ನಾಟಕ ಬಿಟ್ಟು ಮೀಸಲಾತಿ ಕೊಡದಿದ್ದರೆ ಉಗ್ರ ಹೋರಾಟ
ತುಮಕೂರು: ಕರ್ನಾಟಕ ನಾಯಕರ ಒಕ್ಕೂಟ, ಬೆಂಗಳೂರು ಹಾಗೂ ನಾಯಕರ ಐತಿಹಾಸಿಕ ಸಂಸ್ಥಾನವಾದ ಹಾಗಲವಾಡಿ ಗ್ರಾಮಸ್ಥರ ಮುಂದಾಳತ್ವದಲ್ಲಿ ಅದ್ಧೂರಿಯಾಗಿ ಇಂದು ಆದಿಕವಿ, ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಹಾಗಲವಾಡಿಯ ಶ್ರೀರಾಮ ಮಂದಿರದಿಂದ ಕರಿಯಮ್ಮ ದೇವಿ ದೇವಾಲಯ ಬಳಿ ಇರುವ ಕಲ್ಯಾಣ ಮಂಟಪದ ವರೆಗೆ ಬೃಹತ್ ರ್ಯಾಲಿ ನಡೆಸಲಾಯಿತು. ಜೊತೆಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು, “ಇಂದು ವಾಲ್ಮೀಕಿ ಜಯಂತಿ. ಇದು ಇಡೀ ಪರಿಶಿಷ್ಟ ವರ್ಗಕ್ಕೆ ಪವಿತ್ರ ದಿನ. ಇಡೀ ನಾಡಿಗೆ ರಾಮಾಯಣದ ಮೂಲಕ ಸಂಸ್ಕೃತಿ, ಸಂಸ್ಕಾರ ಹೇಳಿಕೊಟ್ಟವರು ವಾಲ್ಮೀಕಿ. ಅವರ ಆದರ್ಶಗಳನ್ನು ಜಾತ್ಯಾತೀತವಾಗಿ ನಾವು ಎಲ್ಲರೂ ಪಾಲಿಸಬೇಕು” ಎಂದು ಹೇಳಿದರು.
ಆದಿಕವಿ ಪಂಪ ಅಲ್ಲ ವಾಲ್ಮೀಕಿ
ಆದಿ ಕವಿ ಪಂಪ ಎಂದು ಬಹುತೇಕರು ಹೇಳುತ್ತಾರೆ. ಅದರೆ ಅದು ತಪ್ಪು ಮನುಕುಲದ ನಾಗರಿಕತೆ ಶುರುವಾಗುವ ಹೊತ್ತಿನಲ್ಲಿ ರಾಮಾಯಣ ಬರೆದವರು ವಾಲ್ಮೀಕಿ. ವಾಲ್ಮೀಕಿ ರಾಮಾಯಣದ ನಂತರವೇ ಎಲ್ಲ ಕೃತಿಗಳು ಬಂದಿದ್ದು. ಹೀಗಾಗಿ ನಿಜವಾದ ಆದಿಕವಿ ಮಹರ್ಷಿ ವಾಲ್ಮೀಕಿ. ಆದರೆ ವಾಲ್ಮೀಕಿ ಇತಿಹಾಸವನ್ನು ತಿರುಚುವ ಕುಚೋದ್ಯದ ಕೆಲಸಗಳು ಅನಾದಿ ಕಾಲದಿಂದಲೂ ನಢಯುತ್ತಲೇ ಇದೆ. ಇನ್ನೂ ಹಲವರು ವಾಲ್ಮೀಕಿ ದರೋಡೆಕೋರನಾಗಿದ್ದ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇದುಶುದ್ಧ ಸುಳು, ಇತಿಹಾಸ ತಿರಿಚುವ ಪ್ರಯತ್ನ ಅಷ್ಟೇ. ವಾಲ್ಮೀಕಿ ಒಬ್ಬ ಬೇಡ. ಬೇಟೆಯಾಡಿ ಜೀವನ ಸಾಗಿಸುತ್ತಿದ್ದವನು ರಾಮಾಯಣ ಮಹಾಗ್ರಂಥ ರಚನೆ ಮಾಡುವ ಮೂಲಕ ತನ್ನ ಬದುಕನ್ನೇ ಬದಲಿಸಿಕೊಂಡವರು ಎಂದು ಹೇಳಿದರು.
ರಾಮನಿದ್ದ ಅಯೋದ್ಯೆಯಲ್ಲಿ ವಾಲ್ಮೀಕಿಯೂ ಇರಲಿ
ಶ್ರೀರಾಮನನ್ನು ಪೂಜಿಸುವಂತೆ ಮಾಡಿದ್ದು ವಾಲ್ಮೀಕಿ. ರಾಮನ ಸೃಷ್ಟಿಕರ್ತ ವಾಲ್ಮೀಕಿ. ಎಲ್ಲಿ ರಾಮನಿರುತ್ತಾನೋ ಅಲ್ಲಿ ವಾಲ್ಮೀಕಿ ಇರುತ್ತಾರೆ. ಎಲ್ಲಿ ವಾಲ್ಮೀಕಿ ಇರುತ್ತಾರೋ ಅಲ್ಲಿ ರಾಮನಿರುತ್ತಾನೆ. ಆದರೆ ಬಿಜೆಪಿ ನಾಯಕರು ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಿದ್ದಾರೆ ಹೊರತು, ವಾಲ್ಮೀಕಿ ಪ್ರತಿಮೆ ನಿರ್ಮಾಣದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ನಿಜಕ್ಕೂ ಬಿಜೆಪಿ ನಾಯಕರಿಗೆ ರಾಮನ ಬಗ್ಗೆ ಗೌರವ ಇದ್ದರೆ ಅಯೋದ್ಯೆಯಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಲಿ ಎಂದು ರಮೇಶ್ ಹಿರೇಜಂಬೂರು ಸವಾಲು ಹಾಕಿದರು.
ಈಗ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತದೆ. ಈಗ ಪರಿಶಿಷ್ಟ ವರ್ಗ ಶೇ.7.5 ಮೀಸಲಾತಿ ಕೇಳಿದರೆ ಮುಖ್ಯಮಂತ್ರಿ, ಮಂತ್ರಿಗಳು ಚುನಾವಣೆ ನೆಪ ಹೇಳುತ್ತಾರೆ. ಆದರೆ ಚುನಾವಣೆ ಮುಗಿದ ತಕ್ಷಣ ರಾಜ್ಯ ಸರ್ಕಾರ ಶೇ.7.5 ಮೀಸಲಾತಿ ಘೋಷಣೆ ಮಾಡದೆ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಆಗ ಮುಂದಾಗುವ ಅನಾಹುತಗಳಿಗೆ ರಾಜ್ಯಸರ್ಕಸರವೇ ಜವಾಬ್ದಾರಿ ಹೊರಬೇಕಾಗುತ್ತದೆ. ಆಗ ಅನಗತ್ಯವಾಗಿ ವಾಲ್ಮೀಕಿ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಎಂದು ರಮೇಶ್ ಹಿರೇಜಂಬೂರು ಎಚ್ಚರಿಸಿದರು.
ಈ ವೇಳೆ ಜನಪದ ಕಲಾತಂಡಗಳ ಮೂಲಕ ವೀರಗಾಸೆ, ಮದಕರಿ ನಾಯಕರ ಕುಣಿತ ಪ್ರದರ್ಶನ ಮಾಡಲಾಯಿತು. ನಾಯಕರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಹಾಗಲವಾಡಿ ಶಂಕರ್, ಗ್ರಾಮದ ಮುಖಂಡರಾದ ರಾಜಣ್ಣ, ಕೃಷ್ಣಯ್ಯ, ವಿಶ್ವನಾಥ್, ಭರತ್, ಮಂಜುನಾಥ್ ಹಾಗೂ ಗ್ರಾಮದ ಎಲ್ಲ ಗ್ರಾಮ ಪಂಚಾಯತಿ ಸದಸ್ಯರು, ಪ್ರಮುಖರು ಭಾಗವಹಿಸಿದ್ದರು.