ಏರ್‌ಬ್ಲಾಸ್ಟ್ ಎಂದ ತಜ್ಞರ ಮಾತು ನಂಬದ ಜನರು; ಆತಂಕದಲ್ಲಿ ಹತ್ತು ಹಳ್ಳಿಗಳು
ಚಿಂತಾಮಣಿ: ತಾಲೂಕಿನ ಮಿಟ್ಟಹಳ್ಳಿ ಗ್ರಾಮದಲ್ಲಿ ಆಗುತ್ತಿರುವ ಭೂ ಕಂಪನಗಳು ಕೇವಲ ಭೂಮಿಯೊಳಗಿನ ಅನಿಲ ಅಥವಾ ಗಾಳಿ ಸ್ಫೋಟ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಧೈರ್ಯ ಹೇಳಿದ ಮೇಲೆಯೂ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನ ಆತಂಕ ಕಡಿಮೆಯಾಗಿಲ್ಲ.
ಮತ್ತೆ ಮಿಟ್ಟಹಳ್ಳಿ ಗ್ರಾಮದಲ್ಲಿ ಕಂಪನಗಳು ಆಗುತ್ತಿದ್ದು, ಶನಿವಾರ ರಾತ್ರಿಯಿಂದ ಪುನಾ ಜನರು ಮನೆಗಳನ್ನು ತೊರೆದು ರಸ್ತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಭಾರೀ ಶಬ್ದದಿಂದ ಕಂಗಾಲಾಗಿರುವ ಜನರು ಮನೆಗಳನ್ನು ತೊರೆದು ಹೊರಬಂದಿದ್ದು, ಆತಂಕ ಬಿಗಡಾಯಿಸಿದೆ.
ತಾಲೂಕಿನ ಚಿಲಕಲನೇರ್ಪು ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಮಂಗಳವಾರದಿಂದ ಕೇಳಿಬರುತ್ತಿರುವ ಭಾರೀ ಸದ್ದು ಭೂಕಂಪ ಅಲ್ಲ ಬರಿ ಗಾಳಿ ಅಥವಾ ಭೂಮಿಯೊಳಗಿನ ಅನಿಲ ಸ್ಫೋಟ (ಏರ್ ಬ್ಲಾಸ್ಟ್) ಅಷ್ಟೆ. ಆದ್ದರಿಂದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಎಸ್.ಜಗದೀಶ್ ಅವರು ಮಿಟ್ಟಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದರು.
ಆದರೀಗ ಈ ಧೈರ್ಯದ ಮಾತುಗಳನ್ನು ಮರೆಸುವಂಥ ಭಾರೀ ಶಬ್ದಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪುನಾ ಜನರಲ್ಲಿ ಭಯ ಉಂಟಾಗಿದೆ. ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಭಾರೀ ಸದ್ದು ಕೇಳಿಬಂದ ಕೂಡಲೇ ಜನ ಹೊರಗೋಡಿ ಬಂದಿದ್ದಾರೆ.
ಮಿಟ್ಟಹಳ್ಳಿ ಮತ್ತು ಅದರ ಸುತ್ತಲಿನ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಶಬ್ದ ಕೇಳಿಬಂದಿದ್ದು, ಶನಿವಾರ ರಾತ್ರಿ ಎರಡು ಬಾರಿ ಈ ಸದ್ದು ಕೇಳಿಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ.