ಪಟ್ಟಣ ಪಂಚಾಯಿತಿ ಸಯತ್ತಮುತ್ತ 144 ಸೆಕ್ಷನ್ ಜಾರಿ; ಅಧಿಕಾರ ಹಿಡಿಯಲು ಬಿಜೆಪಿ ಸರ್ವ ಕಸರತ್ತು
By GS Bharath Gudibande
ಗುಡಿಬಂಡೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಸುತ್ತ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಿ, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಇಂದು ನಡೆಯುವ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಪಟ್ಟಣದ ಮುಖ್ಯರಸ್ತೆ ಹಾಗೂ ಪಟ್ಟಣ ಪಂಚಾಯತಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನ ಗೆದ್ದಿಲ್ಲ, ಆದರೂ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಿದೆ. ಪಕ್ಷೇತರ ಅಭ್ಯರ್ಥಿಗಳು ಮೂವರು ಸದಸ್ಯರು ಬಿಜೆಪಿಗೆ ಸೇರುತ್ತಿದ್ದು, ಕಾಂಗ್ರೆಸ್ ಪಕ್ಷದ ಒಬ್ಬರು ಈಗಾಗಲೇ ಬಿಜೆಪಿಗೆ ಜಿಗಿದಿದ್ದಾರೆ. ಇನ್ನೂ ಇಬ್ಬರು ಅಥವಾ ಒಬ್ಬರು ಕಮಲ ಪಾಳಯಕ್ಕೆ ಜಂಪ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಉಳಿದಂತೆ ಸಂಸದ ಬಿ.ಎನ್.ಬಚ್ಚೇಗೌಡರ ಮತವೂ ಬಿಜೆಪಿಗೇ ಇರುತ್ತದೆ.
ಹೀಗಾಗಿ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಕಮಲ ಬಾವುಟ ಹಾರಲಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಸಚಿವ ಡಾ.ಸುಧಾಕರ್ ಟಚ್ʼನಲ್ಲಿದ್ದು, ಸಚಿವರ ಎಂಟ್ರಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಏರುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳಿಂದ ಸಚಿವ ನಿರ್ದೇಶನದಂತೆ ನಡೆಯುತ್ತಿರುವ ಬೆಳವಣಿಗೆಗಳು ಗುಡಿಬಂಡೆಯಲ್ಲಿ ಕಮಲ ಪರ್ವ ಆರಂಭಕ್ಕೆ ನಾಂದಿಯಾಗುವಂತಿದೆ.
ಈ ನಡುವೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಕಾಂಗ್ರೆಸ್ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲು ಹರಸಾಹಸ ನಡೆಸಿದ್ದು, ಸುಧಾಕರ್ ಬಲದ ಮುಂದೆ ಅವರು ಮಂಕಾಗಿದ್ದಾರೆ ಎನ್ನಲಾಗಿದೆ.
ಸದಸ್ಯರ ಬಲಾಬಲ ಹೀಗಿದೆ:
ಒಟ್ಟು ಸ್ಥಾನ: 11
ಕಾಂಗ್ರೆಸ್-06
ಪಕ್ಷೇತರ-03
ಜೆಡಿಎಸ್-2