ಕೆಲಸ ಮಾಡದ ಅಧಿಕಾರಿಗಳು ಮನೆಗೆ ಹೋಗಿ ಎಂದ ಶಾಸಕರು; ಗುಡಿಬಂಡೆ ಪ್ರವಾಸೋದ್ಯಮಕ್ಕೆ 6 ಕೋಟಿ ರೂ. ಅನುದಾನ
By GS Bharath Gudibande
ಗುಡಿಬಂಡೆ: ಬಡವರಿಗೆ, ಜನಸಾಮಾನ್ಯರಿಗೆ ಕೆಲಸ ಮಾಡಲು ಕಚೇರಿಗೆ ಅಲೆದಾಡಿಸುತ್ತಾ, ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳು ವಾಪಸ್ ಮನೆಗೆ ಹೋಗಿ. ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಬಡವರ, ಜನಸಾಮಾನ್ಯರ ಕೆಲಸಗಳನ್ನು ಬೇಗ ಮಾಡಿಕೊಡಿ. ಬೇಜವಾಬ್ದಾರಿಯಿಂದ ಸುಖಾಸುಮ್ಮನೆ ಕಚೇರಿಗೆ ಅಲೆದಾಡಿಸುವುದು ಬಿಡಬೇಕು. ಕೆಲಸ ಮಾಡಲು ಇಷ್ಟ ಇಲ್ಲದ ಅಧಿಕಾರಿಗಳು ವಾಪಸ್ ಹೋಗಿ ಎಂದು ಅವರು ಹೇಳಿದರು.
ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ನನ್ನಿಂದ ಸಹಿಸಲು ಸಾಧ್ಯವಿಲ್ಲ. ವರ್ತನೆ ತಿದ್ದಿಕೊಳ್ಳದಿದ್ದರೆ ಕಠಿಣ ಕ್ರಂ ಖಚಿತ ಎಂದು ಸುಬ್ಬಾರೆಡ್ಡಿ ಅವರು ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟರು.
ಜಾತಿಗೆ ಸೀಮಿತ ಬೇಡ
ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳು ಕೇವಲ ಜಾತಿಗೆ ಸೀಮಿತವಾಗುತ್ತಿರುವುದನ್ನು ಗಮನಿಸಬಹುದು. ಆದರೆ ಶ್ರೀ ವಾಲ್ಮೀಕಿ ಮಹರ್ಷಿ ಎಲ್ಲರಿಗೂ ಆದರ್ಶರಾಗಿದ್ದರು. ಪ್ರಪಂಚದ ಎಲ್ಲರಿಗೂ ಗುರುಗಳಾಗಿದ್ದರು. ಹಾಗಾಗಿ ನಾವು ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು ಶಾಸಕರು.
ಗುಡಿಬಂಡೆ ಪ್ರವಾಸೋದ್ಯಮಕ್ಕೆ 6 ಕೋಟಿ ರೂ. ಅನುದಾನ
ಪಟ್ಟಣದ ಸುರಸದ್ಮಗಿರಿ ಬೆಟ್ಟ ಹಾಗೂ ಅಮಾನಿ ಭೈರಸಾಗರ ಕೆರೆಯಿಂದ ಬೆಟ್ಟದ ತಪ್ಪಲಿನವರಗೂ ವಿದ್ಯುತ್ ದ್ವೀಪಗಳ ಅಳವಡಿಕೆ ಹಾಗೂ ಕೆರೆ ಅಂಗಳದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲು ಒಂದು ತಿಂಗಳ ಒಳಗಾಗಿ ಯೋಜನೆಯನ್ನು ಕಾರ್ಯಗತ ಮಾಡಿ ಉದ್ಘಾಟನೆ ಮಾಡುತ್ತೇನೆ ಎಂದು ಅವರು ಇದೇ ವೇಳೆ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿಬ್ಗತ್ತುಲ್ಲಾ, ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು, ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಶೇಷಾದ್ರಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆದಿನಾರಾಯಣಪ್ಪ, ಮುಖ್ಯ ಭಾಷಣಕಾರ ರಾಜಶೇಖರ್, ಗೌರವಾಧ್ಯಕ್ಷ ಸ.ನ ನಾಗೇಂದ್ರ, ದಪ್ಪರ್ತಿ ನಂಜುಂಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ್, ಪಪಂ ಸದಸ್ಯರಾದ ರಾಜೇಶ್. ಪತ್ರಕರ್ತ ಸಂಘದ ಅಧ್ಯಕ್ಷ ಬಿ.ಮಂಜುನಾಥ್, ವಾಲ್ಮೀಕಿ ಸಮುದಾಯದ ಮುಖಂಡರು ಸೇರಿ ಮುಂತಾದವರು ಭಾಗವಹಿಸಿದ್ದರು.