ಬಾಗೇಪಲ್ಲಿ ಬಿಜೆಪಿಯಲ್ಲಿ ಬಣಗಳು ಇಲ್ಲ ಎಂದ ಸಂಸದರು
by Ra Na Gopala Reddy Bagepalli
ಬಾಗೇಪಲ್ಲಿ: ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯ ಬಹು ಮುಖ್ಯ ಚಿತ್ರಾವತಿ ನದಿಯು ಬಾಗೇಪಲ್ಲಿ ಜನರ ಪಾಲಿಗೆ ಸಾಕ್ಷಾತ್ ದೇವತೆಯಾಗಿದ್ದಾಳೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಅವರು ಇಂದು ತುಂಬಿ ಹರಿಯುತ್ತಿರುವ ಚಿತ್ರಾವತಿ ಅಣೆಕಟ್ಟೆಗೆ ಬಾಗೀನ ಅರ್ಪಿಸಿ ಮಾತನಾಡುತ್ತಾ; ಕುಡಿಯಲು ನೀರು ಕೊಟ್ಟು, ಬೆಳೆಗಳಿಗೆ ನೀರುಣಿಸಿ, ಸಸ್ಯ ಹಾಗೂ ಪ್ರಾಣಿ ಸಂಕುಲಗಳನ್ನು ಸಲಹುತ್ತಿರುವ ಈ ಚಿತ್ರಾವತಿಯೊಂದಿಗೆ ಭಾವನಾತ್ಮಕವಾದ ಸಂಬಂಧವನ್ನು ಇಲ್ಲಿನ ಪೂರ್ವಿಕರು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಚ್ಚೇಗೌಡ
ನದಿಯನ್ನು ದೇವತೆಯೆಂದೇ ಪೂಜಿಸುತ್ತಿದ್ದರಲ್ಲದೆ ದೇವಲೋಕದ ಅಪ್ಸರೆ “ಚಿತ್ರೆಯ” ಹೆಸರನ್ನೆ ನದಿಗೆ ಇಟ್ಟಿದ್ದಾರೆ ಎಂದರು.
ಶುದ್ಧ ಕುಡಿಯುವ ನೀರನ್ನು ಈ ಭಾಗದ ಜನತೆಗೆ ನೀಡಬೇಕು ಎಂಬ ಆಲೋಚನೆಗಳು ರೂಪಗೊಂಡಾಗ, ಬಾಗೇಪಲ್ಲಿ ಪಟ್ಟಣದ ಹೊರವಲಯದ ಪರಗೋಡುವಿನ ಬಳಿ ಚಿತ್ರಾವತಿ ಅಣೆಕಟ್ಟಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ನೀರು ಸರಬರಾಜು ಮಾಡಬಹುದು ಎಂಬ ರೂಪರೇಷೆಗಳು ಯೋಜನೆಗಳು ಸಿದ್ದವಾಗಿ ಹಿಂದಿನವರು ಬಹಳ ಶ್ರಮಿಪಟ್ಟು ಈ ಅಣೆಕಟ್ಟೆಯನ್ನು ನಿರ್ಮಿಸಿದ್ದಾರೆ. ಈ ಅಣೆಕಟ್ಟೆಯಿಂದ 122 ಹಳ್ಳಿಗಳಿಗೆ ಪೈಪ್‌ಲೈನ್‌ಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಈ ಚಿತ್ರಾವತಿ ಅಣೆಕಟ್ಟು ನಿರ್ಮಾಣಗೊಂಡು ಫ್ಲೋರೈಡ್ ರಹಿತ ಶುದ್ದ ಕುಡಿಯುವ ನೀರನ್ನು ಜನತೆಗೆ ನೀಡುತ್ತಿದ್ದು 40 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಈಗ ಈ ಬ್ಯಾರೇಜ್ ತುಂಬಿದ್ದು, ಇನ್ನು ಎರಡು ವರ್ಷಗಳವರೆಗೂ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ತೊಂದರೆಯಿಲ್ಲ ಎಂದರು.
ಬಿಜೆಪಿಯಲ್ಲಿ ಬಣಗಳು ಇಲ್ಲ
ಬಿಜೆಪಿಯಲ್ಲಿ ಎರಡು ಬಣಗಳಿದ್ದು, ಒಂದು ಬಣದ ಮುಖಂಡರುಗಳು ಮಾತ್ರ ಇಲ್ಲಿಗೆ ಬಂದಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಬಿಜೆಪಿಯಲ್ಲಿ ಯಾವುದೇ ಬಣಗಳು ಇಲ್ಲ, ಎಲ್ಲರೂ ಒಂದೇ. ಒಬ್ಬೊಬ್ಬರ ಐಡಿಯಾಲಜಿ ಒಂದೊಂದು ರೀತಿ ಇರುತ್ತದೆ ಎಂದರು ಸಂಸದರು.
ಈಗ ನಾನು ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗ ಶರತ್ ಬಚ್ಛೇಗೌಡ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಅದೇ ರೀತಿ ಇಲ್ಲಿಯೂ ಇರಬಹುದು ಎಂದರು ಅವರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಕೆ.ಆರ್. ಅಂಜಿನಪ್ಪ, ಜಿ.ವಿ.ಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ಎಸ್.ಟ. ಚಂದ್ರಮೋಹನ್ ಬಾಬು, ಮುಖಂಡರಾದ ಲಕ್ಷ್ಮೀನಾರಾಯಣ, ಲೋಕೇಶ್, ಕೆ.ಡಿ.ಪಿ.ಸದಸ್ಯ ಮಂಜುನಾಥ್, ಜಿಬಿವುಲ್ಲಾ ಮತ್ತಿತರೆ ಮುಖಂಡರು ಹಾಜರಿದ್ದರು.