ಭೂಕಂಪ ಅಲ್ಲ, ಗಾಳಿ -ಅನಿಲ ಸ್ಫೋಟ ಅಷ್ಟೆ ಎಂದ ಅಧಿಕಾರಿಗಳು!!
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಮಂಗಳವಾರದಿಂದ ಕೇಳಿ ಬಂದಿರುವ ಭಾರೀ ಸದ್ದು ಭೂಕಂಪ ಅಲ್ಲ ಬರಿ ಗಾಳಿ/ಅನಿಲ ಸ್ಫೋಟ (ಏರ್ ಬ್ಲಾಸ್ಟ್) ಅಷ್ಟೆ. ಆದ್ದರಿಂದ ಈ ಭಾಗದ ಜನರು ಸೇರಿದಂತೆ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಎಸ್. ಜಗದೀಶ್ ಅವರು ಮಿಟ್ಟಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಮಂಗಳವಾರ ರಾತ್ರಿಯಿಂದ ಇಂದು ಮುಂಜಾನೆ ವರೆಗೆ ವಿವಿಧ ಅವಧಿಯಲ್ಲಿ ಮೂರ್ನಾಲ್ಕು ಸಾರಿ ಭಾರಿ ಸದ್ದು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಅವರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಂಡದೊಂದಿಗೆ ಮಿಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಂದ , ತಾಲ್ಲೂಕು ಆಡಳಿತದ ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಹಾಗೂ ಭೂ ಕಂಪನ ಮಾಪನ ಕೇಂದ್ರಗಳಿಂದ ಕಲೆಹಾಕಿದ ಮಾಹಿತಿಗಳನ್ನು ಆಧರಿಸಿ ಪ್ರಾಥಮಿಕ ತನಿಖೆ ನಡೆಸಿ ಮಾತನಾಡಿದರು.
ಕಳೆದ 20-25 ವರ್ಷಗಳಿಂದ ಮಳೆ ಪ್ರಮಾಣ ಈ ಭಾಗದಲ್ಲಿ ಕಡಿಮೆ ಇತ್ತು ಇತ್ತೀಚೆಗೆ ಈ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು ಮಳೆಯ ನೀರು ಭೂಮಿಯೊಳಗೆ ಪೂರಣವಾಗಿ ಇಂಗುವ ಸಂದರ್ಭದಲ್ಲಿ ಭೂ ಪದರಗಳ ಮಧ್ಯೆ ಇರುವ ಖಾಲಿ ಜಾಗಗಳಿಗೆ ಅಥವಾ ಬಿರುಕುಗಳಿಗೆ ನೀರು ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿದ್ದ ಗಾಳಿ/ಅನಿಲ ಸ್ಫೋಟಗೊಂಡು ಭಾರಿ ಶಬ್ದ ಉಂಟಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.ಈ ರೀತಿಯ ಶಬ್ದವು ಮುಂದಿನ ದಿನಗಳಲ್ಲೂ ಕಂಡುಬರುವ ಸಾಧ್ಯತೆ ಇದ್ದು,ಮತ್ತೆ ಈ ರೀತಿಯ ಶಬ್ದ ಉಂಟಾದಲ್ಲಿ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಅತ್ಯಂತ ಸುರಕ್ಷಿತ ವಲಯ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ತಾಲ್ಲೂಕಿನ ಯಾವುದೇ ಭಾಗದಲ್ಲಿ ಭಾರೀ ಶಬ್ದ ವನ್ನು ಹೊರತುಪಡಿಸಿ ಇನ್ನಾವುದೇ ರೀತಿಯ ಲಘು ಭೂಕಂಪವು ಸಹ ಆಗಿಲ್ಲ.ಚಿಕ್ಕಬಳ್ಳಾಪುರ ಜಿಲ್ಲೆಯು ಭೂಕಂಪ ವಲಯದ ವಿಶ್ಲೇಷಣೆಗೆ ಸಂಬಂಧಿಸಿದಂತೆ ಅತ್ಯಂತ ಸುರಕ್ಷಿತ ವಲಯದಲ್ಲಿದೆ. ಈ ಭಾಗದಲ್ಲಿ ಕಂಡುಬರುವ ಕಲ್ಲು ಮೆದುವಿನಿಂದ ಕೂಡಿರದೆ ಬಹಳ ಗಟ್ಟಿ ಇದೆ ಅಲ್ಲದೆ ನೂರಾರು ವರ್ಷಗಳ ಅಂಕಿಅಂಶಗಳನ್ನು ಅವಲೋಕಿಸಲಾಗಿದೆ ಈ ಭಾಗದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಅತ್ಯಂತ ವಿರಳಾ ತೀತವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈ ಪ್ರದೇಶದ ಭೂ ಕಂಪನ ಚಟುವಟಿಕೆಗಳ ಮೇಲೆ ನಿರಂತರವಾಗಿ ವಿಶೇಷ ನಿಗಾ ವಹಿಸಲಾಗಿರುತ್ತದೆ ಹಾಗೂ ಸರ್ಕಾರ ಮತ್ತು ಜಿಲ್ಲಾಡಳಿತವು ಸದಾ ನಿಮ್ಮೋಂದಿಗಿರುತ್ತದೆ ಜನರು ಆತಂಕ ಪಡಬೇಕಾಗಿಲ್ಲ ಎಂದರು .
ರಾಜ್ಯದಲ್ಲಿ ಒಟ್ಟು 14 ಭೂಕಂಪನ ಮಾಪನ ಕೇಂದ್ರಗಳಿವೆ. ಬೆಂಗಳೂರಿನ ತಿಪ್ಪಗಾನಹಳ್ಳಿ ಡ್ಯಾಂಮ್ ಹಾಗೂ ಹತ್ತಿರವಿರುವ ಇನ್ನಿತರೆ ಭೂಕಂಪನ ಮಾಪನ ಕೇಂದ್ರಗಳಿಂದ ಚಿಂತಾಮಣಿ ತಾಲ್ಲೂಕಿನಲ್ಲಿ ಸಂಭವಿಸಿರುವ ಭಾರೀ ಶಬ್ದದ ಹಿನ್ನೆಲೆಯಲ್ಲಿ ಅಂಕಿ ಅಂಶಗಳನ್ನು ಸಮಗ್ರವಾಗಿ ಪಡೆದು ವಿಶ್ಲೇಷಣೆಗೆ ಒಳಪಡಿಸಲಾಗಿದೆ, ಈ ಭಾಗದಲ್ಲಿ ಯಾವುದೇ ಲಘು ಭೂಕಂಪನ ಸಂಭವಿಸಿರುವ ಕುರಿತು ಯಾವುದೇ ಸಂಕೇತ (ಸಿಗ್ನಲ್ )ಗಳು ದಾಖಲಾಗಿರುವುದಿಲ್ಲ.ಈ ಭಾಗದ ಭೂಕಂಪನ ಮಾಪನದ ವರದಿಯನ್ನು ತೆಗೆದುಕೊಂಡು ವಿಶ್ಲೇಷಣೆ ಮಾಡಿ ನೋಡಿದಾಗ ನವೆಂಬರ್ 9 ರಿಂದ ಈವರೆಗೆ ಯಾವುದೇ ರೀತಿಯ ಭೂಕಂಪನದ ವಿವರ ದಾಖಲಾಗಿಲ್ಲ ಎಂದು ಜಗದೀಶ್ ಅವರು ಸ್ಪಷ್ಟ ಪಡಿಸಿದರು.
ಶೀಘ್ರವೇ ಸರ್ಕಾರಕ್ಕೆ ವರದಿ
ಈ ತಂಡವು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಚಿಂತಾಮಣಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಎಲ್ಲ ಮಾಹಿತಿಗಳನ್ನು ಕಲೆಹಾಕಿ ಅಧ್ಯಯನ ಮಾಡಿ ವಿಶ್ಲೇಷಣೆಗೆ ಒಳಪಡಿಸಿ ಸಂಜೆ ಏಳಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಪ್ರಾಥಮಿಕ ಮಾಹಿತಿಯನ್ನು ನೀಡಿ.ಚಿಂತಾಮಣಿ ತಾಲ್ಲೂಕಿನಲ್ಲಿ ಸಂಭವಿಸಿರುವ ಭಾರೀ ಶಬ್ದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಕಿರಿಯ ವೈಜ್ಞಾನಿಕ ಅಧಿಕಾರಿ ಡಾ||ರಮೇಶ್ ದಿಕ್ಪಾಲ್, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಕೃಷ್ಣವೇಣಿ, ಬೋರಪ್ಪ, ತಹಸೀಲ್ದಾರ್ ಹನುಮಂತರಾಯಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿ ಉಪಸ್ಥಿತರಿದ್ದರು.