಾಸನಗಳು ಇರುವ ಸ್ಥಳವನ್ನು ಅವರು ಬಹಳ ದಿನಗಳ ಹಿಂದೆಯೇ ಪತ್ತೆ ಮಾಡಿದ್ದರು.
ದೊಡ್ಡನಂಚರ್ಲು, ಚಿಕ್ಕನಂಚರ್ಲು ಗ್ರಾಮಗಳ ನಡುವೆ ಇರುವ ರಸ್ತೆ ಬದಿಯಲ್ಲಿ ಈ ಮೂರು ಶಿಲಾ ಶಾಸನಗಳು ಅನಾಥವಾಗಿ ಭೂಮಿಯಲ್ಲಿ ಹುದುಗಿ ನಿಂತಿವೆ. ಅವುಗಳ ರಕ್ಷಣೆಗೆ ಸಾಕಷ್ಟು ಶ್ರಮ ವಹಿಸಿ ಒತ್ತಡ ಹಾಕಿದರೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಥವಾ ಗುಡಿಬಂಡೆ ಆಡಳಿತ ಅತ್ತ ಕಣ್ಣೆತ್ತಿಯೂ ನೋಡಿಲ್ಲ.
ಸ್ಥಳೀಯರಿಗೆ ಈ ಶಾಸನಗಳ ಕುರಿತು ಇರುವ ಅಭಿಪ್ರಾಯವೇ ಬೇರೆ. ಶಾಸನಗಳನ್ನು ಕುರಿತು ಯಾರಾದರೂ ವಿಚಾರಿಸಿದರೆ ಸಾಕು, ಅವ್ಯಕ್ತ ಭಯ ಅವರಲ್ಲಿ ಕಾಣಿಸಿಕೊಳ್ಳುತ್ತದೆ. ದೂರದಿಂದಲೇ ಅವುಗಳಿರುವ ಸ್ಥಳವನ್ನು ತೋರಿಸಿ ಜಾಗ ಖಾಲಿ ಮಾಡಿಬಿಡುತ್ತಾರೆ! ಎಕೆ ಹೀಗೆ? ಎಂದು ಪ್ರಶ್ನಿಸಿದರೆ ಅವರು ಹೊರ ಹಾಕುವ ಆತಂಕದ ಕಥೆಗಳನ್ನು ಕೇಳಿ ಅಚ್ಚರಿಯಾಗುತ್ತದೆ. ಉಳಿದಂತೆ ಶಾಸನಗಳ ಕುರಿತು ನಿಖರ ಮಾಹಿತಿ ಗೊತ್ತಿಲ್ಲವಾದ್ದರಿಂದ ಸುಮ್ಮನಾಗಬೇಕಾಗುತ್ತದೆ ಎನ್ನುತ್ತಾರೆ ಸ.ನ.ನಾಗೇಂದ್ರ.
ಸ್ಥಳೀಯರ ಪ್ರಕಾರ ಶಾಸನವನ್ನು ಯಾರಾದರೂ ಓದಿ ಅರ್ಥೈಸಿಕೊಂಡರೆ ಅವರ ತಲೆ ಸಾವಿರ ಹೋಳಾಗುತ್ತದೆಯಂತೆ!? ಈ ನಂಬಿಕೆ ಅವರುಗಳನ್ನು ಈ ಶಾಸನಗಳಿಂದ ದೂರ ಇರಿಸಿಬಿಟ್ಟಿದೆ. ಈ ಮಧ್ಯೆ ಕೆಲ ಕಿಡಿಗೇಡಿಗಳು ಅಲ್ಲಿ ನಿಧಿ ಇರಬಹುದೆಂಬ ದುರಾಸೆಯಿಂದ ಆ ಸ್ಥಳದಲ್ಲಿ ಅಗೆದು ಹಾಳು ಮಾಡಿ, ಭೀತಿಯ ಉಪಟಳ ಉಂಟು ಮಾಡುತ್ತಿರುವುದು ಸಹ ಸ್ಥಳೀಯರ ಭಯವನ್ನು ಮತ್ತಷ್ಟು ಹೆಚ್ಚಿಸಿದೆ.
ಸಾವಿರಾರು ವರ್ಷಗಳ ಶಾಸನ
ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಾಹಿತಿ ಇರುವ ಕೆಸಿ ವಾಲ್ಯೂಮ್ ನಲ್ಲಿ ಉಲ್ಲೇಖಿಸಿರುವಂತೆ ಗುಡಿಬಂಡೆ ತಾಲೂಕಿನ ಈಗಿನ ದೊಡ್ಡನಂಚರ್ಲು ಗ್ರಾಮವನ್ನು ʼನಂಚಾರ್ಲುʼ, ʼನಂದಿನಾಡುʼ ಹೆಸರಿನಿಂದ ಕರೆಯಲಾಗುತ್ತಿತ್ತು. ಗ್ರಾಮದ ಹೊಲ ಒಂದರಲ್ಲಿರುವ ಶಿಲೆಯಲ್ಲಿ ಈ ಶಾಸನವಿದೆ. ಅದರ ಮಾಹಿತಿ ಸಂಗ್ರಹಿಸುವಂತೆ ತಿಳಿಸಿದ ಪ್ರೊ.ನರಸಿಂಹನ್ ಅವರ ಸೂಚನೆ ಮೇರೆಗೆ ಸ್ಥಳಕ್ಕೆ ತೆರಳಿದ್ದ ನಾಗೇಂದ್ರ ಅವರ ನೇತೃತ್ವದ ತಂಡವು ಸಾಕಷ್ಟು ಮಾಹಿತಿ ಕಲೆ ಹಾಕಿತ್ತು. ಈ ತಂಡ ಅಲ್ಲಿನ ಗ್ರಾಮಸ್ಥರು ತೋರಿಸಿದ ಈ ಮೂರು ಶಿಲಾಶಾಸನಗಳೇ ನಾಂಚಾರ್ಲು ಶಾಸನಗಳಿರಬಹುದು ಎಂದು ಅಂದಾಜಿಸಿ ಅವುಗಳ ಭಾವಚಿತ್ರಗಳನ್ನು ತೆಗೆದು ನರಸಿಂಹನ್ ಅವರಿಗೆ ಕಳುಹಿಸಿತ್ತು.
ಇರುಮುಡಿನಾಡು ಆಗಿದ್ದ ತಿರುಮಣಿ
ಈ ಬಗ್ಗೆ ಮೇಲ್ನೋಟದ ಅಧ್ಯಯನ ನಡೆಸಿದ ಪ್ರೊ.ನರಸಿಂಹನ್ ಅವರು, ಸ.ನ.ನಾಗೇಂದ್ರ ಅವರೊಂದಿಗೆ ತಮಿಳು ಶಾಸನದ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನರಸಿಂಹನ್ ಅವರು ಹೇಳುವ ಪ್ರಕಾರ; “ಇದು ಐತಿಹಾಸಿಕ ಶಾಸನ. ಈ ಮೂರು ಶಾಸನಗಳಲ್ಲಿ ಕಂಡು ಬರುವಂತೆ ಅಂದಾಜು 1030ರಲ್ಲಿ ಚೋಳರ ಪ್ರಸಿದ್ಧ ಅರಸ ರಾಜೇಂದ್ರ ಚೋಳ ಈ ಗ್ರಾಮಗಳ ಬಳಿ ಕೆರೆಯೊಂದನ್ನು ಕಟ್ಟಿಸಿ, ಶಿವಾಲಯವೊಂದಕ್ಕೆ ಜಮೀನು ದಾನ ನೀಡಿರುವ ಕುರಿತು ಮಾಹಿತಿ ಉಲ್ಲೇಖಿಸಲಾಗಿದೆ. ಜತೆಗೆ ಈಗಿನ ತಿರುಮಣಿ ಗ್ರಾಮವನ್ನು ʼಇರುಮುಡಿನಾಡುʼ ಎಂಬುದಾಗಿ ನಮೂದಿಸಲಾಗಿದೆ. ನಂಚಾರ್ಲು ಗ್ರಾಮದ ಕುರಿತಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ್ದ ಆಡಳಿತಗಾರರು 500 ವರ್ಷಗಳ ಹಿಂದೆ ಹೊರಡಿಸಿದ್ದ ಇತಿಹಾಸದ ಬಗ್ಗೆ ಬೆಳಕು ಚೆಲ್ಲಲು ಹೊರಟಿದ್ದ ಸಂದರ್ಭದಲ್ಲಿ ಸಾವಿರಾರು ವರ್ಷಗಳ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಮೂರು ಅಪರೂಪದ ತಮಿಳು ಶಾಸನಗಳು ಗೋಚರಿಸಿರುವುದು ಸಂತಸದ ವಿಷಯವಾಗಿದ್ದು, ಮಾಹಿತಿ ಸಂಗ್ರಹಿಸಿ ಸಹಕರಿಸಿದ ತಂಡಕ್ಕೆ ನಾಡಿನ ಇತಿಹಾಸಕಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದಿದ್ದಾರೆ.
ಮೂರು ಶಿಲಾ ಶಾಸನಗಳ ವಿವರ
ದೊಡ್ಡನಂಚರ್ಲು ಗ್ರಾಮದ ಬಳಿಯಿರುವ 3 ತಮಿಳು ಶಿಲಾ ಶಾಸನಗಳು ಇತಿಹಾಸದ ದೃಷ್ಟಿಯಿಂದ ಅಮೂಲ್ಯವಾದವು. ಅವುಗಳಲ್ಲಿ ಏನೋ ರಹಸ್ಯ ಅಡಗಿದೆ ಎಂದು ಭಾವಿಸಿ, ಹಾಳುಗೆಡುವಲು ಕಿಡಿಗೇಡಿಗಲು ಯತ್ನಿಸಿದ್ದಾರೆ ಹಾಗೂ ಇಲ್ಲದ್ದನ್ನು ಊಹಿಸಿಕೊಂಡು ನಿಧಿ ಆಸೆಗಾಗಿ ಭಗ್ನ ಮಾಡಲು ಪ್ರಯತ್ನಿಸಲಾಗಿದೆ. ಇಂಥ ದುಷ್ಕರ್ಮಿಗಳಿಂದ ಸ್ಮಾರಕಗಳನ್ನು ರಕ್ಷಿಸಿ ಉಳಿಸಿಸುವ ಕಾರ್ಯವನ್ನು ಗ್ರಾಮಸ್ಥರು, ತಾಲೂಕು ಹಾಗೂ ಜಿಲ್ಲಾಡಳಿತ ಮಾಡಬೇಕೆಂದು ಪ್ರೊ.ನರಸಿಂಹನ್ ಕೋರಿದ್ದಾರೆ.
ಯಾರು ಏನಂತಾರೆ?
ನಾವು ಈ ಶಾಸನಗಳನ್ನು ಕಾಪಾಡಿಕೊಳ್ಳಲೇಬೇಕು. ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳಲ್ಲಿ ಮಹತ್ವದ ಮಾಹಿತಿ ಇದ್ದು, ಆ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಬೇಕಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳು ಈ ಶಾಸನಗಳ ಸಂರಕ್ಷಣೆಗೆ ಕೂಡಲೇ ಮುಂದಾಗಬೇಕು.
ಸ.ನ.ನಾಗೇಂದ್ರ, ಇತಿಹಾಸಕಾರ
ತಾಲೂಕಿನ ಕೆಲ ಸ್ಥಳಗಳು ಐತಿಹಾಸಿಕ ಪ್ರಖ್ಯಾತಿ ಹೊಂದಿದ್ದು, ಅವುಗಳ ಸಂರಕ್ಷಣೆಗೆ ತಾಲೂಕು ಆಡಳಿತ ಮುಂದಾಗಬೇಕು. ಈ ಶಿಲಾಶಾಸನ ಸ್ಥಳ ಅಳಿವಿನತ್ತ ಸಾಗುತ್ತಿದ್ದು, ರಕ್ಷಿಸಿ ಉಳಿಸಲು ಪ್ರಯತ್ನ ಮಾಡಬೇಕು.
ಗೋಪಿ, ಗುಡಿಬಂಡೆ ನಿವಾಸಿ