ನೆರೆಯಿಂದ ನಡುಗಡ್ಡೆಯಾದ ಗುಡಿಬಂಡೆ; 4 ದಿಕ್ಕುಗಳ ಸಂಪರ್ಕ ಬಂದ್
- ಕೆರೆ ಏರಿ ಸೇತುವೆಗಳಲ್ಲಿ ಬಿರುಕುಬಿಟ್ಟ ರಸ್ತೆಗಳು, ಆಂತಕದಲ್ಲಿ ಜನ
- ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕುಶಾವತಿ ನದಿ, ಗ್ರಾಮಗಳಿಗೂ ಜಲ ದಿಗ್ಬಂಧನ
- 30ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಅದೃಷ್ಟಕ್ಕೆ ಪ್ರಾಣಾಪಾಯವಿಲ್ಲ
- ಎಸ್ಪಿ, ಎಸಿ, ಭೇಟಿ, ಪರಿಶೀಲನೆ
By GS Bharath Gudibande
ಗುಡಿಬಂಡೆ: ರಾಜ್ಯದಲ್ಲಿಯೇ ಬರಪೀಡಿತ ತಾಲೂಕು ಎಂದೇ ಗುರುತಿಸಲ್ಪಟ್ಟಿದ್ದ ಗುಡಿಬಂಡೆ ಇದೀಗ ಜಲಪೀಡಿತ ತಾಲೂಕಾಗಿ ಹೊರಹೊಮ್ಮಿದ್ದು, ಅಕ್ಷರಶಃ ನಡುಗಡ್ಡೆಯಾಗಿದೆ.
ತಾಲೂಕು ಕೇಂದ್ರ ಗುಡಿಬಂಡೆ ಪಟ್ಟಣವನ್ನು ಸಂಪರ್ಕಿಸುವ ನಾಲ್ಕೂ ದಿಕ್ಕುಗಳ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ಪಟ್ಟಣದ ಜನರು ಊರು ದಾಟಿ ಹೊರಗೆ ಬಾರದ ಪರಿಸ್ಥಿತಿ ಸೃಷ್ಟಿಯಾಗಿದೆ.
ಇತಿಹಾಸಲ್ಲೇ ಎಂದೂ ನೋಡದಾ, ಕೇಳಿರಿಯದಷ್ಟು ಮಳೆ ತಾಲೂಕಿನಲ್ಲಿ ಆಗುತ್ತಿದೆ. ಇಡೀ ರಾಜ್ಯದಲ್ಲಿಯೇ ಮಳೆ, ನೆರೆ ವಿಷಯದಲ್ಲಿ ಸೇಫ್ ಝೋನ್ ಆಗಿದ್ದ ಗುಡಿಬಂಡೆ ಕಳೆದ 45 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಕ್ಷರಶಃ ಅಪಾಯಕ್ಕೆ ಸಿಲುಕಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಉಳಿದೆಲ್ಲ ಜಿಲ್ಲೆಗಳಿಂತ ಸುರಕ್ಷಿತ ಮಟ್ಟದಲ್ಲಿದ್ದ ಇಡೀ ತಾಲೂಕು ಜಲಪೀಡಿತವಾಗಿದ್ದು, ಬಹುತೇಕ ಎಲ್ಲಾ ಹಳ್ಳಿಗಳ ಸಂಪರ್ಕ ರಸ್ತೆಗಳು ಜಲಾವೃತವಾಗಿವೆ ಜನರು ಮನೆಗಳಲ್ಲೇ ಉಳಿಯಬೇಕಾದ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆ.
ಇದರ ಬೆನ್ನಲ್ಲೇ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿಯ ಐತಿಹಾಸಿಕ ಏಳುಸುತ್ತಿನ ಕೋಟೆಯಲ್ಲಿನ ಮೊದಲ ಕೋಟೆ ಕುಸಿದಿದ್ದು, ಬೆಟ್ಟದ ತಪ್ಪಲಿನ ಮನೆಗಳಲ್ಲಿ ವಾಸ ಮಾಡುವ ಜನರು ಅಂಗೈಯಲ್ಲಿ ಜೀವ ಹಿಡಿದುಕೊಂಡಿದ್ದಾರೆ.
90% ಕೆರೆ-ಕುಂಟೆಗಳು ಭರ್ತಿ
ಸತತ ಮಳೆಯಿಂದ ತಾಲೂಕಿನ ಬಹುತೇಕ ಕೆರೆ, ಕುಂಟೆಗಳು ತುಂಬಿವೆ. ಅಂತರ್ಜಲ ಬರಿದಾಗಿದ್ದ ಕೊಳವೆ ಭಾವಿಗಳಲ್ಲಿ ಜಲ ಉಕ್ಕಿ ಹರಿಯುತ್ತಿದೆ. ಒಂದೆಡೆ ಜನರಿಗೆ ಇದು ಸಂತೋಷ ಉಂಟು ಮಾಡಿದ್ದರೆ, ಮತ್ತೊಂದೆಡೆ ಬೆಳೆಗಳು ನಾಶವಾಗಿ, ಮನೆಗಳು ಕುಸಿದು, ನಿರಂತರ ಚಳಿ ಮಳೆಯಿಂದ ಸಂಕಟ ಅನುಭವಿಸುತ್ತಿದ್ದಾರೆ. ಈಗಾಗಲೇ ಗುಡಿಬಂಡೆಯ ಅಮಾನಿ ಭೃರಸಾಗರ ಕೆರೆ ಕೋಡಿ ಹರಿಯುತ್ತಿದ್ದರೆ, ಅದರ ನೈಸರ್ಗಿಕ ಕಾಲುವೆಯ ಸಂಪರ್ಕದಲ್ಲಿರುವ ಹಂಪಸಂದ್ರ, ಕಡೇಹಳ್ಳಿ ಕೆರೆಗಳು ಕೋಡಿ ಹರಿದು ಆ ಭಾಗದಲ್ಲೂ ಜನಜೀವನಚಕ್ಕೆ ಜಲ ದಿಗ್ಬಂಧನ ಉಂಟಾಗಿದೆ. ಇನ್ನು; ಗರುಡಾಚಾರ್ಲಹಳ್ಳಿ ಸೇರಿದಂತೆ ಮುಂತಾದ ಕೆರೆಗಳು ತುಂಬುವ ಹಂತದಲ್ಲಿವೆ.
ಬಿರುಕು ಬಿಟ್ಟ ಕೆರೆ ಕಟ್ಟೆಗಳು
ತಾಲೂಕಿನ ರಾಮಕೆರೆ, ಸೋಮೇನಹಳ್ಳಿ ಕೆರೆ, ಸದಾಶಿವನಹಳ್ಳಿ ಕೆರೆ ಹಾಗೂ ಮೇಳ್ಯಕೆರೆಗಳಲ್ಲಿ ನೀರಿನ ರಭಸಕ್ಕೆ ತೂಬುಗಳು ಒಡೆದಿವೆ. ಇನ್ನೂ ಕೆಲ ಕೆರೆಗಳ ಕಟ್ಟೆಗಳು ಬಿರುಕು ಬಿಟ್ಟಿದ್ದು, ಆಯಾ ಗ್ರಾಮಗಳಲ್ಲಿ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಉಲ್ಲೋಡು ಗ್ರಾಮದ ಕೆರೆ ಏರಿ ಸೇತುವೆ ರಸ್ತೆ ಬಿರುಕು ಬಿಟ್ಟಿದ್ದು, ಯಾವುದೇ ಬಗೆಯ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜನರಿಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
ಗುಡಿಬಂಡೆಯ ಅಮಾನಿ ಭೈರಸಾಗರಕ್ಕೆ ಭೇಟಿ ನೀಡಿದ ಎಸ್ ಪಿ ಮಿಥುನ್ ಕುಮಾರ್.
ಗುಡಿಬಂಡೆಗೆ ಧಾವಿಸಿದ ಎಸಿ, ಎಸ್ಪಿ
ತಾಲೂಕಿನಲ್ಲಿ ಕೆರೆಗಳಲ್ಲಿ ನೀರು ಅಪಾಯಕಾರಿ ಮಟ್ಟ ಮೀರಿ ಸಂಗ್ರಹವಾಗುತ್ತಿದೆ. ಅನೇಕ ಕೆರೆಗಳು ದೊಡ್ಡ ಪ್ರಮಾಣದಲ್ಲಿ ಕೋಡಿ ಹರಿಯುತ್ತಿವೆ. ಕೆಲ ಕೆರೆ ಕಟ್ಟೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಎಸಿ ರಘುನಾಥ್ ಅವರು ಗುಡಿಬಂಡೆಗೆ ಭೇಟಿ ನೀಡಿ ತಹಸೀಲ್ದಾರ್ ಸಿಗ್ಬತ್ತುಲ್ಲಾ ಅವರ ಜತೆ ಚರ್ಚೆ ನಡೆಸಿದರು.
ಅಮಾನಿ ಭೈರಸಾಗರ ಕೆರೆಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ರಘುನಾಥ್.
ಮನೆಗಳಿಗೆ ಹಾನಿ, ಕುಸಿಯುವ ಹಂತದಲ್ಲಿ ಹಳೆ ಮನೆಗಳು
ವರ್ಲಕೊಂಡ, ಪೋಲಂಪಲ್ಲಿ ಸದಾಶಿವನಹಳ್ಳಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮನೆಗಳಿಗೆ ತೀವ್ರ ಹಾನಿಯಾಗಿದೆ. ಕೆಲ ದಿಚನಗಳ ಹಿಂದೆಯಷ್ಟೇ ಪೋಲಂಪಲ್ಲಿ ಗ್ರಾಮದಲ್ಲಿ ಮನೆ ಕುಸಿದು ಇಬ್ಬರು ಗಾಯಗೊಂಡಿದ್ದರು.
ಮಳೆಗೆ ಕುಸಿದಿರುವ ಮನೆ, ಸಂಕಷ್ಟದಲ್ಲಿ ಜನರು.
ತಾಲೂಕು ಬಹುತೇಕ ಎಲ್ಲ ಗ್ರಾಮಗಳಲ್ಲಿ ನೂರಾರು ಮನೆಗಳು ಮಳೆ ಅಬ್ಬರಕ್ಕೆ ಅಪಾಯದಲ್ಲಿವೆ. ಆದರೂ ಜನರು ಅರಿವಿಲ್ಲದ ಕಾರಣ ಅದೇ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಅಂಥ ಮನೆಗಳನ್ನು ಪರಿಶೀಲನೆ ಮಾಡಿ ಅಲ್ಲಿಂದ ನಿವಾಸಿಗಳನ್ನು ತೆರವುಗೊಳಿಸಿ ಕಾಳಜಿ ಕೇಂದ್ರಗಳಿಗೆ ಕಳಿಸಬೇಕಾಗಿದೆ.
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಳೆಗೆ ತಾಲೂಕಿನಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇದು ಸರಕಾರಿ ಅಂಕಿ ಅಂಶವಾಗಿದ್ದು, ಇದರ ದುಪ್ಪಟ್ಟು ಸಂಖ್ಯೆಯ ಮನೆಗಳು ಕುಸಿಯುವ ಸ್ಥಿತಿಯಲ್ಲಿವೆ ಎಂದು ಮಾಹಿತಿ ಸಿಕ್ಕಿದೆ. ಹಳೇ ಮನೆ, ಕಟ್ಟಡಗಳನ್ನು ಹೊಂದಿರುವವರು ನಿರ್ಲಕ್ಷ್ಯ ತೋರದೇ ಜಿಲ್ಲಾಡಳಿತ ತೆರೆದಿರುವ ಕಾಳಜಿ ಕೇಂದ್ರಗಳಿಗೆ ಹೋಗುವಂತೆ ಸೂಚನೆ ನೀಡಲಾಗಿದೆ.
ಪ್ರತಿ ತಾಲೂಕಿನಲ್ಲಿ ಕಾಳಜಿ ಕೇಂದ್ರ
ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಗುಡಿಬಂಡೆ, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲೂಕುಗಳಲ್ಲಿ ಶೀಘ್ರವಾಗಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸುವಂತೆ ಆದೇಶಿಸಿದೆ. ಹಳೇ ಕಟ್ಟಡ, ಗುಡಿಸಲಿನಲ್ಲಿ ವಾಸಿಸುವ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲು ತಿಳಿಸಲಾಗಿದೆ.
ಕಾಳಜಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ನಿರಾಶ್ರಿತರಿಗೆ, ಬಡವರಿಗೆ, ಗುಡಿಸಲು ಮನೆಗಳ ಕುಟುಂಬಗಳಿಗೆ ಆಶ್ರಯ ನೀಡುತ್ತಿರುವುದು ಶ್ಲಾಘನೀಯ. ಗುಡಿಬಂಡೆ ಪೊಲೀಸರು, ತಹಸೀಲ್ದಾರ್, ಪಟ್ಟಣ ಪಂಚಾಯತಿ ಅಧಿಕಾರಿಗಳು, ಆರೋಗ್ಯ ಇಲಾಖೆ, ಪೌರ ಕಾರ್ಮಿಕರು, ತಾಲೂಕು ಪಂಚಾಯತಿ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಾಸ್ಟೆಲ್ ವಾರ್ಡನ್ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಅಭಿನಂದನೆಗಳು.
ನವೀನ್ ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಗುಡಿಬಂಡೆ
- ಉಲ್ಲೋಡು ಕೆರೆ ಏರಿ ಸೇತುವೆ ರಸ್ತೆ ಬಿರುಕು.