ರಸ್ತೆಯ ಮೇಲೆ ಉಕ್ಕಿ ಹರಿದ ಮುಖ್ಯರಸ್ತೆ; ವರುಣನ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರುವ ಚಿತ್ರಾವತಿ ನದಿ
by Ra Na Gopala Reddy Bagepalli
ಬಾಗೇಪಲ್ಲಿ: ಶತಮಾನ ಕಂಡರಿಯದ ಕುಂಭದ್ರೋಣ ಮಳೆಗೆ ಬಯಲು ಸೀಮೆ ತತ್ತರಿಸಿ ಹೋಗಿದೆ. ಒಂದೂವರೆ ತಿಂಗಳಿಂದ ಸುರಿದ ಮಳೆ ಒಂದೆಡೆಯಾದರೆ, ಕಳೆದ ರಾತ್ರಿ ಅಬ್ಬರಿಸಿದ ಮಹಾಮಳೆ ರೈತರ ಬದುಕನ್ನೇ ಬರ್ಬಾದ್ ಮಾಡಿಬಿಟ್ಟಿದೆ. ಇದೇ ಚಿತ್ರಾವತಿ ನದಿಯು ಉಕ್ಕಿ ಬಾಗೇಪಲ್ಲಿ ಮುಖ್ಯರಸ್ತೆಯ ಸೇತುವೆಯ ಮೇಲೆ ಉಕ್ಕಿ ಹರಿದಿದ್ದು, ಜನಸಂಪರ್ಕ ಸ್ಥಗಿತವಾಗಿತ್ತು.
ಚಿತ್ರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ರಾತ್ರಿ ಮತ್ತೂ ಅದಕ್ಕೂ ಹಿಂದಿನ ದಿನಗಳಿಂದ ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪರಗೋಡು ಬಳಿ ಇರುವ ಚಿತ್ರಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹೀಗಾಗಿ ನೀರು ಅಣೆಕಟ್ಟು ತುಂಬಿ ಹೊರಗೆ ಹರಿಯುತ್ತಿದ್ದು, ಆ ನೀರು ಬಾಗೇಪಲ್ಲಿ ಮೂಲಕ ಹಾದು ಹೋಗುತ್ತಿದೆ.
ನದಿ ಏಕಾಎಕಿ ಉಕ್ಕಿ ಹರಿದ ಪರಿಣಾಮ ಅಕ್ಕಪಕ್ಕ ಮನೆಗಳಿಗೆ ತೋಟಗಳಿಗೆ ನೀರು ನುಗ್ಗಿದೆ. ಕೆಲ ದಿನಗಳ ಹಿಂದೆ ಪಟ್ಟಣ ತ್ಯಾಜ್ಯ ಕೇಂದ್ರವಾಗಿ ಪರಿವರ್ತನೆಯಾಗಿದ್ದ ನದಿ ಪಾತ್ರವು ಈಗ ಭಾರೀ ಜಲರಾಶಿಯೊಂದಿಗೆ ರುದ್ರನರ್ತನ ಮಾಡುತ್ತಿದೆ.
ಸೇತುವೆ ಮೇಲೆ ಚಿತ್ರಾವತಿ ನದಿ ನೀರು ಉಕ್ಕಿ ಹರಿದ ಪರಿಣಾಮ ನ್ಯಾಯಾಲಯದ ಕಟ್ಟಡದವರೆಗೂ ನೀರು ವ್ಯಾಪಿಸಿತ್ತು. ಹೆಚ್ಚು ರಭಸವಾಗಿ ನೀರು ಹರಿಯುತ್ತಿರುವ ಕಾರಣ ಸೇತುವೆಯ ಎರಡೂ ಬದಿಗಳಲ್ಲಿ ಪೊಲೀಸರು ಸರ್ಪಗಾಲು ಹಾಕಿ, ಬ್ಯಾರಿಕೇಡ್ ನಿಲ್ಲಿಸಲಾಗಿದೆ.
ಧಾರಾಕಾರ ಮಳೆಗೆ ಕೆರೆಕಟ್ಟೆಗಳು, ಸಂಪರ್ಕ ರಸ್ತೆಗಳು ಹಾಳಾಗಿದ್ದರೆ, ಇತ್ತ ರೈತರ ಬೆಳೆಗಳು ಜಲಾವೃತವಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿ ಅನ್ನಧಾತ ಕಂಗಾಲಾಗುವಂತಾಗಿದೆ.
ದಶಕಗಳಿಂದ ಬರಪೀಡಿತವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಣಗಿದ್ದ ನದಿಗಳೆಲ್ಲವೂ ವರುಣನ ಅಬ್ಬರದಿಂದ ಉಕ್ಕಿ ಹರಿಯುತ್ತಿವೆ. ಕುಶಾವತಿ, ಉತ್ತರ ಪಿನಾಕಿನಿ, ಪಾಲಾರ್, ಪೆನ್ನಾರ್, ಸ್ವರ್ಣಮುಖಿ ನದಿಗಳು ಕುಂಭದ್ರೋಣ ಮಹಾಮಳೆಗೆ ಧುಮ್ಮಿಕ್ಕಿ ಹರಿಯುತ್ತಿವೆ.
ಮಳೆರಾಯನ ಆರ್ಭಟದಿಂದ ನೀರು ರಭಸವಾಗಿ ಹರಿಯುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಅಮಾನಿ ಬೈರಸಾಗರ ಕೆರೆಕಟ್ಟೆ, ಹಂಪಸಂದ್ರ, ಲಕ್ಕೇನಹಳ್ಳಿ, ನವಿಲುಗುರ್ಕಿ ರಸ್ತೆಗಳ ಮೇಲೆ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನೂ ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ ಮೈದುಂಬಿ ಹರಿಯುತ್ತಿರುವುದರಿಂದ ಬಾಗೇಪಲ್ಲಿ ಪಟ್ಟಣದ ಸಮೀಪ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಮಾಡಲಾಗಿದೆ.
ಜತೆಗೆ, ಬಾಗೇಪಲ್ಲಿ ತಾಲೂಕಿನ ಬಹತೇಕ ಕೆರೆಗಳು ಕೋಡಿ ಹೋಗಿದ್ದು, ಎಲ್ಲೆಲ್ಲೂ ನೀರು ಹರಿಯುತ್ತಿದೆ. ಸತತವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಗುಡಿಸಲು ಕುಸಿದು ಬೀಳುತ್ತಿದ್ದು, ಸರ್ಕಾರ ಪರಿಹಾರ ಧನ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ. ತಾಲೂಕಿನ ಯಲ್ಲಂಪಲ್ಲಿಯಲ್ಲಿ ಐದು ಮನೆಗಳು ಬಿದ್ದುಹೋಗಿವೆ ಎಂದು ವರದಿಯಾಗಿದೆ.
ಆಚೇಪಲ್ಲಿ ಗ್ರಾಮದಲ್ಲಿ ವೆಂಕಟೇಶ್ ಮತ್ತು ಶಿವಗಾಮಿ ದಂಪತಿಯ ಗುಡಿಸಲು ಮನೆಯ ಗೋಡೆ ಕುಸಿದು ಬಿದ್ದಿದ್ದು, ಸರ್ಕಾರದಿಂದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ತಾಲೂಕಿನಲ್ಲಿ ಮಳೆಯ ಅಬ್ಬರದಿಂದ ಬಿದ್ದು ಹೋಗಿರುವ ಮನೆಗಳ ಪುನಾ ನಿರ್ಮಾಣಕ್ಕಾಗಿ ಸರ್ಕಾರ ಸಹಾಯ ಹಸ್ತ ನೀಡಬೇಕೆಂದು ಅವರು ಮನವಿಸುತ್ತಿದ್ದಾರೆ.
ನದಿ ನೀರು ಮುಖ್ಯ ರಸ್ತೆಯ ಸೇತುವೆ ಮೇಲೆ ರಭಸವಾಗಿ ಹರಿಯುತ್ತಿದೆ. ಹಲವೆಡೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನೆಲಕಚ್ಚಿದೆ. ಪೊಲೀಸರ ಸಹಕಾರದಿಂದ ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಹಾಕಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ದಿವಾಕರ್, ತಹಸೀಲ್ದಾರ್ ಬಾಗೇಪಲ್ಲಿ