ಫಲಿತಾಂಶ ಪ್ರಕಟವಾಗಿ 4-5 ತಿಂಗಳ ನಂತರ ಆಯ್ಕೆಗೆ ದಿನಾಂಕ ಘೋಷಣೆ; ಅಧಿಕಾರಕ್ಕಾಗಿ ಆರಂಭವಾಗಿದೆ ರೇಸ್
By GS Bharath Gudibande
ಗುಡಿಬಂಡೆ: ಪಟ್ಟಣ ಪಂಚಾಯತಿ ಚುನಾವಣೆ ಮುಗಿದು ಫಲಿತಾಂಶ ಬಂದ 4-5 ತಿಂಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು ಅದರಂತೆ ನವೆಂಬರ್ 2ರಂದು ಚುನಾವಣಾ ಆಯೋಗವು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಮಾಡಿದೆ.
ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರಾಗಲು ಕೆಲವರು ಕಸರತ್ತು ಶುರು ಮಾಡಿದ್ದು ನಿಗದಿಯಾಗಿರುವ ಮೀಸಲಾತಿಗಳ ಆಧಾರದ ಮೇಲೆ ಆಯ್ಕೆ ಮಾಡಲು ಸಿದ್ದತೆಗಳು ನಡೆಯುತ್ತಿವೆ.
ಪಟ್ಟಣ ಪಂಚಾಯತಿ ಚುನಾವಣೆ ಮುಗಿದು ಫಲಿತಾಂಶ ಬಂದ 4-5 ತಿಂಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆಗೆ ಚುನಾವಣಾ ಆಯೋಗವು ದಿನಾಂಕ ನಿಗದಿ ಮಾಡಿರುವುದು ಆಯ್ಕೆ ಆಗಿರುವ ಸದಸ್ಯರ ನಿದ್ದೆಗೆಡಿಸಿದೆ. ಯಾರು ಗದ್ದುಗೆಗೆ ಆಯ್ಕೆಯಾಗುತ್ತಾರೆಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ನವೆಂಬರ್ 2ರಂದ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಚುನಾವಣೆ ಅಧಿಕಾರಿ ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಮಾಹಿತಿ ನೀಡಿದರು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಒತ್ತಡ
ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ – ಬಿಸಿಎಂ-ಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ (ಸಾಮಾನ್ಯ) ಮೀಸಲಾತಿ ಪ್ರಕಟವಾಗಿದೆ. ಈಗಾಗಲೇ ಸದಸ್ಯರು ತಮ್ಮ ಬೇಡಿಕೆಯನ್ನು ಈಡೇರಿಸಲು ಶಾಸಕರ ಬಳಿ ಕಸರತ್ತು ಆರಂಭಿಸಿದ್ದು, ಅವರನ್ನು ಸ್ವಾಗತಿಸುವುದು ಮತ್ತು ಸನ್ಮಾನ ಮಾಡಿ ಹಾರ ತುರಾಯಿಗಳನ್ನು ಹಾಕಿ ಒಲವು ಪಡೆಯಲು ಪ್ರಯತ್ನಗಳನ್ನು ನಡೆಸುತ್ತಿರುವ ಬಗ್ಗೆ ಲಭ್ಯವಾಗಿದೆ. ಬೆಂಗಳೂರುನ ಶಾಸಕರ ನಿವಾಸಕ್ಕೆ ಎಡತಾಕುವುದು ಸೇರಿದಂತೆ ಅವರನ್ನು ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ.
ಶಾಸಕರ ಒಲವು ಯಾರ ಮೇಲೆ?
ಈಗಾಗಲೇ ಮೀಸಲಾತಿ ಪ್ರಕಟವಾಗಿದ್ದು ಶಾಸಕರ ಒಲವು ಯಾರ ಮೇಲಿದೆ ಎಂಬ ಲೆಕ್ಕಾಚಾರವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಶಾಸಕರ ಆಶೀರ್ವಾದ ಪಡೆದು ಅಧ್ಯಕ್ಷ, ಉಪಾಧ್ಯಕ್ಷರಾಗಲು ಆಯಾ ಮೀಸಲು ಅರ್ಹತೆ ಇರುವ ಸದಸ್ಯರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ -06, ಜೆಡಿಎಸ್ ಪಕ್ಷದಲ್ಲಿ-2, ಪಕ್ಷೇತರ ಅಭ್ಯರ್ಥಿ-3 ಸ್ಥಾನಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಶಾಸಕರ ಒಲವು ಪಡೆಯಲು ಪ್ರಯತ್ನಗಳನ್ನು ನಡೆಸಲಾಗಿದೆ.
ಹೆಚ್ಚಿದ ಆಕಾಂಕ್ಷಿಗಳು
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಎ (ಮಹಿಳೆ) ಮೀಸಲಾತಿ ಪ್ರಕಟವಾಗಿದ್ದು, ಈ ಸ್ಥಾನಕ್ಕೆ ಗುಡಿಬಂಡೆ ಪಟ್ಟಣದ 7ನೇ ವಾರ್ಡಿನ ಬಷೀರಾ ರಿಜ್ವಾನ್ ಹಾಗೂ 10ನೇ ವಾರ್ಡಿನ ನಗೀನ್ ತಾಜ್ ಫಯಾಜ್ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ (ಸಾಮಾನ್ಯ) ಸ್ಥಾನಕ್ಕೆ ಹಲವು ಹೆಸರುಗಳು ಕೇಳಿಬರುತ್ತಿದ್ದರು ಯಾರು ಸ್ಪರ್ದಿಸಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.