ಬಾಗೇಪಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಮರಣೆ
by Ra Na Gopala Reddy Bagepalli
ಬಾಗೇಪಲ್ಲಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ದಿವಂಗತ ರಂಗಾರೆಡ್ಡಿ ಕೋಡಿರಾಂಪುರ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವರು ಅಗಲಿದ ರಂಗಾರೆಡ್ಡಿ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿದರು.
ಡಾ.ನಯಾಜ್ ಅಹಮದ್ ಪ್ರಾಸ್ತಾವಿಕ ಭಾಷಣ ಮಾತನಾಡಿ, “ನಾನು ಪಿಎಚ್.ಡಿ. ಮಾಡುವ ಸಂದರ್ಭದಲ್ಲಿ ಜಾತಿ, ಧರ್ಮದ ಕಾರಣಕ್ಕೆ ನಾನು ಅಲ್ಪಸಂಖ್ಯಾತ ಆಗಿದ್ದ ಕಾರಣಕ್ಕೆ ನನಗೆ ಪಿಎಚ್.ಡಿ ಪದವಿಗೆ ಮಾರ್ಗದರ್ಶನ ಮಾಡಲು ಬಹಳಷ್ಟು ಜನ ನಿರಾಕರಿಸಿದಾಗ ನನ್ನ ಜೀವನದ ಉತ್ಸಾಹವೇ ಕುಂದು ಹೋಗಿತ್ತು. ಅಂಥ ಸಂಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದು ಸತತ ಐದು ವರ್ಷಗಳ ಕಾಲ ನನ್ನ ಸಂಶೋಧನೆಗೆ ಮಾರ್ಗದರ್ಶನ ಮಾಡಿ ಪಿಎಚ್.ಡಿ ಪದವಿ ಕೊಡಿಸಿದವರು ರಂಗಾರೆಡ್ಡಿ ಅವರು” ಎಂದರು.
ನನಗಷ್ಟೇ ಅಲ್ಲ ನನ್ನಂತಹ ಅನೇಕ ಹಿಂದುಳಿದ, ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅವರು ಮಾಡಿದ ಸಹಾಯ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನನ್ನ ಕೀರ್ತಿ, ಸಾಧನೆ ಎಲ್ಲವೂ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರಿಗೇ ಸೇರಿದ್ದು ಎಂದರು ನಯಾಜ್.
ನ್ಯಾಷನಲ್ ಕಾಲೇಜು ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಎ.ಕೆ.ನಿಂಗಪ್ಪ ಮಾತನಾಡಿ; “ಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ಅವರು ಕನ್ನಡ ಸಾಹಿತಿ, ಜನಪದ ತಜ್ಞ, ಪ್ರಗತಿಪರ ಚಿಂತಕ, ಹೋರಾಟಗಾರ. ಅವರು ಪ್ರಾಧ್ಯಾಪಕರಾಗಿ ಅತ್ಯುತ್ತಮ ಸೇವೆ ಮಾಡಿದ್ದಾರೆ. ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕೋಡಿರಾಂಪುರದವರು. ಗೌರಿಬಿದನೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಿವೃತ್ತಿ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು” ಎಂದು ನುಡಿದರು.
ಜನಪದ ಸಂಸ್ಕೃತಿ, ಸಾಲು ಹೊಂಗೆಯ ತಂಪು, ಬಂಡಾಯ ಜನಪದ, ನನ್ನೂರ ಹಾಡು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ 2015ರಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಯಕ್ಷಗಾನ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಾನಪದ ಅಕಾಡೆಮಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ಎ.ಜಿ.ಸುಧಾಕರ್ ಮಾತನಾಡಿ, “ಗುರು ಆದವರು ರಂಗಾರೆಡ್ಡಿ ಕೋಡಿರಾಂಪುರಂ ರವರಂತೆ ಇರಬೇಕು ಎಂದರು. ಬಿ.ಆರ್. ಕೃಷ್ಣ ಮಾತನಾಡಿ ರಂಗಾರೆಡ್ಡಿ ಕೋಡಿರಾಂಪುರಂ ರವರು ವೈಚಾರಿಕ ತತ್ವ ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಕೆಲಸ ಮಾಡಿದವರು” ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಾರಾಯಣಪ್ಪ, ವೆಂಕಟರಾಮರೆಡ್ಡಿ, ಹಸಿರು ಸೇನೆ ರೈತ ಮುಖಂಡೆ ಸಿ.ಉಮಾ, ಪತ್ರಕರ್ತರಾದ ಪಿ.ಎಸ್.ರಾಜೇಶ್, ರಾ.ನ.ಗೋಪಾಲ ರೆಡ್ಡಿ, ಆಸ್ಪಿಯಾ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.