ಕ್ಷೇತ್ರ ಶಿಕ್ಷಣಾಧಿಕಾರಿ ಸಮ್ಮುಖದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸಭೆ
By GS Bharath Gudibande
ಗುಡಿಬಂಡೆ: ಕೋವಿಡ್ ಸೋಂಕಿನ ಮೊದಲ ಮತ್ತು ಎರಡನೇ ಅಲೆಯಲ್ಲಿ 242 ಮಕ್ಕಳಿಗೆ ಕೋವಿಡ್ ಸೋಂಕು ತಗುಲಿತ್ತು, ಅದರಲ್ಲಿ 40ಕ್ಕೂ ಹೆಚ್ಚು ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂಬ ಆಂತಕಕಾರಿ ಮಾಹಿತಿ ಸಿಕೆನ್ಯೂಸ್ ನೌ ಗೆ ಲಭ್ಯವಾಗಿದೆ.
3ನೇ ಅಲೆಯಲ್ಲಿ ಮಕ್ಕಳೇ ಹೆಚ್ಚು ಟಾರ್ಗೆಟ್ ಆಗಬಹುದು ಎಂಬ ಆತಂಕದ ಮಾಹಿತಿ ಇತ್ತು. ಆದರೆ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್ ಮಾರಿ ಮಕ್ಕಳನ್ನು ಕಾಡಿತ್ತು. ಹೀಗಿರುವಾಗ ತಾಲೂಕಿನ 40ಕ್ಕೂ ಹೆಚ್ಚು ಮಕ್ಕಳ ತಂದೆ ಅಥವಾ ತಾಯಿಯರು ಕೋವಿಡ್ ಮತ್ತು ನಾನ್ ಕೋವಿಡ್ʼಯೇತರ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಿದ ಡಿಸಿಪಿಯು ಸಮಿತಿ ಸಭೆಯಿಂದ ಮಾಹಿತಿ ಸಿಕ್ಕಿದೆ.
ಪೋಷಕರನ್ನು ಕಳೆದುಕೊಂಡ ಚಿಣ್ಣರು
ಗುಡಿಬಂಡೆ ತಾಲೂಕು ಒಂದರಲ್ಲೇ 40ಕ್ಕೂ ಹೆಚ್ಚು ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರೆ. ಇದನ್ನರಿತ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಿತಿ ಜಿಲ್ಲೆಯಾದ್ಯಂತ ಸಭೆಗಳನ್ನು ಮಾಡಿ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದೆ. 4 ಮಕ್ಕಳ ತಂದೆ ಅಥವಾ ತಾಯಿ ಕೋವಿಡ್ ಕಾರಣದಿಂದ ಮೃತರಾಗಿದ್ದರೆ ಉಳಿದ 36 ಮಕ್ಕಳ ಪೋಷಕರು ಬೇರೆ ಕಾರಣಗಳಿಂದ ಮೃತರಾಗಿದ್ದಾರೆ. ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಸಭೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಮಿತಿ ಮಾಹಿತಿ ನೀಡಿದೆ.
ಸೋಂಕಿಗೆ ಯಾವುದೇ ಮಗು ಬಲಿಯಾಗಿಲ್ಲ
ಸಮಾಧಾನದ ವಿಷಯ ಎಂದರೆ, ಇದುವರೆಗೂ ಗುಡಿಬಂಡೆ ತಾಲೂಕಿನಲ್ಲಿ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್ ಸೋಂಕಿಗೆ ಯಾವುದೇ ಮಗು ಮೃತಪಟ್ಟಿಲ್ಲ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ತಿಳಿಸದರು. ಮೂರನೇ ಅಲೆ ಮಕ್ಕಳನ್ನು ತೀವ್ರವಾಗಿ ಕಾಡಬಹುದು ಎಂಬ ಆತಂಕ ಇತ್ತು. ಅಂಥ ಪರಿಸ್ಥಿತಿ ಎದುರಾಗಿಲ್ಲ. ಹೀಗಿದ್ದರೂ ಪೋಷಕರು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಮಕ್ಕಳಿಗೆ ಸರಕಾರದ ಅಭಯ
ಕೋವಿಡ್ ಸೋಂಕಿನಿಂದ ತಂದೆ ಅಥವಾ ತಾಯಿ ಮೃತಪಟ್ಟು ಮಕ್ಕಳು ಅನಾಥರಾಗಿದ್ದರೆ, ಅಂತಹವರಿಗೆ ಸರಕಾರ ನೆರವಿನ ಹಸ್ತ ಚಾಚುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಿತಿ ಅನಾಥ ಮಕ್ಕಳು, ಏಕ ಪೋಷಕರು, ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳ ಮಾಹಿತಿ ಜಿಲ್ಲಾಧ್ಯಂತ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಿತಿ ಕೋವಿಡ್ ಮತ್ತು ನಾನ್ ಕೋವಿಡ್ ಮಕ್ಕಳ ಮಾಹಿತಿ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ 40 ಮಕ್ಕಳಲ್ಲಿ 4 ಮಕ್ಕಳ ಪೋಷಕರು ಕೋವಿಡ್ ಮೃತಪಟ್ಟಿದ್ದಾರೆ. ಸರಕಾರದ ಸೌಲಭ್ಯಗಳಿಗಾಗಿ ಮಾಹಿತಿ ಸಂಗ್ರಹಿಸಿ ಸಭೆಯನ್ನು ಮಾಡಲಾಯಿತು. ಸಭೆಯಲ್ಲಿ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.
ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಡಿಬಂಡೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕೋವಿಡ್ ಮತ್ತು ನಾನ್ ಕೋವಿಡ್ʼನಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವ ಸರಕಾರಕ್ಕೆ ಕಳುಹಿಸುವ ಕೆಲಸ ಮಾಡುತ್ತೇವೆ.
ರಾಮರಾಜೇ ಅರಸ್, ಅಧ್ಯಕ್ಷರು, ಜಿಲ್ಲಾ ಮಕ್ಕಳ ಕಲ್ಯಾಣ ಘಟಕ