ಸಚಿವ ಡಾ.ಕೆ.ಸುಧಾಕರ್ ಅವರಿಂದ ದ್ವೇಷದ ರಾಜಕಾರಣ; ಕಾಂಗ್ರೆಸ್ ಮುಖಂಡರಿಂದ ಉಸ್ತುವಾರಿ ಸಚಿವರ ಮೇಲೆ ವಾಗ್ದಾಳಿ
by M Krishnappa Chikkaballapura
ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲೆಯಲ್ಲಿ ದ್ವೆಷದ ರಾಜಕಾರಣ ಮಾಡುತಿದ್ದಾರೆ. ಇವರ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಾಯರ್ ನಾರಾಯಣಸ್ವಾಮಿ ಆರೋಪ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; ಕಾಂಗ್ರಸ್ ಪಕ್ಷದಿಂದ ಎಲ್ಲವನ್ನೂ ಪಡೆದು ಸ್ವಾರ್ಥಕ್ಕಾಗಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿಕೊಂಡು ಸಚಿವ ಸ್ಥಾನ ಗಿಟ್ಟಿಸಿದ ಸುಧಾಕರ್ ತಮ್ಮ ಹಳೆಯ ಜೀವನವನ್ನು ನೆನಪು ಮಾಡಿಕೊಳ್ಳಬೇಕು. ಶಿಕ್ಷಕನ ಮಗನೊಬ್ಬ ಕೋಟ್ಯಾಧೀಶ ಹೇಗಾದ ಎಂಬುದು ಜಿಲ್ಲೆಯ ಜನತೆಗೆ ತಿಳಿದ ವಿಷಯವೇ ಆಗಿದೆ ಎಂದರು.
ಸುಧಾಕರ್ ಅವರು ಕೊರೋನ ಸಂದರ್ಭದಲ್ಲಿ ರೆಮಿಡಿಸ್ವೀರ್ ಖರೀದಿ, ಹಾಸಿಗೆಗಳ ಹಂಚಿಕೆ, ಕೊರೋನ ಸಾಮಗ್ರಿ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಅವರ ಮೇಲೆ ಇದ್ದು, ಈ ಬಗ್ಗೆ ಸರಕಾರ ತನಿಖೆ ನಡೆಸಬೇಕೆಂದು ಅವರು ಒತ್ತಾಯ ಮಾಡಿದರು.
ಲೀಟರ್ ಹಾಲಿಗೆ 30 ರೂ. ಕೊಡಲಿ
ಕೊಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್ ಮಾತನಾಡಿ; “ಕೊಚಿಮುಲ್ ಇಬ್ಬಾಗಕ್ಕೆ ಯಾರದೆ ವಿರೋಧ ಇಲ್ಲ. ಆದರೆ ಇಬ್ಬಾಗಕ್ಕೂ ಮುನ್ನ ಸಚಿವರು ಹಾಲು ಉತ್ಪಾದಕರಿಗೆ ಯಾವುದೇ ಸಂದರ್ಭದಲ್ಲಿ ಲೀಟರ್ ಹಾಲಿಗೆ 30 ರೂ. ಕೊಡುವುದಾಗಿ ಘೋಷಿಸಬೇಕು ಹಾಗೂ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಡೈರಿ ಮಾಡಬೇಕು. ಹಾಗೆ ಮಾಡದಿದ್ದರೆ ಮುಂದೆ ಹಾಲು ಉತ್ಪಾದಕರಿಗೆ ಡೈರಿ ವಿಭಜನೆಯಿಂದ ತೊಂದರೆ ಉಂಟಾಗಲಿದೆ” ಎಂದರು.
ಸಚಿವರ ಆರೋಪ ನಿರಾಧಾರ
ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ ಮಾತನಾಡಿ; “ಡಿಸಿಸಿ ಬ್ಯಾಂಕಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವೇದಿಕೆಗಳಲ್ಲಿ ಆರೋಪ ಮಾಡುತಿರುವ ಸಚಿವ ಸುಧಾಕರ್ ಅವರ ಆರೋಪ ನಿರಾಧಾರ. ಸರಕಾರದ ಮಟ್ಟದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿ ಇದ್ದು, ಸರಕಾರವೇ ಡಿಸಿಸಿ ಬ್ಯಾಂಕ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಏನೇನೂ ತಿಳಿಯದಿರುವುದು ಅವರ ಅಜ್ಞಾನಕ್ಕೆ ಹಿಡಿದ ಕನ್ನಡಿ” ಎಂದು ಟೀಕಿಸಿದರು.
ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿ; “ಡಾ.ಕೆ.ಸುಧಾಕರ್ ಒಬ್ಬ ಅವಕಾಶವಾದಿ ರಾಜಕಾರಣಿ. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲ ಈ ಮನುಷ್ಯನನ್ನು ಪ್ರಾರಂಭದಲ್ಲಿ ರಾಜಕೀಯವಾಗಿ ಬೆಳೆಸಿದ ಕಾರಣ ನಾವು ವಿಷಾದಪಡಬೇಕಿದೆ” ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಮುನೇಗೌಡ ಮಾತನಾಡಿ; “ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿದವರಿಗೆ ತಕ್ಕ ಶಾಸ್ತಿ ಕಾದಿದೆ. ಡಾ.ಕೆ.ಸುಧಾಕರ್ ಮತ್ತು ಅವರ ತಂದೆ ಪಿ.ಎನ್.ಕೇಶವರೆಡ್ಡಿ ಅವರು ಬೆಂಗಳೂರು ಮತ್ತು ಪೆರೇಸಂದ್ರ ಸುತ್ತಮುತ್ತ ಮಾಡಿರುವ ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯ ಬಗ್ಗೆ ತನಿಖೆ ನಡೆಯಬೇಕು” ಎಂದು ಒತ್ತಾಯ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ಪ್ರೆಸ್ ಸೂರಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಿತ್ರಾ ನಾರಾಯಣಸ್ವಾಮಿ, ಮುಖಂಡರಾದ ಮಮತಾಮೂರ್ತಿ, ಹನುಮಂತಪ್ಪ ಕಳವಾರ ಶ್ರೀಧರ್, ನಾಯನಹಳ್ಳಿ ನಾರಾಯಣಸ್ವಾಮಿ, ಪಟ್ರೇನಹಳ್ಳಿ ಕೃಷ್ಣ, ವೇಣುಗೋಪಾಲ್, ಕೆಪಿಸಿಸಿ ಕಾರ್ಮಿಕ ಸೆಲ್ ಅಧ್ಯಕ್ಷ ಕೋದಂಡ, ಯುವ ಮುಖಂಡ ಸಂತೋಷ್ ರಾಜ್, ಎನ್.ಬಾಬಾಜಾನ್ ಸೇರಿದಂತೆ ಇನ್ನಿತರೆ ಪ್ರಮುಖರು ಹಾಜರಿದ್ದರು.