ಸ್ಥಳಕ್ಕೆ ಸಚಿವ ಡಾ.ಕೆ.ಸುಧಾಕರ್ ಭೇಟಿ, ಗಂಗಾಧರ್ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು
By GS Bharath Gudibande
ಗುಡಿಬಂಡೆ: ಕಳೆದ ಒಂದು ವಾರದಿಂದ ನಮ್ಮ ಬಾಗದಲ್ಲಿ ಅಧಿಕ ಮಳೆಯಾಗುತ್ತಿದೆ. ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಹೊಗುತ್ತಿವೆ. ಶುಕ್ರವಾರ ರಾತ್ರಿ ನೀರಿನ ರಭಸಕ್ಕೆ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದು ನನಗೆ ಮತ್ತು ಅವರ ಕುಟುಂಬಕ್ಕೆ ದುಃಖ ಉಂಟು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೋವು ವ್ಯಕ್ತಪಡಿಸಿದರು.
ಮಂಡಿಕಲ್ಲು ಹಾಗೂ ರಾಮಪಟ್ಟಣ ರಸ್ತೆಯ ಸೇತುವೆ ಬಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ಗೌಡ ಕೊಚ್ಚಿಹೋದ ಸ್ಥಳಕ್ಕೆ ಭೇಟಿ ನೀಡಿ, ನಂತರ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಕುಟುಂಬಕ್ಕೆ ಹಾಗೂ ನನಗೆ ತುಂಬಲಾರದ ನಷ್ಟ ಆಗಿದೆ ಎಂದ ಸಚಿವರು, ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ ಗೌಡ ನನಗೆ ಆತ್ಮೀಯ. ಶುಕ್ರವಾರ ರಾತ್ರಿ ರಾಮಪಟ್ಟಣದಿಂದ ಮನೆಗೆ ಹೋಗುವಾಗ ರಸ್ತೆಯ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದನ್ನು ಕಂಡ ಗಂಗಾಧರ್ ತನ್ನ ಜತೆಯಲ್ಲಿದ್ದ ವೃದ್ದರೊಬ್ಬರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿ ನಂತರ ದ್ವಿಚಕ್ರ ವಾಹನ ತಳ್ಳಿಕೊಂಡು ಹೋಗಲು ವಾಪಸು ಬಂದು ಆ ವಾಹನವನ್ನು ತಳ್ಳಿಕೊಂಡು ಹೋಗುವಾಗ ನೀರಿನ ರಭಸಕ್ಕೆ ಮತ್ತು ಪಾಚಿಯಿಂದ ಕಾಲು ಜಾರಿ ಬಿದ್ದಿದ್ದಾರೆ. ಮರ- ಕಲ್ಲು ಬಂಡೆಗಳು ಹೆಚ್ಚಾಗಿದ್ದ ಕಾರಣ ಪೆಟ್ಟು ಬಿದ್ದಿರುವ ಸಾಧ್ಯತೆ ಇರಬಹುದು ಎಂದು ದುಃಖ ವ್ಯಕ್ತಪಡಿಸಿದರು.
38 ಗಂಟೆಗಳಿಂದ ಶೋಧ ಕಾರ್ಯ
ಶುಕ್ರವಾರ ರಾತ್ರಿ ನಡೆದ ಘಟನೆ ನಡೆಯುತ್ತಿದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ತಹಸೀಲ್ದಾರ್, ಆರೋಗ್ಯ ಇಲಾಖೆ ಹೀಗೆ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಬಂದು ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ರಾತ್ರಿ ಕತ್ತಲು ಹಾಗೂ ವಾತಾವರಣದ ಸಮಸ್ಯೆಯಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಬೆಂಗಳೂರಿನಿಂದ ಪರಿಣಿತರ ತಂಡನ್ನು ಕರೆಸಿದ್ದೇನೆ. ದ್ವಿಚಕ್ರ ವಾಹನ ಸಿಕ್ಕಿದ್ದು ಗಂಗಾಧರ್ ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಡಾ.ಸುಧಾಕರ್ ಹೇಳಿದರು.
ವಿಶೇಷ ಮಾರ್ಗಸೂಚಿ ಪ್ರಕಟಿಸಲು ಸಿಎಂ ಬಳಿ ಚರ್ಚೆ
ಹೆಚ್ಚು ನೀರು ಹರಿಯುವ ಪ್ರದೇಶಗಳಿಗೆ ಕಾಲು ನಡಿಗೆ ಅಥವಾ ವಾಹನಗಳಲ್ಲಿ ಯಾರು ಹೋಗಬೇಡಿ. ದೊಡ್ಡ ಬಸ್ʼಗಳು ಸಹ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವುದನ್ನು ನಾವು ನೋಡಿದ್ದೇವೆ. ರಾಜ್ಯಾದ್ಯಂತ ಮಳೆ ಹೆಚ್ಚಾಗಿದೆ. ನೀರು ರಭಸವಾಗಿ ಹರಿಯುವ ಪ್ರದೇಶಗಳಿಗೆ ಯಾರು ಹೋಗಬೇಡಿ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮಾರ್ಗಸೂಚಿ ರೂಪಿಸಲು ಮನವಿ ಮಾಡುತ್ತೇನೆ ಎಂದು ಸಚಿವರು ಹೇಳಿದರು.
ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ್ ನನಗೆ ಆತ್ಮೀಯ. ಗಟ್ಟಿ-ಮುಟ್ಟಾಗಿ ಧೃಡವಾದ ದೇಹ ಹೊಂದಿದ್ದರು. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಅವರ ಬೈಕ್ ಸಿಕ್ಕಿದ್ದು, ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಹೆಚ್ಚು ನೀರು ಹರಿಯುವ ಪ್ರದೇಶಗಳಿಗೆ ಯಾರು ಹೋಗಬಾರದು. ಗಂಗಾಧರ್ ಅವರ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ.
ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ