ಕುಸಿದುಬೀಳುವ ಆತಂಕದಲ್ಲಿ ಕೋಡಿ ರಸ್ತೆ; ಆತಂಕದಲ್ಲಿ ಗುಡಿಬಂಡೆ ಜನ, ಕುಸಿದರೆ ಭಾರೀ ಆಪತ್ತು
By Gs Bharath Gudibande
ಗುಡಿಬಂಡೆ: ಶತಮಾನಗಳ ಹಿಂದೆ ಪಾಳೆಯಗಾರರು ಕಟ್ಟಟಿಸಿದ್ದ ಇಲ್ಲಿನ ಐತಿಹಾಸಿಕ ಅಮಾನಿ ಭೈರಸಾಗರ ಕೆರೆ ಕೋಡಿ ಅಪಾಯದಲ್ಲಿದೆ.
ಸತತವಾಗಿ ಒಂದು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆರೆಯ ಕೋಡಿ ನಿರಂತರವಾಗಿ ಹರಿಯುತ್ತಿದ್ದು, ನೀರಿನ ಹರಿವಿನ ರಭಸಕ್ಕೆ ಕೋಡಿ ಹರಿಯುವ ಜಾಗದಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಅವು ಮತ್ತಷ್ಟು ಆಳಕ್ಕೆ ಕುಸಿದುಬೀಳುವ ಸ್ಥಿತಿಯಲ್ಲಿವೆ.
ಅಮಾನಿ ಭೈರಸಾಗರ ಕೆರೆಯ ಜಲಾನಯನ ಪ್ರದೇಶದಲ್ಲಿ ಇನ್ನೂ ಮಳೆಯಾಗುತ್ತಿದ್ದು, ಅಣೆಕಟ್ಟಿಗೆ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಕೆರೆ ಕೋಡಿ ನಿರಂತರವಾಗಿ ಹರಿಯುತ್ತಲೇ ಇದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಪೆರೇಸಂದ್ರ ಹಾಗೂ ಪೋಲಂಪಲ್ಲಿ, ಬೀಚಗಾನಹಳ್ಳಿ ಮಾರ್ಗವಾಗಿ ಗುಡಿಬಂಡೆಗೆ ಬರುವ ಮುಖ್ಯ ಮಾರ್ಗ ಅಮಾನಿ ಭೈರ ಸಾಗರ ಕೆರೆಕಟ್ಟೆಯ ಮೇಲಿನ ರಸ್ತೆಯೇ ಆಗಿದೆ.
ಆದರೆ ಕೋಡಿ ಹರಿಯುತ್ತಿರುವ ರಭಸಕ್ಕೆ ಕೆರೆ ಕೋಡಿ ರಸ್ತೆ ಸಂಪೂರ್ಣ ಹಾಳಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ವಹಿಸಬೇಕು ಎಂದು ಗುಡಿಬಂಡೆ ಜನರು ಒತ್ತಾಯ ಮಾಡುತ್ತಿದ್ದಾರೆ.
ಒಂದು ವೇಳೆ ಕೋಡಿ ದಾರಿ ಏನಾದರೂ ಕುಸಿದರೆ ಕೆರೆ ಕಟ್ಟೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಈ ರಸ್ತೆಯ ಸಂಪರ್ಕ ಕಡಿತವಾದರೆ ಗುಡಿಬಂಡೆ ಪಟ್ಟಣಕ್ಕೆ ಸಂಪರ್ಕ ಬಹುತೇಕ ಸ್ತಾಗಿತವಾಗುತ್ತದೆ. ದುರದೃಷ್ಟವಶಾತ್ ಹಾಗೇನಾದರೂ ಆದರೆ ಗುಡಿಬಂಡೆಗೆ ಬರಬೇಕಾದರೆ ಹಂಪಸಂದ್ರ ಅಥವಾ ರಾಮಪಟ್ಟಣ ಮಾರ್ಗವಾಗಿ ಬರಬೇಕಾಗುತ್ತದೆ. ರಾಮಪಟ್ಟಣ ಮಾರ್ಗದ ರಸ್ತೆ ಉತ್ತಮವಾಗಿಲ್ಲ ಹಾಗೂ ಹಂಪಸಂದ್ರ ಮಾರ್ಗದ ರಸ್ತೆ ಹೆಚ್ಚು ಸುತ್ತು ಆಗಲಿದೆ.
ಅಂದರೆ; ರಾಷ್ಟ್ರೀಯ ಹೆದ್ದಾರಿಯ ಸುಲಭ ಸಂಪರ್ಕ ಬಹುತೇಕ ಕಡಿದು ಹೋಗಲಿದೆ ಎಂದು ಗುಡಿಬಂಡೆ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನೀರಿನ ರಭಸಕ್ಕೆ ಸೃಷ್ಟಿಯಾದ ಗುಂಡಿ
ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರಂತರ ಮಳೆ ಆಗುತ್ತಿದೆ. ಅಲ್ಲದೆ, ಮುಖ್ಯವಾಗಿ ಆಮಾನಿ ಭೈರ ಸಾಗರ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕುಶಾವತಿ ನದಿ ಹರಿಯುತ್ತಲೇ ಇದೆ. ಅಲ್ಲದೆ, e ಕೆರೆಯೂ ಇಷ್ಟು ದೀರ್ಘವಾಗಿ ಕೋಡಿ ಹರಿಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಕೋಡಿಯ ಹೆಚ್ಚು ನೀರು ರಸ್ತೆಯ ಮೇಲೆ ಹರಿಯುತ್ತಿರುವ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗಿ ವಾಹನ ಸವಾರರು ಪ್ರಾಣ ಅಂಗೈಯಲ್ಲಿ ಇಟ್ಟುಕೊಂಡು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು
ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಗುಡಿಬಂಡೆ ತಾಲೂಕು ಆಡಳಿತ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಈ ಎಚ್ಚೆತ್ತುಕೊಳ್ಳಬೇಕು ಎಂದು ತಾಲೂಕಿನ ಜನರು ಒತ್ತಾಯ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಸುಮಾರು ಐದಾರು ಅಡಿಯಷ್ಟು ನೀರು ಕೊಡಿ ಹರಿದಿದೆ. ಆಂಬುಲೆನ್ಸ್ ಒಂದು ಸಿಕ್ಕಿಕೊಂಡಿದ್ದ ಘಟನೆಯ ಜತೆಗೆ ಕಾರು ಹಾಗೂ ದ್ವಿಚಕ್ರ ಸವಾರರು ರಸ್ತೆ ದಾಟಲು ಹರಸಾಹಸ ಪಟ್ಟಿದ್ದ ಸ್ಥಿತಿಯೂ ನಿರ್ಮಾಣ ಆಗಿತ್ತು. ಕೋಡಿಯ ರಸ್ತೆಗಳಲ್ಲಿ ಎಲ್ಲಿ ಗುಂಡಿ ಬಿದ್ದಿದೆ ಎಂದು ತಿಳಿಯದೇ ವಾಹನ ಚಲಾಯಿಸುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಳೆ ಶಾಸಕರ ಭೇಟಿ
ಅಮಾನಿ ಭೈರಸಾಗರ ಕೆರೆ ಕೋಡಿಯ ಸೇತುವೆ ಮೇಲಿನ ರಸ್ತೆ ದೊಡ್ಡ ಹಳ್ಳಗಳು ಬಿದ್ದಿರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಪಿ.ಡಬ್ಲ್ಯೂ.ಡಿ ಇಲಾಖೆಯ ಎಂಜಿನಿಯರ್ ಅವರನ್ನು ಕರೆಸಿ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಹಾಗೂ ಕೋಡಿ ಜಾಗದಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದು ಬ್ಯಾರಿಕೇಡ್ ಹಾಕಲು ಸೂಚಿಸಿ, ನಾನು ನಾಳೆ ಬೇಟಿ ಮಾಡಿ, ಕೆರೆ ಅಂಗಳವನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸುತ್ತೇನೆ.
ಎಸ್.ಎನ್.ಸುಬ್ಬಾರೆಡ್ಡಿ ಶಾಸಕರು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರ
ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ತುಂಬಿ ಹಲವು ದಿನಗಳಿಂದ ನಿರಂತರವಾಗಿ ಕೋಡಿ ಹರಿಯುತ್ತಿದೆ. ಅದನ್ನು ನೋಡಲು ಸಾರ್ವಜನಿಕರು ವಾಹನಗಳಲ್ಲಿ ತಂಡೋಪ ತಂಡವಾಗಿ ಬರುತ್ತಿದ್ದಾರೆ. ನೀರು ಹೆಚ್ಚು ರಭಸವಾಗಿ ಹರಿಯುತ್ತಿರುವ ಪರಿಣಾಮ, ಕೋಡಿ ಜಾಗದಲ್ಲಿ ಗುಂಡಿಗಳು ಬಿದ್ದು, ಕಟ್ಟೆ ಕುಸಿಯುವ ಭೀತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು.
-ಬುಲೆಟ್ ಶ್ರೀನಿವಾಸ್, ಅಧ್ಯಕ್ಷರು ಜಯಕರ್ನಾಟಕ ಸಂಘಟನೆ ಗುಡಿಬಂಡೆ
Comments 2