ನೂರು ಜನ ಅಡ್ಡ ಬಂದರೂ ಕೋಮುಲ್ ವಿಭಜಿಸುವುದು ಖಚಿತ ಎಂದ ಸಚಿವರು
ಚಿಕ್ಕಬಳ್ಳಾಪುರ: ಶಾಸಕರಾದ ಶಿವಶಂಕರ ರೆಡ್ಡಿ, ರಮೇಶ್ ಕುಮಾರ್ ಅವರಂತಹ ನೂರು ಜನ ಅಡ್ಡ ಬಂದರೂ ಕೋಮುಲ್ ವಿಭಜಿಸುವುದಂತೂ ಖಚಿತ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ನಡಿ ಸಾಲ ವಿತರಣೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡಿಸಲು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದಿದ್ದರು. ಆದರೆ ಅವರ ಕೈಯಲ್ಲಿ ಆಗಲಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನಮ್ಮ ಜಿಲ್ಲೆಯ ಪಾಲು ನಮಗೆ ಸಿಗಬೇಕು ಎಂದು ಕೋರಿದ್ದೇನೆ. ಪ್ರತಿ ಬಾರಿ ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟಕ್ಕೆ ಚಿಕ್ಕಬಳ್ಳಾಪುರದ ರೈತರು ಹೋಗಬೇಕೆಂದರೆ ಸಾಧ್ಯವಿಲ್ಲ. ಇದರಲ್ಲಿ ಶಿವಶಂಕರರೆಡ್ಡಿ ಅವರು ರಾಜಕೀಯ ಮಾಡಬಾರದು ಎಂದರು.
ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಶಾಸಕ ರಮೇಶ್ ಕುಮಾರ್ ರಿಂಗ್ ಮಾಸ್ಟರ್ ಆಗಿದ್ದಾರೆ. ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಭಜನೆಗೆ ಬಿಡುತ್ತಿಲ್ಲ. ಶ್ರೀನಿವಾಸಗೌಡರು ರಮೇಶ್ ಕುಮಾರ್ ಅವರಿಂದ ಮಕ್ಮಲ್ ಟೋಪಿ ಹಾಕಿಸಿಕೊಳ್ಳುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಬೆರೆಸಲಾಗುತ್ತಿದೆ. ಇದರಲ್ಲಿ ಪಾರದರ್ಶಕ ತನಿಖೆಯಾಗಬೇಕಿದ್ದು, ತನಿಖೆಗೆ ಒಪ್ಪದೆ ತಡೆಯಾಜ್ಞೆ ತಂದಿದ್ದಾರೆ. ಇದರಲ್ಲೇ ಕಳ್ಳರು ಯಾರು ಎಂದು ಗೊತ್ತಾಗುತ್ತದೆ. ಸಾಚ ಆಗಿದ್ದರೆ ತನಿಖೆ ಆಗಿ ಸತ್ಯ ಎಂದು ಹೇಳುತ್ತಿದ್ದರು. ಸತ್ಯ ಹೊರಗೆ ಬಂದರೆ ಜೈಲಿಗೆ ಹೋಗುತ್ತೀರಿ ಎಂದು ಗೊತ್ತಿದೆ. ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರಗೆಳೆಯದೆ ನಾನು ವಿರಮಿಸುವುದಿಲ್ಲ. ಇಂತಹ ಭ್ರಷ್ಟಾಚಾರಿಗಳಿಗೆ ಸಹಕಾರ ಇಲಾಖೆಯಲ್ಲಿ ಅವಕಾಶವಿದ್ದು, ಇದನ್ನು ಮುಖ್ಯಮಂತ್ರಿಗಳು, ಸಹಕಾರ ಸಚಿವರು ಗಮನಿಸಿದ್ದಾರೆ ಎಂದರು.
ಗೌರಿಬಿದನೂರಿಗೆ ಶಾಸಕರು ನೀರು ನೀಡಲಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮಾಡುತ್ತೇನೆ. ಮಂಚೇನಹಳ್ಳಿಯಲ್ಲಿ ತಾಯಿ ಮತ್ತು ಶಿಶು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಗೌರಿಬಿದನೂರಿನಲ್ಲೂ ತಾಲೂಕು ಆಸ್ಪತ್ರೆ ನಿರ್ಮಿಸಲಾಗುವುದು. ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಮುಂದಿನ ಮೂರು ತಿಂಗಳೊಳಗೆ ಜಮೀನು ನೀಡಲಾಗುವುದು. ಎತ್ತಿನಹೊಳೆ ಯೋಜನೆಯಡಿ ಹೆಚ್ಚು ಅನುದಾನ ನೀಡಿದ್ದು, ಶೀಘ್ರದಲ್ಲೇ ನೀರು ನೀಡಲಾಗುವುದು. ಕೃಷ್ಣಾ ನದಿ ನೀರಿನ ಪಾಲನ್ನು ಈ ಭಾಗದ ರೈತರಿಗೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ. ಆಂಧ್ರಪ್ರದೇಶದಿಂದಲೂ ನೀರು ಹಂಚಿಕೆ ಮಾಡಲು ಚರ್ಚಿಸಲಾಗಿದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಹೈನುಗಾರಿಕೆ ಉಪಕಸುಬಾಗಿದ್ದು, ಇದಕ್ಕಾಗಿ ಕೋಮುಲ್ ವಿಭಜಿಸಬೇಕಿದೆ. ಇದಕ್ಕೆ ಯಾವ ದೊಣ್ಣೆನಾಯಕರ ಅಪ್ಪಣೆ ಬೇಕಿಲ್ಲ. ಆದರೆ ಇಂದು ಕೆಲ ಸ್ವಾರ್ಥಿಗಳು ಅವರ ಕಪಿಮುಷ್ಠಿಯಲ್ಲಿ ಡಿಸಿಸಿ ಬ್ಯಾಂಕ್, ಕೋಮುಲ್ ಅನ್ನು ಇಟ್ಟುಕೊಂಡು ಅದರಿಂದ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ.
ಡಾ.ಕೆ.ಸುಧಾಕರ್, ಆರೋಗ್ಯ ಸಚಿವ & ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ
ಜಿಲ್ಲೆಗೆ ನ್ಯಾಯ ತಂದುಕೊಡುತ್ತೇನೆ
ಡಿಸಿಸಿ ಬ್ಯಾಂಕ್ ನಡಿ ಎರಡೂವರೆ ಸಾವಿರ ಸಂಘಗಳನ್ನು ರಚಿಸಲಾಗಿದೆ. ಇದಕ್ಕೆ ಎಷ್ಟು ಸಾಲ ನೀಡಲಾಗಿದೆ ಎಂದು ಕೇಳಬೇಕಿದೆ. ಕೆಜಿಎಫ್ ಹಾಗೂ ಶ್ರೀನಿವಾಸಪುರಕ್ಕೆ 300-400 ಕೋಟಿ ರೂ. ನೀಡಲಾಗುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣವಾಗಿದೆ. ಡಿಸಿಸಿ ಬ್ಯಾಂಕ್ ಯಾರಪ್ಪನ ಆಸ್ತಿಯೂ ಅಲ್ಲ. ಡಿಸಿಸಿ ಬ್ಯಾಂಕ್ ಗೋವಿಂದೇಗೌಡರದ್ದೂ ಅಲ್ಲ, ರಮೇಶ್ ಕುಮಾರ್ ಅವರದ್ದೂ ಅಲ್ಲ. ಜಿಲ್ಲೆಗೆ ಸಿಗಬೇಕಾದ ಪಾಲನ್ನು ನ್ಯಾಯಯುತವಾಗಿ ತಂದುಕೊಡುತ್ತೇನೆ. ಇಲ್ಲದಿದ್ದರೆ ಸಚಿವನಾಗಿ ಮುಂದುವರಿಯುವುದಿಲ್ಲ ಎಂದರು.
ಬ್ಯಾಂಕ್‍ನ ತನಿಖೆಗೂ ಅಡ್ಡಿಪಡಿಸಿದ್ದಾರೆ. ಇದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಿಂಗ್ ಮಾಸ್ಟರ್ ಆಗಿದ್ದು, ಅವರಂತಹ ಡಂಭಾಚಾರದ ವ್ಯಕ್ತಿಯನ್ನು ಜೀವನದಲ್ಲೇ ನೋಡಿಲ್ಲ. ಶ್ರೀನಿವಾಸಪುರದ ಜನರು ಅಮಾಯಕರಾಗಿ ಅವರನ್ನು ನಂಬುತ್ತಿದ್ದಾರೆ ಎಂದರು.