ಲೈಟುಗಳ ಅಳವಡಿಕೆಯಲ್ಲಿ ಅವ್ಯವಹಾರ; ನಿರ್ವಹಣೆಯಲ್ಲಿ ನಿರ್ಲಕ್ಷ್ಯ
By GS Bharath Gudibande
ಗುಡಿಬಂಡೆ: ಪಟ್ಟಣದ ಅಮಾನಿ ಭೈರಸಾಗರ ಕೆರೆಕಟ್ಟೆ ಮೇಲೆ ಅಳವಡಿಸಲಾಗಿರುವ ದಾರಿ ದೀಪಗಳು ಹಾಕಿದ ಹೊಸದರಲ್ಲಿ ತಳಕ್ ಬುಳಕ್ ಅಂತ ಮಿಂಚಿ ಈಗ ಟೋಟಲ್ ಸ್ವಿಚ್ ಆಫ್ ಆಗಿಬಿಟ್ಟಿವೆ!
ಪಟ್ಟಣಕ್ಕೆ ಮುಖ್ಯ ಸಂಪರ್ಕ ರಸ್ತೆಯಾಗಿರುವ ಅಮಾನಿ ಭೈರಸಾಗರ ಕೆರೆ ಏರಿಯ ಮೇಲಿನ ರಸ್ತೆಯ ಮೇಲೆ ರಾತ್ರಿ ಹೊತ್ತು ಸಂಚಾರಕ್ಕೆ ಅನುಕೂಲವಾಗಲಿ, ಅಪಘಾತಗಳು ಸಂಭವಿಸದೇ ಇರಲಿ ಎನ್ನುವ ಕಾರಣಕ್ಕೆ ರಸ್ತೆ ದೀಪಗಳನ್ನು ಅಳವಡಿಸಲಾಗಿತ್ತು.
ಆದರೆ, ಈ ದೀಪಗಳು ರಾತ್ರಿ ವೇಳೆ ಉರಿಯದೇ ರಸ್ತೆಯಲ್ಲಿ ಕಗ್ಗತ್ತಲೇ ತುಂಬಿದ್ದು, ನಿರುಪಯುಕ್ತವಾಗಿ ಕೇವಲ ಅಲಂಕಾರಕ್ಕೆ ಮಾತ್ರ ಎನ್ನುವಂತೆ ಸಾಲುಗಟ್ಟಿ ನಿಂತಿವೆ.
ಪಟ್ಟಣದಲ್ಲಿ ಎಲ್ಲೆಡೆ ಮರ್ಕ್ಯೂರಿ ದಾರಿ ದೀಪಗಳನ್ನು 2011-12ನೇ ಸಾಲಿನಲ್ಲಿ ಬೆಂಗಳೂರು ಮೂಲದ ಎಸ್.ಎಂ.ಎಸ್. ಎಲೆಕ್ಟ್ರಾನಿಕ್ಸ್ ಗುತ್ತಿಗೆದಾರರು ಪಟ್ಟಣ ಪಂಚಾಯತಿಯಿಂದ ಟೆಂಡರ್ ಪಡೆದು 2011 ಅಗಸ್ಟ್ 6ರಿಂದ ಕಾರ್ಯನಿರ್ವಹಿಸಲು ಗುತ್ತಿಗೆ ಪಡೆದಿದ್ದರು.
ಅಮಾನಿ ಭೈರಸಾಗರ ಕೆರೆ ಏರಿ ಸೇರಿದಂತೆ ಗುಡಿಬಂಡೆಯ ಬಹುತೇಕ ಕಡೆ ಹೆಚ್ಚು ಪ್ರಮಾಣದಲ್ಲಿ ದಾರಿ ದೀಪಗಳನ್ನು ಇದೇ ಎಸ್.ಎಂ.ಎಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಅಳವಡಿಸಿದೆ. ಪಟ್ಟಣದ ಹಲವಾರು ಭಾಗಗಳಲ್ಲಿ ಈ ಮರ್ಕ್ಯೂರಿ ದೀಪಗಳನ್ನು ಪಟ್ಟಣ ಪಂಚಾಯತಿ ಎಸ್.ಎಫ್.ಸಿ, ಮುಖ್ಯಮಂತ್ರಿಗಳ ಅನುದಾನ ಹಾಗೂ 12&13ನೇ ಹಣಕಾಸು ಯೋಜನೆ ಕಾರ್ಯಕ್ರಮಗಳ ಅಡಿಯಲ್ಲಿ ಸಂಸ್ಥೆ ದೀಪಗಳನ್ನು ಅಳವಡಿಸಿದೆ ಹಾಗೂ ಅವುಗಳ ನಿರ್ವಹಣೆಯನ್ನೂ ಮಾಡುತ್ತಿದೆ.
ಉಳಿದಂತೆ ಶಾ ಎಲೆಕ್ಟ್ರಿಕಲ್ಸ್, ಕಾಂತಿ ಎಲೆಕ್ಟ್ರಿಕಲ್ಸ್, ಎಸ್.ವಿ.ಎಲ್. ಟ್ರೇಡಿಂಗ್ ಸಂಸ್ಥೆಗಳು ʼಸಹ ಗುತ್ತಿಗೆʼ ಪಡೆದು ದೀಪಗಳ ಸರಬರಾಜು ಮತ್ತು ನಿರ್ವಹಣೆ ನೋಡಿಕೊಳ್ಳಲು ಜವಾಬ್ದಾರಿ ವಹಿಸಿಕೊಂಡಿವೆ. ಇವರೆಲ್ಲರೂ ಮಂಜೂರಾತಿ ಪಡೆದು, ಹಣವನ್ನೂ ಬಿಲ್ ಮಾಡಿಕೊಂಡು ಅರೆಬರೆ ಕೆಲಸ ಮಾಡಿದ್ದು, ಈ ಬಗ್ಗೆ ಕೆರೆ ಏರಿ ಮೇಲೆ ಕಗ್ಗತ್ತಲಲ್ಲಿ ಸಂಚಾರ ಮಾಡುತ್ತಿರುವ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಈ ದಾರಿ ದೀಪಗಳ ನಿರ್ವಹಣೆ ಮತ್ತು ರಿಪೇರಿ ಹಣವನ್ನು ಹೊರತುಪಡಿಸಿದಂತೆ ಇವುಗಳನ್ನು ಹೊಸದಾಗಿ ಅಳವಡಿಸಲು ಸುಮಾರು 1.19 ಲಕ್ಷ ರೂ.ಗಳನ್ನು ಪಟ್ಟಣ ಪಂಚಾಯಿತಿ ಇದುವರೆಗೂ ವಿವಿಧ ಯೋಜನೆಯಡಿ ಬಿಡುಗಡೆ ಮಾಡಿದೆ. ಎಸ್.ಎಂ.ಎಸ್. ಎಲೆಕ್ಟ್ರಾನಿಕ್ಸ್ ಸಂಸ್ಥೆ ದೀಪಗಳ ನಿರ್ವಹಣೆ ದೃಷ್ಟಿಯಿಂದ ಟೆಂಡರ್ ನಿಯಮಾವಳಿ ಪ್ರಕಾರ ಜೀಪ್, ಲ್ಯಾಡರ್ ಮತ್ತು ಸಿಬ್ಬಂದಿಯನ್ನು ಕಡ್ಡಾಯವಾಗಿ ಪಟ್ಟಣದಲ್ಲೇ ಇರಿಸಬೇಕೆಂಬ ಷರತ್ತು ಇದೆ. ಆದರೆ, ಆ ಸಂಸ್ಥೆ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಹಾಗೂ ಪಟ್ಟಣದಲ್ಲಿ ಅವರ ಸಿಬ್ಬಂದಿಗಳ ಉಪಸ್ಥಿತಿಯೂ ಇಲ್ಲ.
ಇಲ್ಲಿಯವರೆಗೆ ಆ ಸಿಬ್ಬಂದಿ ಪಟ್ಟಣದಲ್ಲಿ ಸರಿಯಾಗಿ ನಿರ್ವಹಿಸದೇ ಬಳಕೆಗೆ ಬಾರದ ಅಲಂಕಾರಿಕ ಸ್ತಂಭಗಳಾಗಿ ನಿಂತಿರುವ ಈ ದೀಪಗಳು ಬೆಳಕು ನೀಡದೇ ಬಿಕೋ ಎನ್ನುತ್ತಿವೆ. ಇನ್ನು ನಿರ್ವಹಣೆಯಲ್ಲಿ ವಿಫಲವಾಗಿರುವ ಎಸ್.ಎಂ.ಎಸ್. ಎಲೆಕ್ಟ್ರಾನಿಕ್ಸ್ ಸಂಸ್ಥೆ ನಿಯಮಗಳನ್ನು ಗಾಳಿಗೆ ತೂರಿದ್ದು, ಈ ಸಂಬಂಧ ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲಿ ಅಥವಾ ಇತರೆ ಜನಪ್ರತಿನಿಧಿಗಳಾಗಲಿ ಪ್ರಶ್ನೆ ಮಾಡಿಲ್ಲ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಿಕೆನ್ಯೂಸ್ ನೌ ಜತೆ ತಮ್ಮ ಅಸಮಾಧಾನ ತೋಡಿಕೊಂಡಿದ್ದು, ರಾತ್ರಿ ಹೊತ್ತು ಕೆರೆಯ ಮೇಲೆ ಸಂಚಾರ ಮಾಡುವುದು ಕಷ್ಟವಾಗಿದೆ. ಅದರಲ್ಲೂ ಉತ್ತಮ ಮಳೆಯಾಗಿ ಕೆರೆ ತುಂಬಿದ್ದು, ಕತ್ತಲಲ್ಲಿ ವಾಹನ ಸವಾರರು ಹರಸಾಹಸ ಮಾಡಿ ವಾಹನ ಚಲಾಯಿಸಬೇಕಾಗಿದೆ. ಹೆಚ್ಚುಕಮ್ಮಿಯಾದರೆ ಪ್ರಾಣಕ್ಕೆ ಅಪಾಯ. ಕೂಡಲೇ ಪಟ್ಟಣ ಪಂಚಾಯಿತಿ ವಿದ್ಯುತ್ ದೀಪಗಳನ್ನು ದುರಸ್ಥಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಪಟ್ಟಣದಲ್ಲಿ ಅಮಾನಿ ಭೈರಸಾಗರ ಕೆರೆ ಕಟ್ಟೆಯ ಮೇಲೆ ಅಳವಡಿಸಿರುವ ದಾರಿ ದೀಪಗಳು ಉರಿಯದೇ ಇರುವುದು ನಿಜ. ಕಾರಣ ಕೇಬಲ್ ಕಟ್ ಆಗಿದ್ದು, ಇದರ ಜತೆಗೆ ದೀಪಗಳು ಕೆಟ್ಟಿವೆ. ಇದರಿಂದ ಸಮಸ್ಯೆ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಲೈಟ್ʼಗಳನ್ನು ಅಳವಡಿಸಲು ಶಾಸಕರು ಭರವಸೆ ನೀಡಿದ್ದು, ಟೆಂಡರ್ ಕರೆದು ಶೀಘ್ರವಾಗಿ ಎಲ್ಲವನ್ನೂ ಸರಿಪಡಿಸಲಾಗುವುದು.
ರಾಜಶೇಖರ್, ಮುಖ್ಯಾಧಿಕಾರಿ, ಗುಡಿಬಂಡೆ ಪಟ್ಟಣ ಪಂಚಾಯಿತಿ
ಗುಡಿಬಂಡೆ ಪಟ್ಟಣದಲ್ಲಿ ಅಳವಡಿಸಿರುವ ದಾರಿ ದೀಪಗಳ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಹಣ ದುರುಪಯೋಗವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ದೀಪಗಳ ನಿರ್ವಹಣೆಯ ಗುತ್ತಿಗೆದಾರರನ್ನು ಬದಲಾಯಿಸಲು ಒತ್ತಾಯಿಸಿದ್ದೇವೆ. ಅದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಬುಲೆಟ್ ಶ್ರೀನಿವಾಸ್, ಅಧ್ಯಕ್ಷರು, ಜಯಕರ್ನಾಟಕ, ಗುಡಿಬಂಡೆ ತಾಲೂಕು
ಚಿತ್ರ :- ಪಟ್ಟಣ ಪಂಚಾಯತಿ ವತಿಯಿಂದ ಅಮಾನಿ ಬೈರಸಾಗರ ಕೆರೆ ಕಟ್ಟೆ ಮೇಲೆ ಬೀದಿ ದೀಪಗಳನ್ನು ಅಳವಡಿಸಿದ್ದು ಇವು ಉರಿಯದೇ ಕೇವಲ ಮಾಡಲ್‍ಗಳಂತೆ ನಿಂತು ಸಾರ್ವಜನಿಕ ಬಳಕೆಗೆ ಬಾರದಿರುವ ಸ್ವಿಚ್ ಆಫ್ ಆಗಿರುವ ದಾರಿ ದೀಪಗಳು.