ಅಮಾನಿ ಭೈರಸಾಗರ ಕಟ್ಟೆಗೆ ಬಂದು ಕಾರು ಹತ್ತಿದ ಜಿಲ್ಲಾಧಿಕಾರಿ; ಜಲಪೀಡಿತ ಗುಡಿಬಂಡೆ ಬಗ್ಗೆ ಮಲತಾಯಿ ದೋರಣೆ
- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಗೆ 357 ಕೋಟಿ ರೂ. ಬೆಳೆ ಹಾನಿ
- 30,000 ಹೆಕ್ಟೇರ್ ರಾಗಿ, 5,200 ಹೆಕ್ಟೇರ್ ತೋಟಗಾರಿಕೆ ಬೆಳೆ ನೀರುಪಾಲು
- ಅಮಾನಿ ಭೈರಸಾಗರ ಕೆರೆ ಕಟ್ಟೆ ದುರಸ್ತಿ ಮಾಡಲು ಶೀಘ್ರ ಕ್ರಮದ ಭರವಸೆ
By GS Bharath Gudibande.
ಗುಡಿಬಂಡೆ: ಸುಮಾರು ನಲವತ್ತೈದಕ್ಕೂ ಹೆಚ್ಚು ದಿನ ಗುಡಿಬಂಡೆ ತಾಲೂಕಿನ ಜನರು ಅತಿವೃಷ್ಟಿಯಿಂದ ನರಳಿದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಡೀಸಿ ಮೇಡಮ್ʼನವರು ಜಲಪೀಡಿತ ತಾಲೂಕಿನಲ್ಲಿ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ.
ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಮಳೆಹಾನಿಗೆ ತುತ್ತಾದ ಎರಡನೇ ಜಿಲ್ಲೆ ಇದಾಗಿದ್ದು, ಅದರಲ್ಲಿಯೂ ಜಿಲ್ಲೆಯ ಎಲ್ಲಾ ತಾಲೂಕುಗಳ ಪೈಕಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಗುಡಿಬಂಡೆ. ಆದರೆ, ಒಂದೂವರೆ ತಿಂಗಳಿಂದ ಒಂದಲ್ಲ ಒಂದು ಜಲ ಸಂಕಷ್ಟಕ್ಕೆ ಸಿಲುಕಿದ್ದ ತಾಲೂಕಿಗೆ ಡೀಸಿ ಅವರು ಹೆಜ್ಜೆ ಇಟ್ಟಿರಲಿಲ್ಲ. ಅಂತೂ ಇವತ್ತು ಪ್ರತ್ಯಕ್ಷರಾಗಿ ಪರಿಶೀಲನೆ ನಡೆಸಿದ್ದಾರೆ.
ಉಕ್ಕಿ ಹರಿಯುತ್ತಿರುವ ಕುಶಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ ಏರಿ ಸ್ಥಳವನ್ನು ಪಟ್ಟಣವು ನಾಲ್ಕೂ ದಿಕ್ಕುಗಳಿಂದ ಜಲದಿಗ್ಬಂಧನಕ್ಕೆ ಒಳಗಾದ ನಾಲ್ಕೈದು ದಿನಗಳ ನಂತರ ಮೇಡಮ್ ನವರು ಅಲ್ಲಿಗೆ ಪದಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
ಕುಶಾವತಿ ಜಲಾನಯನ ಪ್ರದೇಶಲ್ಲಿ ಭಾರೀ ಮಳೆಯಾಗಿ ಅಮಾನಿ ಭೈರಸಾಗರ ಕೋಡಿ ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿದೆ ಎಂದು ಮಾಧ್ಯಮಗಳು ನಿರಂತರವಾಗಿ ಸುದ್ದಿ ಮಾಡಿದರೂ ಜಿಲ್ಲಾಧಿಕಾರಿ ಆರ್.ಲತಾ ಅವರು ತಾಲೂಕಿನತ್ತ ಸುಳಿದಿರಲಿಲ್ಲ. ಅಲ್ಲದೆ, ಹಂಪಸಂದ್ರ, ಕಡೇಹಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ಉಕ್ಕಿ ತಾಲೂಕು ದ್ವೀಪದಂತೆ ಆದರೂ ಅವರು ಇತ್ತ ತಲೆ ಹಾಕಿಲಿಲ್ಲ. ಮನೆಗಳು ಕುಸಿದು ಜನರು ಆಸ್ಪತ್ರೆ ಪಾಲಾದರೂ, ಶಾಲೆಗಳು ಸೋರುತ್ತಾ ಕುಸಿದು ಬೀಳುವ ಸ್ಥಿತಿಯಲ್ಲಿದ್ದರೂ ಅವರು ಗುಡಿಬಂಡೆಯತ್ತ ಕಾಳಜಿಯಿಂದ ನೋಡಲೇ ಇಲ್ಲ.
ಅಷ್ಟೇ ಅಲ್ಲದೆ, ಕೆಲವೊತ್ತು ಕಾಟಾಚಾರಕ್ಕೆ ಅಮಾನಿ ಭೈರಸಾಗರ ಏರಿಯನ್ನು ಪರಿಶೀಲನೆ ಮಾಡಿದ ಅವರು ಅಧಿಕಾರಿಗಳ ಜತೆ ಚರ್ಚೆ ನಡೆಸಿ ಬಾಗೇಪಲ್ಲಿಯತ್ತ ಹೊರಟರು. ಅವರು ಗೌರಿಬಿದನೂರಿನಿಂದ ತಾಲೂಕಿಗೆ ಬಂದಿದ್ದರು. ಭಾರೀ ಮಳೆಯಿಂದ ತಾಲೂಕಿನ ಕೆಲ ಕೆರೆ ಕಟ್ಟೆಗಳು ಒಡೆದುಹೋಗುವ ಹಂತದಲ್ಲಿವೆ ಎಂದು ಸ್ಥಳೀಯರು ಅಲವತ್ತುಕೊಂಡರೂ ಕಿವಿಗೊಡದ ಜಿಲ್ಲಾಧಿಕಾರಿ ತರಾತುರಿಯಲ್ಲಿ ಅಲ್ಲಿಂದ ನಿರ್ಗಮಿಸಿದರು.
ಶನಿವಾರ ಮಳೆ ಕೋಮಚ ಬಿಡುವು ಕೊಟ್ಟ ಮೇಲೆ ಹಾಗೂ ಮಾಧ್ಯಮಗಳಲ್ಲಿ ಗುಡಿಬಂಡೆಯ ಮಳೆ ಸುದ್ದಿಗಳು ಭಾರೀ ಪ್ರಚಾರ ಪಡೆದ ಮೇಲೆ ಅವರು ತಾಲೂಕಿಗೆ ಭೇಟಿ ನೀಡಿದ್ದಾರೆ.
ಕಾಳಜಿ ಕೇಂದ್ರಗಳ ಸ್ಥಾಪನೆ
ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿಯೇ ದಾಖಲೆ ಪ್ರಮಾಣದ ಮಳೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗಿದೆ. ಪ್ರತೀ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಗೌರಿಬಿದನೂರು ಕಾಳಜಿ ಕೇಂದ್ರದಲ್ಲಿ 1,015 ಜನರಿಗೆ ಆಶ್ರಯ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ. ಆದರೆ, ನಲವತ್ತೈದು ದಿನಗಳಿಂದ ಮಳೆ ಸುರಿದರೆ, ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿರುವುದು ಎರಡು ಮೂರು ದಿನಗಳ ಹಿಂದೆ ಮಾತ್ರ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಳೆಯ ಅಬ್ಬರಕ್ಕೆ 40ಕ್ಕೂ ಹೆಚ್ವು ಹಳೆಯ ಮನೆಗಳು ಸಂಪೂರ್ಣವಾಗಿ ಬಿದ್ದು ಹೋಗಿವೆ. ಇನ್ನೂ 500ಕ್ಕೂ ಹೆಚ್ಚು ಮನೆಗಳಿಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಮನೆಗಳನ್ನು ಕಳೆದುಕೊಂಡವರಿಗೆ ಶೀಘ್ರವೇ ವಸತಿ ಕಲ್ಪಸಲಾಗುವುದು ಎಂದು ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮಗಳಲ್ಲಿ 50% ಮಿ.ಮೀ.ಗಿಂತ ಹೆಚ್ಚು ಮಳೆ
ಕಳೆದ ಹಲವು ದಿನಗಳಿಂದ ಬೀಳುತ್ತಿರುವ ಮಳೆಗೆ ಜಿಲ್ಲೆಯ ಬಹುತೇಕ ಗ್ರಾಮಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಒಟ್ಟು 157 ಗ್ರಾಮ ಪಂಚಾಯತಿಯಲ್ಲಿ 70ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ 50% ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಹಾಗಾಗಿ ಎಲ್ಲಾ ಕೆರೆ, ಕುಂಟೆ, ಕಾಲುವೆಗಳು ತುಂಬಿ ಅವಾಂತರ ಸೃಷ್ಟಿಯಾಗಿದೆ ಅವರು ಹೇಳಿದರು.
357 ಕೋಟಿ ರೂ. ಮೌಲ್ಯದ ಬೆಳೆಹಾನಿ
ಎಡೆಬಿಡದೆ ಸುರಿದ ಭಾರೀ ಮಳೆಗೆ 30 ಸಾವಿರ ಹೆಕ್ಟೇರ್ ರಾಗಿ ಬೆಳೆಯಲ್ಲಿ ಅರ್ಧದಷ್ಟು ರಾಗಿ ಸಂಪೂರ್ಣ ನಾಶವಾಗಿದೆ. 5,200 ಹೆಕ್ಟೇರ್ ತೋಟಗಾರಿಕೆ ಬೆಳೆಗಳು, ಭತ್ತ, ನೆಲಗಡಲೆ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿರುವುದು ನೋವಿನ ಸಂಗತಿ ಎಂದರು ಅವರು.
596 ಶಾಲಾ ಕೊಠಡಿಗಳಿಗೆ ಹಾನಿ
ಜಿಲ್ಲೆಯಲ್ಲಿ ಎಂದೂ ಕಂಡು ಕೇಳರಿಯದಷ್ಟು ಮಳೆಯಾಗಿದ್ದು, ಭಾರೀ ಮಳೆಗೆ ಜಿಲ್ಲೆಯ 457 ಶಾಲೆಗಳ 596 ತರಗತಿ ಕೊಠಡಿಗಳಿಗೆ ಹಾನಿಯಾಗಿದೆ. ಇವುಗಳ ರಿಪೇರಿಗೆ 6 ಕೋಟಿಗೂ ಹೆಚ್ಚು ಹಣ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ 52 ಅಂಗನವಾಡಿ ಕೇಂದ್ರಗಳಿಗೂ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪಟ್ಟಣ ಪಂಚಾಯತಿ, ತಾಲೂಕು ಪಂಚಾಯತಿ, ಆರೋಗ್ಯ ಇಲಾಖೆ, ಹೀಗೆ ಎಲ್ಲಾ ಅಧಿಕಾರಿಗಳೆಲ್ಲರೂ ಹಗಲಿರುಳು ಮಳೆಯನ್ನು ಲೆಕ್ಕಿಸದೇ ಕೆಲಸ ಮಾಡಿದ್ದಾರೆ. ಇವರ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 40-50 ವರ್ಷಗಳ ನಂತರ ಇಷ್ಟೊಂದು ಭಾರೀ ಮಳೆಯಾಗಿದೆ. ಇಡೀ ರಾಜ್ಯದಲ್ಲಿಯೇ ದಾಖಲೆಯ ಮಳೆಯಾಗಿರುವ ಎರಡನೇ ಜಿಲ್ಲೆ ಚಿಕ್ಕಬಳ್ಳಾಪುರ. ಕೃಷಿ, ತೋಟಗಾರಿಕೆ, ಮನೆಗಳು, ಶಾಲೆಗಳು, ಅಂಗನವಾಡಿ ಸೇರಿದಂತೆ ಮುಂತಾದವಕ್ಕೆ ಹಾನಿಯಾಗಿದೆ. ಇಂದಿನಿಂದ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಪರಿಹಾರಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು.
ಆರ್.ಲತಾ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ
ತಾಲೂಕಿನಲ್ಲಿ ರಾಜ ಕಾಲುವೆಗಳ ಒತ್ತುವರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆ ನೀರು ತೋಟಗಳಿಗೆ ನುಗ್ಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಭತ್ತ, ರಾಗಿ, ಮುಸುಕಿನ ಜೋಳ, ಟೊಮ್ಯಾಟೊ, ಕ್ಯಾಪ್ಸಿಕಂ ಮುಂತಾದ ತರಕಾರಿ ಬೆಳೆಗಳು ಹಾಳಾಗಿದೆ. ಅತಿ ಜರೂರಾಗಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಬೀಡುಗಡೆ ಮಾಡಬೇಕು.
ಶ್ರೀನಿವಾಸ್, ರೈತ