ನೀರು ಪಾಲಾದ ಬೆಳೆ, ಕಣ್ಣೀರಿಟ್ಟ ರೈತರು; ಅಯೋಮಯ ಸ್ಥಿತಿ ಸೃಷ್ಟಿಸಿದ ಅಪ್ಪಯ್ಯನಕುಂಟೆ ಕರೆ ನೀರು
by M Krishnappa Chikkaballapura
ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆ ಕೃಷಿ ಚಟುವಟಿಕೆಗಳನ್ನು ಹಾಗೂ ರೈತರು ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದು, ವಾರದಿಂದೀಚೆಗೆ ಒಬ್ಬರು ಜೀವ ಕಳೆದುಕೊಂಡಿದ್ದರೆ, ಇಬ್ಬರು ಮಳೆ ನೀರಿಗೆ ಕೊಚ್ಚಿಹೋಗುವ ವೇಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದಲ್ಲಂತೂ ತಗ್ಗು ಪ್ರದೇಶದ ಬಹುತೇಕ ಮನೆಗಳಿಗೆ ನೀರು ನುಗ್ಗುತ್ತಿರುವ ಹಿನ್ನಲೆಯಲ್ಲಿ ಜೀವ ಭಯದಲ್ಲಿ ಜನರು ದಿನದೂಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ನಾಲ್ಕೈದು ದಿನಗಳ ಮಟ್ಟಿಗೆ ಜಿಲ್ಲೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇಲ್ಲ. ಇನ್ನು; ಜಿಲ್ಲೆಯ ಬಹುತೇಕ ಶಾಲೆಗಳು ಶಿಥಿಲಗೊಂಡು ಸೋರುತ್ತಿರುವುದು ಒಂದೆಡೆಯಾದರೆ, ಶಾಲೆಗಳ ಆವರಣ ಮತ್ತು ಕೊಠಡಿಗಳಲ್ಲಿ ನೀರು ನಿಂತಿದೆ.
ಮಳೆಯ ರೌದ್ರಾವತಾರ ಇನ್ನು ಹೆಚ್ಚಿರುವ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳು ರಜೆ ಘೋಷಿಸಿವೆ.
ನಗರದ ಕಂದವಾರ ಕೆರೆ ಹೊರತುಪಡಿಸಿ ಈ ಭಾಗದ ಮಂಚನಬಲೆ ಕೆರೆ, ಅಮಾನಿ ಗೋಪಾಲಕೃಷ್ಣ ಕೆರೆ, ದೊಡ್ಡಮರಳಿ ಕೆರೆ ಸೇರಿದಂತೆ ಬಹುಪಾಲು ಕೆರೆಗಳು ತುಂಬಿ ಕೋಡಿ ಹರಿದಿವೆ. ದುರಂತ ಎಂದರೆ; ರಾಜಕಾಲುವೆ ಮುಚ್ಚಿ ಒತ್ತುವರಿ ಮಾಡಿಕೊಂಡ ಕಾರಣ ತುಂಬಿದ ಕೆರೆಗಳ ನೀರು ರಾಜಕಾಲುವೆಗಳ ಮೂಲಕ ಹಾದು ಹೋಗಲು ಸಾದ್ಯವಾಗದ ಹಿನ್ನಲೆಯಲ್ಲಿ ಕೆರೆಯಂಗಳ ಬಹುಪಾಲಿನ ನೀರು ಬೆಳೆಗಳ ಮೇಲೆ ಹರಿಯತೊಡಗಿದೆ.
ಹೀಗಾಗಿ ಬೆಳೆಗಳು ನೆರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಅಲ್ಲದೆ; ಕೆರೆಗಳ ನೀರು ಬೆಳೆಗಳ ಮೇಲೆ ಹರಿದ ಪರಿಣಾಮ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂಥ ದುಸ್ಥಿತಿ ಎದುರಾಗಿದೆ.
ಜಿಲ್ಲೆಯ ಬಹುಪಾಲು ಮನೆಗಳು ಸೇರಿ ರೆಸಿಡೆನ್ಶಿಯಲ್ ಪ್ರದೇಶಗಳು, ಹೊಲ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ರಸ್ತೆಗಳು ನದಿಗಳಾಗಿ ಪರಿವರ್ತನೆಗೊಂಡಿವೆ. ಶಾಲಾ ಮಕ್ಕಳು, ವೃದ್ಧರು ಯಾರೂ ಕೂಡ ಆ ನೀರಿನಲ್ಲಿ ನಡೆದು ಹೋಗಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಅಪಾಯಕಾರಿಯಾಗಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಅವಳಿ ಜಿಲ್ಲೆಗಳಲ್ಲಿ ಇನ್ನೆರಡು ದಿನಗಳ ಕಾಲ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಲಿದೆ ಎನ್ನುವ ಎಚ್ಚರಿಕೆ ನೀಡಿದೆ. ಜಿಲ್ಲಾಡಳಿತವೂ ಅಗತ್ಯ ಕ್ರಮವಹಿಸಿದೆ.
ಬೆಳೆಗಳು ನೀರು ಪಾಲು
ಚಿಕ್ಕಬಳ್ಳಾಪುರ ನಗರದ ರಾಜಕಾಲುವೆಗಳು ಒತ್ತುವರಿಯಾಗಿ ನೀರು ಬೆಳೆಗಳ ಮೇಲೆ ಹರಿದುಹೋಗುತ್ತಿದೆ. ಶಿಡ್ಲಘಟ್ಟ ರಸ್ತೆಯ ವಾಪಸಂದ್ರ ಸಮೀಪದ ಮಳೆ ನೀರಿನ ರುದ್ರನರ್ತನಕ್ಕೆ ದ್ರಾಕ್ಷಿ, ಟೊಮ್ಯಾಟೋ, ರಾಗಿ ಇತ್ಯಾದಿ ಬೆಳೆಗಳು ಕೈಚೆಲ್ಲಿವೆ. ತಮ್ಮ ಕಣ್ಣೆದುರೇ ನೀರುಪಾಲಾದ ಬೆಳೆಗಳನ್ನು ಕಂಡು ಅನ್ನಧಾತರು ಕಣ್ಣೀರು ಹಾಕುತ್ತಿದ್ದಾರೆ.
ತೋಟಗಳಿಗೆ ನುಗ್ಗಿದ ಅಪ್ಪಯ್ಯನಕುಂಟೆ ಕರೆ ನೀರು
ನಗರಕ್ಕೆ ಕೇವಲ 0.5 ಕಿ.ಮೀ ದೂರದಲ್ಲಿರುವ ಅಪ್ಪಯ್ಯನಕುಂಟೆ ಕೆರೆ ಬಳಿಯ ಪರಿಸ್ಥಿತಿ ಭೀಕರವಾಗಿದೆ. ಸಿಎಮ್‌ಸಿ ತನ್ನ ಮಿತಿಯಲ್ಲಿದೆ ಎಂದು ಹೇಳಿ ಕೆರೆಗೆ ಮರಳು ತುಂಬಿ ಅಕ್ರಮ ಕ್ಲಬ್ ಹೌಸ್ ಕಟ್ಟಿದ ಪರಿಣಾಮ ರಾಜಕಾಲುವೆಯಲ್ಲಿ ಹರಿಯಬೇಕಿದ್ದ ಮಳೆ ನೀರು ರಸ್ತೆ, ಮನೆಗಳು ಹಾಗೂ ತೋಟಗಳಿಗೆ ನುಗ್ಗಿದೆ.
- ಕೆರೆಗೆ ಹರಿಯಬೇಕಾದ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿರುವ ದೃಶ್ಯಗಳು
ಯಾವ ಕ್ಷೇಮಾಭಿವೃದ್ಧಿ ಉದ್ದೇಶಕ್ಕೆ ಅಂತ ಕ್ಲಬ್ ಹೌಸ್ ನಿರ್ಮಿಸಲಾಗುತ್ತಿದೆ? 22 ಎಕರೆ ವಿಸ್ತೀರ್ಣದ ಕೆರೆ ಮುಚ್ಚಿ ಹೋಗಿದ್ದು, ಈ ಅಕ್ರಮ ಯೋಜನೆಯಿಂದ ನೀರು ಹಿಡಿದಿಟ್ಟುಕೊಳ್ಳುವ ಜಾಗವನ್ನೇ ಕಬಳಿಸಲಾಗಿದೆ. ಪರಿಣಾಮ ಬೆಳೆದು ನಿಂತಿದ್ದ ಅಕ್ಕಪಕ್ಕದ ಜಮೀನುಗಳೆಲ್ಲ ನೀರಿನಲ್ಲಿ ಮುಳುಗಿವೆ.
ತಹಸೀಲ್ದಾರ್ ಅವರನ್ನು ಈ ಬಗ್ಗೆ ಸಂಪರ್ಕಿಸಿದರೆ ಅವರು ಇದು ಸಿಎಂಸಿ ಯೋಜನೆ ಎನ್ನುತ್ತಾರೆ. ಸಿಎಂಸಿ ಮತ್ತು ಜಿಲ್ಲಾಡಳಿತ ಮಾತ್ರ ಅನಾಹುತದಿಂದ ಪಾರಾಗುತ್ತಿದೆ. ರೈತರ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಅದೊಂದು ಅಕ್ರಮ ಯೋಜನೆಯಾಗಿದೆ. ಅದನ್ನು ಜಿಲ್ಲಾಡಳಿತ ತೆರವುಗೊಳಿಸುವವರೆಗೆ ಈ ಜಲ ಸಂಕಷ್ಟ ದೂರಾಗುವುದಿಲ್ಲ ಎಂದು ಸ್ಥಳೀಯ ನಾಗರೀಕರು ಹೇಳಿದ್ದಾರೆ.
ಕೆರೆಯನ್ನು ಮರಳಿ ಜೀರ್ಣೋದ್ಧಾರ ಮಾಡಬೇಕು ಹಾಗೂ ಚಿಕ್ಕಬಳ್ಳಾಪುರ ಪಟ್ಟಣ ವ್ಯಾಪ್ತಿಯಲ್ಲಿ ಆಗುತ್ತಿರುವ ಶೇ.50ರಷ್ಟು ನೀರಿನ ಸಮಸ್ಯೆಗೆ ಆ ಒಂದು ಕೆರೆಯ ಸಮರ್ಪಕ ನಿರ್ವಹಣೆ, ರಾಜಕಾಲುವೆಗಳ ಒತ್ತುವರಿ ತೆರವು ಪರಿಹಾರವಾಗಲಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ನಮ್ಮಲ್ಲಿ ಇರುವ ನೂರಾರು , ಹಳ್ಳಿಗಳು, ಕಟ್ಟೆಗಳು 5000,….1000,..2000 ..,500 .. ವರ್ಷ ಹಳೆಯವು,…. ನಮ್ಮ ಪೂರ್ವಿಕರು ಭದ್ರವಾದ ಅಡಿಪಾಯ,. ಬೃಹತ್ ಬಂಡೆ, ಗಾರೆ ಹಾಕಿ, ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ,… ಮಳೆ ನೀರು ಜಾಸ್ತಿ ಆದರೆ ಕೆರೆ ಕಟ್ಟೆಗಳು ನಿಸ್ಸಂದೇಹವಾಗಿ ಹಾಳು ಆಗುವವು,… ಅದನ್ನು ಪುನಃ ನಿರ್ಮಿಸಿ, ಸಂರಕ್ಷಿಸಿ ಉಳಿಸಿ ರುವರು,…. ಆದರೆ ಈಗ ನಮ್ಮ ಬಳಿ ಸನಾತನ ಕೆರೆ ನಿರ್ಮಾಣ ಶಾಸ್ತ್ರ ಉಪಲಬ್ಧ ಇಲ್ಲ ವಾದಾರಿಂದ,……. ಸ್ಪಲ್ಪ ಜಾಗರೂಕರಾಗಿ ಇರಬೇಕು,….60 ಸಂವತ್ಸರಗಳು ಒಂದೇ ರೀತಿ ಹವಾಮಾನ ಇರುದಿಲ್ಲ,…. ಕಾಲಕ್ಕೆ ತಕ್ಕ ಹಾಗೆ ಸಾಗಬೇಕು ಅಷ್ಟೆ,…… ಬರಗಾಲದ ಸಂದರ್ಭವೂ, ಒದಗಿ ಬರುತ್ತದೆ,…