ಕಟ್ಟಿದ ಹದಿನಾಲ್ಕು ವರ್ಷಕ್ಕೇ ಕಟ್ಟಡದ ಮೇಲ್ಛಾವಣಿ ಕುಸಿತ
ಪೊಲೀಸ್ ಕ್ವಾಟ್ರಸ್ʼಗಳ ಕಳಪೆ ನಿರ್ಮಾಣ; ಬೆಂಗಳೂರು ನಂತರ ಬಾಗೇಪಲ್ಲಿಯಲ್ಲೂ ರಕ್ಷಕರು ಹೈರಾಣ
by Ra Na Gopala Reddy Bagepalli
ಬಾಗೇಪಲ್ಲಿ: ಬೆಂಗಳೂರಿನಲ್ಲಿ ನಿರ್ಮಾಣ ಮಾಡಿದ ಮೂರೇ ವರ್ಷದಲ್ಲಿ ಪೊಲೀಸ್ ವಸತಿ ಸಮುಚ್ಛಯ ವಾಲಿದ ಬೆನ್ನಲ್ಲೇ ಇಲ್ಲಿನ ಪೊಲೀಸ್ ವಸತಿ ಸಮುಚ್ಛಯ ನಿರಂತರ ಮಳೆಗೆ ಅಪಾಯಕ್ಕೆ ಸಿಲುಕಿದೆ.
ಬುಧವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಮೂರು ಅಂತಸ್ತಿನ ಮಹಡಿ ಮನೆಯ ಬಾಲ್ಕನಿ ಕಟ್ಟಡ ಮುರಿದುಬಿದ್ದಿದ್ದು, ಪರಿಣಾಮವಾಗಿ ಇಡೀ ಕ್ವಾಟ್ರಸ್ʼನಲ್ಲಿ ವಾಸ ಮಾಡುತ್ತಿದ್ದವರೆಲ್ಲ ತೀವ್ರ ಗಾಬರಿಗೆ ಒಳಗಾಗಿದ್ದಾರೆ.
ಸರ್ಕಲ್ ಇನಸ್ಪೆಕ್ಟರ್ ನಾಗರಾಜ್ಾವರು ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.
2007ರಲ್ಲಿ ನಾಲ್ಕು ಬ್ಲಾಕ್ಗಳಲ್ಲಿ ಸುಮಾರು 20 ಮನೆಗಳನ್ನು ಇಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ವಸತಿ ಗೃಹಗಳ ಪೈಕಿ ಆರು ಮನೆಗಳು ಸುಸ್ಥಿತಿಯಲ್ಲಿ ಇರಲಿಲ್ಲ. ಮಳೆ ಬಿದ್ದಾಗ ಎರಡು ಮತ್ತು ಮೂರನೇ ಮಹಡಿಯಲ್ಲಿನ ಮೇಲ್ವಾವಣೆ ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಸತತವಾಗಿ ಸೋರಕೆಯುಂಟಾದ ಕಾರಣದಿಂದ ಎರಡು ಮತ್ತು ಮೂರು ಅಂತಸ್ತಿನ ಮಹಡಿಯ ಬಾಲ್ಕನಿ ಭಾರೀ ಶಬ್ದದಿಂದ ಕುಸಿದುಬಿದ್ದಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಅದೃಷ್ಠವಶಾತ್ ಈ ಮೂರನೇ ಅಂತಸ್ತಿನ ಮನೆಯಲ್ಲಿ ಯಾರು ವಾಸ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉಳಿದ ಕಟ್ಟಡಗಳಲ್ಲಿ ವಾಸ ಮಾಡುತ್ತಿರುವವರಿಗೆ ಈ ಕಟ್ಟಡ ಎಲ್ಲಿ ಮುರಿದುಬೀಳುತ್ತದೋ ಎಂಬ ಆತಂಕ ಉಂಟಾಗಿದೆ.
ಈ ವಸತಿ ಗೃಹಗಳಲ್ಲಿರುವ ಬಹುತೇಕ ಕುಟುಂಬಗಳು ಈಗಾಗಲೇ ಖಾಲಿ ಮಾಡಿ ಬೇರೆಡೆಗೆ ಶಿಫ್ಟ್ ಆಗಿವೆ. ಕೇವಲ ಹದಿನಾಲ್ಕು ವರ್ಷಗಳ ಹಿಂದೆಯಷ್ಷೇ ನಿರ್ಮಿಸಲಾಗಿದ್ದ ಕಟ್ಟಡಗಳ ಕಥೆಯೇ ಹೀಗಾದರೆ ಗತಿಯೇನು? ಇಂತಹ ಕಳಪೆ ಕಾಮಗಾರಿಯನ್ನು ಮಾಡಿರುವ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.