ಗುಡಿಬಂಡೆ ಅಮಾನಿಭೈರ ಸಾಗರ ಹಿನ್ನೀರಿನ ಬಿದಿರು ಪೊದೆಯಲ್ಲಿ ತೇಲಿದ್ದ ಮೃತದೇಹ
by GS Bharath Gudibande
ಗುಡಿಬಂಡೆ: ಕಳೆದ ಶುಕ್ರವಾರ ರಾತ್ರಿ ಕುಶಾವತಿ ನದಿ ನೀರುಪಾಲಾಗಿದ್ದ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ಗೌಡ ಅವರ ಮೃತದೇಹ ಇಲ್ಲಿನ ಅಮಾನಿಭೈರ ಸಾಗರದ ಹಿನ್ನೀರಿನಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ಶೋಧನಾ ತಂಡಗಳು ನಡೆಸಿದ ಅವಿರತ ಶೋಧ ಕಾರ್ಯವು ಇಂದು ಬೆಳಗ್ಗೆ 9-9.30 ಗಂಟೆ ಹೊತ್ತಿಗೆ ಫಲಕಾರಿಯಾಗಿದ್ದು, ಅಮಾನಿಭೈರ ಸಾಗರಕ್ಕೆ ಕುಶಾವತಿ ನದಿ ಸೇರುವ ಜಾಗದಲ್ಲಿ ದಟ್ಟವಾಗಿ ಬೆಳೆದಿರುವ ಬಿದಿರು ಪೊದೆಗಳ ನಡುವಿನ ಆಳವಾದ ನದಿಭಾಗದಲ್ಲಿ ಅವರ ದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದರೆ; ಸುಮಾರು 62 ಗಂಟೆಗಳ ನಂತರ ಅವರ ದೇಹ ಪತ್ತೆಯಾಗಿದ್ದು, ಅವರ ಕುಟುಂಬ ಸದಸ್ಯರ ರೋಧನ ಮುಗಿಲುಮುಟ್ಟಿದೆ. ಘಟನಾ ಸ್ಥಳದಿಂದ ನದಿ ಹರಿವಿನ ಉದ್ದಗಲಕ್ಕೂ ಇಂಚಿಂಚೂ ಶೋಧಿಸುತ್ತಾ ಬಂದ ಸಿಬ್ಬಂದಿಗೆ ಬಿದಿರು ಪೊದೆಗಳ ನಡುವೆ ತೇಲುತ್ತಿದ್ದ ಗಂಗಾಧರ ಗೌಡರ ಮೃತದೇಹ ಕಣ್ಣಿಗೆ ಬಿದ್ದಿದೆ.
ಕಳೆದ ಶುಕ್ರವಾರ ರಾತ್ರಿ ಸುಮಾರು ೭.೩೦ರ ಸುಮಾರಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ರಾಮಪಟ್ಟಣ-ನವಿಲುಗುರ್ಕಿ ಮಾರ್ಗದ ನಡುವಿನ ಕುಶಾವತಿ ನದಿ ರಭಸವಾಗಿ ಹರಿಯುತ್ತಿರುವಾಗ ನೀರಿಗೆ ಸಿಕ್ಕಿ ಗಂಗಾಧರ ಗೌಡರು ಕೊಚ್ಚಿಕೊಂಡು ಹೋಗಿದ್ದರು.
ಸದ್ಯಕ್ಕೆ ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದು, ಶವಪರೀಕ್ಷೆ ನಡೆಸಿದ ನಂತರ ದೇಹವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಿದ್ದಾರೆ. ಇಂದೇ ಅವರ ಅಂತ್ಯಕ್ರಿಯೆ ನಡೆಯಲಿದೆ. ಸ್ಥಳದಲ್ಲಿ ಗುಡಿಬಂಡೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪೊಲೀಸ್ ಇನಸ್ಪೆಕ್ಟರ್ ಲಿಂಗರಾಜು ಸೇರಿದಂತೆ ಮುಂತಾದವರು ಹಾಜರಿದ್ದರು.
ಇದೇ ವೇಳೆ ಗುಡಿಬಂಡೆ ಕರೆ ಏರಿ ಕೋಡಿ ಬಳಿ ಭಾರೀ ಜನಸಂದಣಿ ಸೇರಿದ್ದರಿಂದ ಟ್ರಾಫಿಕ್ ಜಾಂ ಉಂಟಾಗಿತ್ತು.
ಸಚಿವ ಡಾ.ಸುಧಾಕರ್ ಶೋಕ
ಆಪ್ರ ಗಂಗಾಧರ ಗೌಡ ದುರ್ಮರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತೀವ್ರ ಶೋಕ ವ್ಯಕ್ತಪಡಿದ್ದಾರೆ. ಘಟನೆ ನಡೆದ ಮರುದಿನವೇ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವರು ಗೌಡರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಈಗ ಆಪ್ತನ ಅಗಲಿಕೆಗೆ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.