ಭೌತಿಕ ತರಗತಿಗಳು ಪುನಾರಂಭಕ್ಕೆ ಸರಕಾರ ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ನಿಯಂತ್ರಣದಲ್ಲಿರುವ ಕಾರಣಕ್ಕೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಸರಕಾರ ಮುಂದಾಗಿದೆ.
ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ತಿಂಗಳ 25ನೇ ತಾರೀಖಿನಿಂದ 1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳನ್ನು ಪುನಾರಂಭಿಸಲು ಹಸಿರಿ ನಿಶಾನೆ ನೀಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಅವರು ಈ ವಿಷಯ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು; ಕೋವಿಡ್ ಸೋಂಕಿನ ಕಾರಣದಿಂದ ಕಳೆದ ಇಪ್ಪತ್ತು ತಿಂಗಳಿಗೂ ಹೆಚ್ಚು ಕಾಲದಿಂದ ಮಕ್ಕಳು ಭೌತಿಕ ತರಗತಿಗಳಿಂದ ದೂರ ಇದ್ದರು. ಮೊದಲ ಹಂತದಲ್ಲಿ ಮಕ್ಕಳಿಗೆ ಶಾಲೆಯ ವಾತಾವರಣ ರೂಢಿಯಾಗಲಿ ಎಂದು ಒಂದು ವಾರ ಮಧ್ಯಾಹ್ನ ತನಕ ಮಾತ್ರ ತರಗತಿಗಳನ್ನು ನಡೆಸಲಾಗುವುದು. ಬಳಿಕ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದರು.
ಸೋಂಕಿನ ನಿಯಂತ್ರಣ ಆಗಿದ್ದರೂ ಕೋವಿಡ್ ಮಾರ್ಗಸೂಚಿ ಪ್ರಕಾರವೇ ತರಗತಿಗಳನ್ನು ನಡೆಸಲಾಗುವುದು. ಈ ಬಗ್ಗೆ ಎಲ್ಲ ಜಿಲ್ಲೆಗಳ ಡಿಡಿಪಿಐ ಮತ್ತು ಬಿಇಒ ಮತ್ತು ಶಿಕ್ಷಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ದೈಹಿಕ ಅಂತರದ ದೃಷ್ಟಿಯಿಂದ ತರಗತಿಗಳಲ್ಲಿ ಶೇ.50ರಷ್ಟು ಹಾಜರಾತಿಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಮಾಡಿದೆ. ಕೊಠಡಿಯಲ್ಲಿ ಅಂತರ ಕಾಪಾಡಿಕೊಳ್ಳಲು ಸಾಕಷ್ಟು ಜಾಗ, ಮೂಲಸೌಕರ್ಯ ಲಭ್ಯವಿದ್ದಲ್ಲಿ ಅಂತಹ ಕಡೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮಕ್ಕಳು ಹಾಜರಾಗಲು ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ರಾಜ್ಯದ ಅನೇಕ ತಾಲೂಕುಗಳಲ್ಲಿ ಕೋವಿಡ್ ಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಸೋಂಕು ಪ್ರಮಾಣ ಶೂನ್ಯಕ್ಕೆ ಬಂದಿದೆ ಎಂದ ಸಚಿವರು, ಈ ಕಾರಣಕ್ಕೆ ನಿರಾತಂಕವಾಗಿ ತರಗತಿ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.