ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕೊರಳಪಟ್ಟಿ ಹಿಡಿದ ಪೊಲೀಸ್ ಇನಸ್ಪೆಕ್ಟರ್!
ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುಣಾವಣೆಯಲ್ಲಿ ಹೈಡ್ರಾಮ
ಉಸ್ತುವಾರಿ ಸಚಿವರ ಬೆಂಬಲಕ್ಕೆ ನಿಂತರಾ ಡೀಸಿ, ಎಸ್‌ಪಿ?
By GS Bharath Gudibande
ಗುಡಿಬಂಡೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಗುಡಿಬಂಡೆಯಲ್ಲಿ ಬೆಳಗ್ಗೆಯಿಂದ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ.
ಕಾಂಗ್ರೆಸ್ ಸದಸ್ಯರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇರ ಆರೋಪ ಮಾಡಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆಗೆ ಮುಂದಾದರೆ, ಇದೇ ಸಂದರ್ಭದಲ್ಲಿ ಪೊಲೀಸ್ ಇನಸ್ಪೆಕ್ಟರ್ ಒಬ್ಬರು ಶಾಸಕರ ಕೊರಳಪಟ್ಟಿಗೆ ಕೈಹಾಕಿದ ಘಟನೆಯೂ ನಡೆಯಿತು. ಈ ಸಂದರ್ಭದಲ್ಲಿ ನಡೆದ ತಳ್ಳಾಟ-ನೂಕಾಟದಲ್ಲಿ ಓರ್ವ ಪೊಲೀಸ್ ಪೇದೆಗೆ ಗಾಯವಾಗಿದೆ.
ಕಾಂಗ್ರೆಸ್ ಸದಸ್ಯರನ್ನು ಬಿಜೆಪಿ ಹೈಜಾಕ್ ಮಾಡಿ ಅಧಿಕಾರ ಹಿಡಿಯಲು ಯತ್ನ ನಡೆಸುತ್ತಿದೆ ಎಂದು ದೂರಿ ಶಾಸಕರು, ಮತ್ತವರ ಬೆಂಬಲಿಗರು ಪೊಲೀಸ್ ಠಾಣೆಯ ಮುಂದೆ ಧರಣಿ-ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಸಂಬಂಧಿಕರು ಹಾಗೂ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಅಪಹರಣ ಮಾಡಿದ್ದಾರೆಂದು ದೂರಿ ಮತದಾನ ಕೇಂದ್ರಕ್ಕೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಹಾಗೂ ಶಾಸಕರು ಮತ್ತವರ ಬೆಂಬಲಿಗರ ನಡುವೆ ನೂಕು ನುಗ್ಗಲು ಮತ್ತು ತೀವ್ರ ವಾಗ್ವಾದ ನಡೆಯಿತು. ಪರಸ್ಪರ ಕೂಗಾಟ, ತಳ್ಳಾಟದಿಂದ ಪರಿಸ್ಥಿತಿ ಕೈಮೀರತಲ್ಲದೆ, ಈ ಸಂದರ್ಭದಲ್ಲಿ ಪೊಲೀಸ್ ಪೇದೆಗೆ ಗಾಯವಾಯಿತು.
ಇದೇ ವೇಳೆ ಹೆಚ್ಚುವರಿ ಭದ್ರತೆಗಾಗಿ ಬಂದಿದ್ದ ಚಿಕ್ಕಬಳ್ಳಾಪುರದ ಇನಸ್ಪೆಕ್ಟರ್ ಪ್ರಶಾಂತ್ ಅವರು ಶಾಸಕ ಸುಬ್ಬಾರೆಡ್ಡಿ ಅವರ ಕೊರಳು ಪಟ್ಟಿಗೆ ಕೈಹಾಕಿದ ಪ್ರಸಂಗವೂ ನಡೆಯಿತು. ಕೂಡಲೇ ಶಾಸಕರು ಹಾಗೂ ಅವರ ಬೆಂಬಲಿಗರು ಇನಸ್ಪೆಕ್ಟರ್ ವಿರುದ್ಧ ರೊಚ್ಚಿಗೆದ್ದರಲ್ಲದೆ ಸ್ಥಳದಲ್ಲಿಯೇ ಕೂತು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು; “ಇನಸ್ಪೆಕ್ಟರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಅಧಿಕಾರಿಗಳ ಮೂಲಕ ಸಚಿವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಸಚಿವರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ ಎಂದು ಆರೋಪ ಮಾಡಿದರು.
ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಯತ್ನ
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಸಂಬಂಧಿಕರು ಕಾಂಗ್ರೆಸ್ ಸದಸ್ಯರನ್ನು ಕಿಡ್ನಾಪ್ ಮಾಡಿದ್ದಾರೆಂದು ಎಸ್.ಎನ್. ಸುಬ್ಬಾರೆಡ್ಡಿ ನೇರ ಆರೋಪ ಮಾಡಿದರು.
ಬೆಂಗಳೂರಿನಿಂದ ಸದಸ್ಯರನ್ನು ನಾನು ಕರೆದುಕೊಂಡರು ಬರುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಕಾರನ್ನು ಸುಧಾಕರ್ ಬೆಂಬಲಿಗರು, ಸಂಬಂಧಿಕರು ಅಡ್ಡಗಟ್ಟಿ ನಮ್ಮ ಪಕ್ಷದ ಸದಸ್ಯರನ್ನು ಅಪಹರಣ ಮಾಡಿದ್ದಾರೆ ಎಂದು ಅವರು ದೂರಿದರು.
ಕಾಂಗ್ರೆಸ್ ಪಕ್ಷದಿಂದ ಗೆದ್ದ ಸದಸ್ಯರನ್ನು ಅಪಹರಿಸಿ, ಪೆರೇಸಂದ್ರದ ಚನ್ನಕೃಷ್ಣಾ ರೆಡ್ಡಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಬಿಜೆಪಿಯವರಿಗೆ ಮಾನ, ಮರ್ಯಾದೆ ಇಲ್ಲ. ಬಲವಂತವಾಗಿ ಅಪಹರಿಸಿದ್ದರೆ. ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದೇನೆ, ಕೂಡಲೇ ಅವರನ್ನು ಬಂಧಿಸುವಂತೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಗ್ರಹಿಸಿದರು.
ಚುನಾವಣೆ ಕೂಡಲೇ ಮುಂದೂಡಬೇಕು
ನಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಅಪಹರಿಸಿದ್ದಾರೆ. ಅವರನ್ನು ರಕ್ಷಿಸಿ ನಮ್ಮ ಮುಂದೆ ಕರೆದುಕೊಂಡು ಬರಬೇಕು. ನಮ್ಮ ಸದಸ್ಯರು ಬಂದು ಹೇಳಿಕೆ ಕೊಡಬೇಕು. ಅಲ್ಲಿಯವರೆಗೂ ಚುನಾವಣೆ ಮುಂದೂಡಬೇಕು ಎಂದು ಅವರು ಆಗ್ರಹಿಸಿದರು.
ಸಚಿವರ ಕೈಗೊಂಬೆಗಳಾದ ಡಿಸಿ. ಎಸ್ಪಿ
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿವ ಸುಧಾಕರ್ ಕೈಗೊಂಬೆಗಳಾಗಿದ್ದಾರೆ. ಪೊಲೀಸ್ ಬೆಂಗಾವಲಿನಲ್ಲಿ ಪೆರೇಸಂದ್ರದ ಚನ್ನಕೃಷ್ಣಾ ರೆಡ್ಡಿ ಮನೆಯಲ್ಲಿ ಕಾಂಗ್ರೆಸ್ ಸದಸ್ಯರನ್ನು ಇಟ್ಟುಕೊಂಡಿದ್ದಾರೆ. ಪೊಲೀಸ್ ಇಲಾಖೆಯ ಸಹಕಾರ ಸಚಿವರ ಪರ ಕೆಲಸ ಮಾಡುತ್ತಿದೆ. 15 ದಿನಗಳಾದರೂ ನಾವು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತೇವೆ ಎಂದು ಎಸ್.ಎನ್ ಸುಬ್ಬಾರೆಡ್ಡಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವ ರೆಡ್ಡಿ, ಪಪಂ ಮಾಜಿ ಅಧ್ಯಕ್ಷ ದ್ವಾರಕಾನಾಥ್ ನಾಯ್ಡು, ಕಾಂಗ್ರೆಸ್ ಮುಖಂಡ ಆದಿರೆಡ್ಡಿ, ಪ್ರಕಾಶ್, ಬಾಲೇನಹಳ್ಳಿ ರಮೇಶ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪೊಲೀಸರಿಗೆ ಶಾಸಕರ ದೂರು
ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರನ್ನು ಕಿಡ್ನಾಡ್ ಮಾಡಲಾಗಿದೆ. ಒಂದನೇ ವಾರ್ಡಿನ ರಾಜೇಶ್ ಮತ್ತು ಐದನೇ ವಾರ್ಡಿನ ಗಂಗರಾಜು ಕಿಡ್ನಾಪ್ ಆದ ಸದಸ್ಯರು. ರಾಷ್ಟ್ರೀಯ ಹೆದ್ದಾರಿ 7ರ ಕಾಮತ್ ಹೋಟೆಲ್ ಬಳಿ ಈ ಇಬ್ಬರನ್ನು ಅಪಹರಿಸಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈಗ ಗುಡಿಬಂಡೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ನಾಲ್ವರು ಇನಸ್ಪೆಕ್ಟರ್ʼಗಳು, 10ಕ್ಕೂ ಹೆಚ್ಚು ಸಬ್ ಇನಸ್ಪೆಕ್ಟರ್ʼಗಳು ಹಾಗೂ ನೂರಕ್ಕೂ ಹೆಚ್ಚು ಪೊಲೀಸ್ ಪೇದೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ನಮ್ಮ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳುವ ವರೆಗೂ ಹೀಗೆ ಮೋಸ ವಂಚನೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಖಂಡಿತ. ಇದಕ್ಕೆಲ್ಲ ಒಂದೇ ಸಮಂಜಸ ಉತ್ತರ ನಮ್ಮ ನೇರ ನಿಲುವಿನ ಕಡೆ ಹೋರಾಟ. ಹೀಗೆ ಬಿಟ್ಟರೆ ಖಂಡಿತ ಮುಂದಿನ ದಿನಗಳಲ್ಲಿ ಗುಡಿಬಂಡೆ ತಾಲ್ಲೂಕು ಅಲ್ಲ ಹೋಬಳಿ ಆಗಿ ಸಹ ಇರುವುದು ಅಸಾಧ್ಯದ ವಿಷಯ. ಅನ್ಯ ಅಜಾಗರೂಕತೆ ನಮ್ಮ ಕೇಡು ಅಷ್ಟೇ