ಬಿಜೆಪಿ ಜನ ಸ್ವರಾಜ್ಯ ಯಾತ್ರೆಗೆ ಹೆಚ್ಡಿಕೆ ಟಾಂಗ್
ಬೆಂಗಳೂರು: ರಾಜ್ಯದಲ್ಲಿ ಮಹಾಮಳೆಯಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದರೆ ಆಡಳಿತಾರೂಢ ಬಿಜೆಪಿ ಪಕ್ಷ ಶಂಖ ಊದಿಕೊಂಡು ಜನ ಸ್ವರಾಜ್ ಯಾತ್ರೆ ಅಂತ ಶುರು ಮಾಡಿಕೊಂಡಿದೆ. ಯಾರ ಸ್ವರಾಜ್ಯಕ್ಕಾಗಿ ಈ ಯಾತ್ರೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; “ಬಿಜೆಪಿಯವರು ಎಂಥದ್ದೋ ಶಂಖ ಊದೋಕೆ ಹೋಗಿದ್ದಾರೆ. ಶಂಖ ಊದಿದರೇ ಜನರಿಗೆ ಸ್ವರಾಜ್ಯ ಬರುತ್ತದಾ? ಇದರಿಂದ ರೈತರ ಸಮಸ್ಯೆ ಬಗೆಹರಿಯುತ್ತಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಹಾರ ನಡೆಸಿದರು.
ರಾಜ್ಯದಲ್ಲಿ ಅನೇಕ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸರ್ಕಾರದ ಅಂದಾಜಿನ ಪ್ರಕಾರ 7 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. ಚಿಕ್ಕಮಗಳೂರು ಕಡೆ ಕಾಫಿ ತೋಟಗಳು ಹಾಳಾಗಿವೆ. ರಾಯಚೂರು ಜಿಲ್ಲೆಯಲ್ಲಿ ಭತ್ತ ಕೆಸರಿನಲ್ಲಿ ಮುಚ್ಚಿ ಹೋಗಿದೆ. ಚಿತ್ರದುರ್ಗ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಎಲ್ಲಾ ಕಡೆ ಅನಾಹುತ ಆಗಿದೆ. ಬೆಂಗಳೂರಿನಲ್ಲೂ ರಸ್ತೆಗಳು ಹಾಳಾಗಿವೆ, ಹಲವಾರು ಸಮಸ್ಯೆಗಳು ಎದುರಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ, ಸಚಿವರು ತ್ವರಿತವಾಗಿ ಪರಿಹಾರ ಕೆಲಸ ಮಾಡುವುದು ಬಿಟ್ಟು ಶಂಖ ಊದಿಕೊಂಡು ಹೋದರೆ ಹೇಗೆ? ಎಂದು ಅವರು ಕಿಡಿ ಕಾರಿದರು.
ಕೋರೋನ ಸಂಕಷ್ಟದಿಂದ ಜನರ ಬದುಕು ಏನಾಗಿದೆ? ಅವರು ಬದುಕು ದಯನೀಯವಾಗಿ ಬದಲಾಗಿದೆ. ಹೆಜ್ಜೆ ಹೆಜ್ಜೆಗೂ ರೈತರು ಕಷ್ಟದಲ್ಲಿದ್ದಾರೆ. ಸರಕಾರ ಮತ್ತು ಸಚಿವರು ಏನು ಮಾಡುತ್ತಿದ್ದಾರೆ. ಮಳೆ ಅನೇಕ ದಿನಗಳಿಂದ ಬೀಳುತ್ತಿದ್ದರೂ ಅವರು ಜನರ ಕಡೆ ತಲೆ ಹಾಕುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.
ಗೋವಿನ ಸಂರಕ್ಷಣೆ ಮಾಡುತ್ತೇವೆ ಎಂದು ಸರಕಾರ ಹೇಳಿ ಎಲ್ಲ ಕಡೆ ಗೋಶಾಲೆಗಳನ್ನು ತೆರೆಯುತ್ತವೆ ಎಂದು ಹೇಳಿತ್ತು. ಈಗ ನೋಡಿದರೆ ಗೋಶಾಲೆಗಳನ್ನು ತೆರೆಯಲು ಕೇವಲ 25 ಕೋಟಿ ರೂಪಾಯಿ ಕೊಡಲಾಗುವುದು ಎಂದು ಈಗ ಹೇಳುತ್ತಿದ್ದಾರೆ. ಗೋ ಶಾಲೆಗಳಿಗೆ ಹಣ ನೀಡುವುದಕ್ಕೂ ಸಾಕಾರಕ್ಕೆ ಆಗಿಲ್ಲ. ಬೆಳೆ ನಾಶದಿಂದ ಮೇವು ಕೊರತೆ ಉಂಟಾಗಿದೆ. ಇದೆಲ್ಲಾ ಒಂದಕ್ಕೊಂದು ಚೈನ್ ಲಿಂಕ್ ಇದೆ. ಸ್ಥಳೀಯ ಮಟ್ಟದಲ್ಲಿ ಡಿಸಿಗಳು ಇಷ್ಟೊತ್ತಿಗೆ ಸಮೀಕ್ಷೆ ಮಾಡಬೇಕಿತ್ತು. ಅದಾವುದೂ ಆಗಿಲ್ಲ. ಶಂಕ ಊದಿಕೊಂಡು ಹೋದರೆ ಇದೆಲ್ಲ ಬಗೆಹರಿಯುತ್ತಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದರು.
ಮೊದಲು ಸರಕಾರ ಕಮೀಶನ್ ಹೊಡೆಯುವ ಕೆಲಸಗಳನ್ನು ನಿಲ್ಲಿಸಬೇಕು. ಈ ಬಗ್ಗೆ ಯಾರೋ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಪರ್ಸಂಟೇಜ್ ವ್ಯವಹಾರ ಇನ್ನಾದರೂ ನಿಲ್ಲಿಸಬೇಕು ಎಂದು ತೀಕ್ಷ್ಣವಾಗಿ ಹೇಳಿದ ಅವರು; ಕೇಂದ್ರ ಸರಕಾರದ ಮುಂದೆ ಅರ್ಜಿ ಇಡ್ಕೊಂಡು ಹೋದ್ರೆ ಆಗುತ್ತಾ? ಎಸ್ ಡಿಆರ್ ಎಫ್ ನಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕು. ಕೂಡಲೇ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ಮಾಡಿ, ಬೆಳೆ ಪರಿಹಾರ ನೀಡುವ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರ ಅಭ್ಯರ್ಥಿಗಳ ಪಟ್ಟಿ; ಅನ್ಯ ಪಕ್ಷಗಳಿಂದ ಬಂದವರಿಗೆ ಟಿಕೆಟ್ ಇಲ್ಲ
ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಸೋಮವಾರ ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಬರವಿಲ್ಲ. ಗೆಲ್ಲುವ ಶಕ್ತಿ ಇರುವವರು ಇದ್ದಾರೆ. ಆರರಿಂದ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತೇವೆ. ಕಾಂಗ್ರೆಸ್ ಬಿಜೆಪಿಯ ಅಸಮಧಾನಿತರಿಗೆ ಕಾದು ಕುಳಿತಿಲ್ಲ. ಈಗ ನಿರ್ಧಾರ ಮಾಡಿರುವ ಕ್ಷೇತ್ರಗಳಲ್ಲಿ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದರು.
ಮಂಡ್ಯ ಅಭ್ಯರ್ಥಿಯಾಗಿ ದಿನೇಶ್ ಗೂಳಿಗೌಡ ಟಿಕೆಟ್ ಕೊಟ್ಟಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಸಚಿವರು ಒಬ್ಬರಿಗೆ ಸಹಾಯಕರಾಗಿದ್ದವರು. ನಂತರ ಬಿಜೆಪಿ ಸಚಿವರಿಬ್ಬರಿಗೆ ಸಹಾಯಕರಾಗಿದ್ದರು. ಅಂತಹವರನ್ನು ಕರೆದು ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷವು ಬಿಜೆಪಿಯ ಸಿ ಟೀಂ ಆಗಿದ್ಯಾ ಎನ್ನುವುದನ್ನು ಅವರೇ ಹೇಳಬೇಕು ಎಂದು ಟಾಂಗ್ ಕೊಟ್ಟರು ಹೆಚ್ಡಿಕೆ.