ಹೊಸ ಘೋಷಣೆ ಮಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್!!
ಚಿಕ್ಕಬಳ್ಳಾಪುರ: ಹೆಚ್ಚು ಶೇಖರಣಾ ಸಾಮರ್ಥ್ಯವಿರುವ ಕೆರೆಗಳಿಂದ ಮನೆಮನೆಗಳಿಗೆ ನೀರು ಪೂರೈಸಲು ಯೋಜನೆ ರೂಪಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಗೌರಿಬಿದನೂರು ಮೊದಲಾದ ಕಡೆಗಳಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರು ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳ ಜನರು ಇಂದಿಗೂ ಕೆರೆ, ಬಾವಿಗಳಿಂದ ನೀರನ್ನು ತರುವ ಪರಿಸ್ಥಿತಿ ಇದೆ. ಮನೆಗೆ ನೀರು ಪೂರೈಸಲು ಕಳೆದ 70 ವರ್ಷಗಳಲ್ಲೂ ಸಾಧ್ಯವಾಗಿಲ್ಲ. ಮುಂದಿನ ಎರಡು ವರ್ಷದೊಳಗೆ ನೀರಿನ ಲಭ್ಯತೆ ಇರುವೆಡೆ ನೋಡಿಕೊಂಡು ಕೊಳಾಯಿ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಹೆಚ್ಚು ಶೇಖರಣಾ ಸಾಮರ್ಥ್ಯ ಇರುವ ಕೆರೆಗಳಿಗೆ ಹೊಂದಿಕೊಂಡ ಹಳ್ಳಿಗಳಲ್ಲಿ ಮನೆಮನೆಗೆ ನೀರು ನೀಡುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚಿಕ್ಕಬಳ್ಳಾಪುರ ತಾಲೂಕು ಹಾಗೂ ಮಂಚೇನಹಳ್ಳಿಯಲ್ಲಿ ಈ ರೀತಿಯಲ್ಲಿ ಮಾಡಲಾಗಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕೆರೆಗಳಿಂದ ನೀರು ನೀಡುವ ಯೋಜನೆ ರೂಪಿಸಲಾಗುವುದು ಎಂದರು.
ಎಚ್‍ಎನ್ ವ್ಯಾಲಿ, ಕೆಸಿ ವ್ಯಾಲಿಯಿಂದ ಅನೇಕ ಕೆರೆಗಳು ತುಂಬಿದೆ. ಆದರೂ ಅಂತರ್ಜಲ ವೃದ್ಧಿ ಕಷ್ಟವಾಗಿದೆ. ಆದರೆ ಉತ್ತಮ ಮಳೆಯಾಗಿರುವುದರಿಂದ ಶೇ.50 ಕ್ಕೂ ಹೆಚ್ಚು ಕೆರೆಗಳು ತುಂಬಿವೆ. ಮಂಚೇನಹಳ್ಳಿಯನ್ನು ತಾಲೂಕಾಗಿ ರೂಪಿಸುವ ಕೆಲಸವಾಗಿದೆ. ಮಂಚೇನಹಳ್ಳಿಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹೊಸ ರೂಪ ನೀಡಲಿದ್ದು, ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕಿದೆ. ಶೀಘ್ರದಲ್ಲೇ ಸಂಪುಟಕ್ಕೆ ತಂದು ಮಂಜೂರಾತಿ ನೀಡಿ ಜನವರಿ ಒಳಗೆ ಭೂಮಿಪೂಜೆ ಮಾಡಲು ಪ್ರಯತ್ನಿಸಲಾಗುವುದು. ಇದು 100 ಹಾಸಿಗೆ ಇರುವ ಆಸ್ಪತ್ರೆಯಾಗಲಿದೆ ಎಂದರು.
ಈ ಭಾಗದಲ್ಲಿ ಗುಡಿ ಕೈಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಯುವಜನರಿಗೆ ಹೆಚ್ಚು ಉದ್ಯೋಗಾವಕಾಶ ನೀಡಲು ಸಾಧ್ಯವಾಗುತ್ತದೆ. ಒಂದನೇ ಹಾಗೂ ಎರಡನೇ ಹಂತದ ಕೈಗಾರಿಕಾಭಿವೃದ್ಧಿಗೆ ಪೂರ್ಣ ಪ್ರಮಾಣದ ಭೂಮಿ ಬಳಸಿಲ್ಲ. 3 ನೇ ಹಂತಕ್ಕೆ ಮೊದಲು 1, 2 ನೇ ಹಂತದಲ್ಲೇ ಜಮೀನು ಬಳಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ತಿಂಗಳು ಜಿಲ್ಲೆಗೆ ಬರಲಿದ್ದು, ನೀರಾವರಿ, ಹಾಲು ಉತ್ಪಾದಕ ಸಂಘದ ವಿಚಾರದಲ್ಲಿ ಅವರು ತೀರ್ಮಾನ ಪ್ರಕಟಿಸಲಿದ್ದಾರೆ ಎಂದರು.
ಗ್ರಾಮ ವಿಕಾಸ ಯೋಜನೆಗೆ ಸಂಬಂಧಿಸಿದಂತೆ ಬಿಸಲಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ 430 ಗ್ರಾಮಗಳಿದ್ದು, ಗ್ರಾಮ ವಿಕಾಸ ಯೋಜನೆಗೆ ಬಿಸಲಹಳ್ಳಿ ಗ್ರಾಮ ಆರಿಸಿದ್ದೇನೆ. 1.64 ಕೋಟಿ ರೂ. ಈ ಗ್ರಾಮಕ್ಕೆ ದೊರೆತಿದೆ. ಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯುತ್ತಿದ್ದು, ಸ್ಥಳದಲ್ಲೇ ಅಹವಾಲು ಆಲಿಸಿ ಪರಿಹರಿಸಲಾಗುವುದು ಎಂದರು.
ಗೌರಿಬಿದನೂರಿನಲ್ಲಿ ನಗರೋತ್ಥಾನ ಹಂತ-3 ರಡಿ, ಕುಡಿಯುವ ನೀರಿನ ಯೋಜನೆಗೆ ಚಾಲನೆ, ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ ಚಾಲನೆ, 30 ಪೌರಕಾರ್ಮಿಕರಿಗೆ ಇ-ಖಾತಾ ವಿತರಣೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಚಿವರು ಪಾಲ್ಗೊಂಡರು.