ಆರ್.ಎಸ್.ಎಸ್ ದೇಶಭಕ್ತ ಸಂಘಟನೆ, ಯಾವುದೇ ಭೇದ ಇಲ್ಲ ಎಂದ ಸಂಘದ ತುಮಕೂರು ವಿಭಾಗದ ಪ್ರಮುಖ್ ರಾಜೇಶ್
By GS Bharath Gudibande
ಗುಡಿಬಂಡೆ: ಆರ್.ಎಸ್.ಎಸ್.ನಲ್ಲಿ ಜಾತಿ-ಮತ ವಯಸ್ಸಿನ ಭೇದವಿಲ್ಲ. ಭಾರತ ದೇಶ, ಧರ್ಮ, ಸಂಸ್ಕೃತಿ ಉಳಿವಿಗಾಗಿ ಸ್ವಯಂ ಸೇವಕನಿಗೆ ಸಂಸ್ಕಾರ ನೀಡಿ ದೇಶ ಕಟ್ಟುವ ಕೆಲಸಕ್ಕೆ ಸಿದ್ಧಗೊಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತುಮಕೂರು ವಿಭಾಗದ ಪ್ರಮುಖ್ ರಾಜೇಶ್ ಅವರು ತಿಳಿಸಿದರು.
ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ಕೊಡುಗೆ ನೀಡಬೇಕು
ದೇಶಕ್ಕಾಗಿ ಮತ್ತು ದೇಶದ ಒಳಿತಿಗಾಗಿ ಸಂಘ ಸ್ಥಾಪನೆಯಾಗಿದೆ. ಸಂಘಕ್ಕೆ ಬರುವ ಸ್ವಯಂ ಸೇವಕರ ಜಾತಿ, ಮತ, ಅಂತಸ್ತು, ವಯಸ್ಸು ಕೇಳುವುದಿಲ್ಲ. ಸಮಾಜಕ್ಕೆ ಏನಾದರೂ ಮಾಡ ಬಲ್ಲೆ ಎನ್ನವವನು ಸ್ವಯಂ ಸೇವಕ. ನಿತ್ಯ ಶಾಖೆಗಳಲ್ಲಿ ಸ್ವಯಂ ಸೇವಕರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ. ಜಾತಿ, ಮತ, ಪಂಥವೆನ್ನದೆ ದೇಶದ ಅಭಿವೃದ್ಧಿಗಾಗಿ ದುಡಿ ಯುವ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ದೇಶಕ್ಕೆ ಅಪಾಯ ಬಂದಾಗ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುವವರು ಸ್ವಯಂ ಸೇವಕರು ಎಂದರು ಅವರು.
ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್ ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಗಣವೇಷಧಾರಿಗಳಾಗಿ 150ಕ್ಕೂ ಅಧಿಕ ಮಂದಿ ಪಥಸಂಚಲನವನ್ನು ಪಟ್ಟಣದ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಿಂದ ಪ್ರಾರಂಭವಾಗಿ, ಬೆಸ್ಕಾಂ ಮುಂದೆ, ನಾಯಕರ ಕಾಲೋನಿ, ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆ, ಮಾರುತಿ ವೃತ್ತ, ವಿನಾಯಕ ನಗರದ ಪೋಸ್ಟ್ ಬಾಲಪ್ಪ ಮನೆ, ಸೊಪ್ಪಿನ ಪೇಟೆ, ಹೈಸ್ಕೂಲ್ ಪಕ್ಕ, ಮುಖ್ಯ ರಸ್ತೆ, ತಾಲ್ಲೂಕು ಕಚೇರಿ ಮುಂದೆ, ಹಳೆ ಎಸ್.ಬಿ.ಎಂ ವೃತ್ತ, ರಾಮಪಟ್ಟಣ ರಸ್ತೆ, ಮುಖಾಂತರ ನ್ಯೂ ಪಬ್ಲಿಕ್ ಶಾಲೆ ಆವರಣದಲ್ಲಿ ಸಾರ್ವಜನಿಕ ಸಭೆ ವರೆಗೆ ಪಥಸಂಚಲನ ನಡೆಯಿತು.
ಆಕರ್ಷಕ ಪಥಸಂಚಲನ
ಪಥಸಂಚಲನದ ಮಾರ್ಗದುದ್ದಕ್ಕೂ ರಂಗೋಲಿ, ಹೂ ಹಾಕಿ ಭಾರತ ಮಾತೆಗೆ ಜೈಕಾರ ಕೂಗಿ ದೇಶಭಕ್ತಿ ಮೆರೆದರು.ಬ್ಯಾಂಡ್ ಸೆಟ್ ನಾದಕ್ಕೆ ಹೆಜ್ಜೆ ಹಾಕಿದ ಸ್ವಯಂ ಸೇವಕರ ಶಿಸ್ತನ್ನು ಜನ ಕಣ್ತುಂಬಿಕೊಂಡರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಲ್ ಇನ್ಸ್ ಪೆಕ್ಟರ್ ಲಿಂಗರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್ ಸಾಗರ್, ಆರ್.ಎಸ್.ಎಸ್ ಜಿಲ್ಲಾ ಪ್ರಚಾರಕ ವೀರೇಶ್, ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಗೌರಿಶಂಕರ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಗ್ರಾಮ ವಿಕಾಸ ಶ್ರೀಧರ್ ಸಾಗರ್, ಜಿ ಎಸ್ ನಾಗರಾಜ್, ಅಶ್ವಥ್, ಬಾಲು, ಲಕ್ಷ್ಮೀಪತಿ, ಬಜರಂಗದಳ ಜಿಲ್ಲಾ ಸಂಚಾಲಕ ಜಿ.ಎ.ಅಮರೇಶ, ನರಸಿಂಹರೆಡ್ಡಿ. ಕಾರ್ಯಕರ್ತರಾದ ರವಿಕುಮಾರ. ರಾಜ್ ಗೋಪಾಲ್, ತಿಮ್ಮರೆಡ್ಡಿ, ಪದ್ಮಾವತಿ, ಚಂದ್ರ ಮುಂತಾದವರು ಉಪಸ್ಥಿತರಿದ್ದರು.