ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಮಳೆಪೀಡಿತ ಪ್ರದೇಶಗಳ ಪರಿಶೀಲನೆ; ಬಿಬಿ ರಸ್ತೆ ರಾಜ ಕಾಲುವೆ ವೀಕ್ಷಣೆ
by M Krishnappa Chikkaballapura
ಚಿಕ್ಕಬಳ್ಳಾಪುರ: ಮಳೆ ಸಮಸ್ಯೆ ಹಾಗೂ ಕಷ್ಟಗಳನ್ನು ಹೇಳಿಕೊಳ್ಳಲು ಬಂದ ಜನರಿಗೆ ಧಮ್ಕಿ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದು, ಸಚಿವರದ್ದು ದುರಂಹಕಾರದ ವರ್ತನೆ ಎಂದು ಕಿಡಿಕಾರಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಉತ್ತಮವಾಗಿ, ಸಹನೆಯಿಂದ ಸ್ಪಂದಿಸಬೇಕು. ಅದರಲ್ಲೂ ಮಳೆ, ನೆರೆಯಂಥ ಪ್ರಕೃತಿ ವಿಕೋಪಗಳು ಎದುರಾದಾಗ ತಕ್ಷಣವೇ ಅತ್ಯಂತ ಜವಾಬ್ದಾರಿಯಿಂದ ಸ್ಪಂದಿಸಿ ನೆರವಿಗೆ ಧಾವಿಸಬೇಕು. ಅದನ್ನು ಬಿಟ್ಟು ಬೇಜವಾಬ್ದಾರಿಯಿಂದ ಮಳೆ ಸಂತ್ರಸ್ತರ ಮೇಲೆ ದೌರ್ಜನ್ಯ ಎಸಗಬಾರದು. ಇದನ್ನೇ ದುರಂಹಕಾರ ಎನ್ನುವುದು ಎಂದು ಅವರು ಸಿದ್ದರಾಮಯ್ಯ ಹೇಳಿದರು.
ಚಿಕ್ಕಬಳ್ಳಾಪುರ ನಗರದ 8 ಮತ್ತು 9ನೇ ವಾರ್ಡ್ ಹಾಗೂ ತಾಲೂಕಿನ ನುಗತಿಹಳ್ಳಿ ಬಳಿ ಮಳೆಯಿಂದ ಆಗಿರುವ ಅನಾಹುತ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಇದೇ ವೇಳೆ ಅವರು ಸಚಿವ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;
ಜನಪ್ರತಿನಿಧಿಗಳು ಅಧಿಕಾರದಲ್ಲಿ ಇರುವುದೇ ಜನರ ಕಷ್ಟ ಕೇಳಲಿಕ್ಕೆ ಹೊರತು ದರ್ಪ ತೋರಿಸಲಿಕ್ಕಲ್ಲ. ಜನರ ಕಷ್ಟ ಕೇಳಿ ಅವರ ಸಮಸ್ಯೆಗಳನ್ನು ತಕ್ಷಣವೇ ನಿವಾರಿಸಬೇಕು. ಒಂದು ವೇಳೆ ಆ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಅಧಿಕಾರದಿಂದ ತೊಲಗಬೇಕು. ಅಂಥವರು ಒಂದು ಕ್ಷಣವೂ ಅಧಿಕಾರದಲ್ಲಿರಲು ಅರ್ಹರಾಗಿರುವುದಿಲ್ಲ. ಮಳೆ ನೀರು ಹರಿದು ಸಾಕಷ್ಟು ಹಾನಿಯಾಗಿದೆ. ನೀರು ನುಗ್ಗಿದ್ದರಿಂದ ಜನರು ಮನೆಗಳನ್ನು ಖಾಲಿ ಮಾಡಿದ್ದಾರೆ. ಅಂಥ ಜನರು ಕಷ್ಟ ಹೇಳಲು ಹೋದರೆ ಜಿಲ್ಲಾ ಉಸ್ತುವಾರಿ ಸಚಿವರು ಧಮ್ಕಿ ಹಾಕಿ ಅಪಮಾನ ಮಾಡುವುದು ಸರಿಯಲ್ಲ. ಇದು ದುರಂಹಕಾರದ ವರ್ತನೆ.
ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಸರಕಾರ ಅಧಿಕಾರವನ್ನೇ ಕೊಟ್ಟಿಲ್ಲ. ಬೆಂಗಳೂರಿನಲ್ಲೇ ಕೂತಿರುತ್ತಾರೆ. ನಾನು ಟೀಕೆ ಮಾಡಿದ ಮೇಲೆ ಮುಖ್ಯಮಂತ್ರಿಗಳು ಕೆಲ ಕಡೆ ಮಳೆ ಹಾನಿ ಪರಿಶೀಲನೆ ನಡೆಸಿದ್ದಾರೆ. ಈ ರೀತಿ ಕಾಟಾಚಾರದ ಪರಿಶೀಲನೆ ನಡೆಸುವುದು ಸರಿಯಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಆದಷ್ಟು ಬೇಗ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು.
ಮಳೆ ಈಗ ಬಂದಿಲ್ಲ. ಮಳೆ ಬಂದು ಸಾಕಷ್ಟು ದಿನಗಳೇ ಕಳೆದಿವೆ. ಇಷ್ಟೊತ್ತಿಗಾಗಲೇ ಸಮೀಕ್ಷೆ ನಡೆಸಿ ರೈತರಿಗೆ ಬೆಳೆ ಪರಿಹಾರ ಕೊಡಬೇಕಿತ್ತು. ಈ ಭಾಗದ ಪ್ರಮುಖ ಬೆಳೆಯಾಗಿರುವ ರಾಗಿ ಶೇ.೬೦ರಷ್ಟು ಹಾಳಾಗಿದೆ. ಹಿಪ್ಪು ನೇರಳೆ, ಹೂವಿನ ಬೆಳೆಗಳು ಹಾಳಾಗಿವೆ. ಹೀಗಾಗಿ ಸರಕಾರ ಎನ್‌ಡಿಆರ್‌ಎಫ್ ನಿಯಮಗಳನ್ನು ಅನುಸರಿಸಿ ಅರೆಕಾಸಿನ ಪರಿಹಾರ ಕೊಡುವುದು ಬೇಡ. ನಮ್ಮ ಸರಕಾರ ನೀಡಿದಂತೆ ಪ್ರತಿ ಹೆಕ್ಟೇರ್‌ಗೆ ೨೫ ಸಾವಿರ ರೂಪಾಯಿ ಪರಿಹಾರ ನೀಡಲು ಈ ತಕ್ಷಣ ಕ್ರಮ ಕೈಗೊಳ್ಳಬೇಕು.
ಬೆಳೆ ಪರಿಹಾರ ನೀಡುವ ಸಂಬಂಧ ಸರಕಾರಕ್ಕೆ ಪತ್ರ ಬರೆಯತ್ತೇನೆ. ಸರಕಾರ ಆ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಸದನದಲ್ಲಿ ಪ್ರಶ್ನಿಸಲಾಗುವುದು. ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಕೂಡ ಮಂಡಿಸಲಾಗುಗುವುದು. ಸರಕಾರ ಇರುವುದು ಜನರ ಕಷ್ಟ ಕೇಳಲೇ ಹೊರತು ದೌರ್ಜನ್ಯ ಮಾಡುವುದಕ್ಕಲ್ಲ.
ದೇನಾ ಬ್ಯಾಂಕ್ ರೈತರಿಗೆ ನಾನಾ ರೀತಿಯ ನೋಟಿಸ್‌ಗಳನ್ನು ನೀಡಿ ಕಿರುಕುಳ ನೀಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಈ ತಕ್ಷಣ ಬ್ಯಾಂಕ್ ಅಧಿಕಾರಿಗಳನ್ನು ಕರೆದು ಜಿಲ್ಲಾಡಳಿತ ಚರ್ಚಿಸಬೇಕು. ರೈತರ ಮೇಲಾಗುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು. ರೈತರ ಮೇಲೆ ಈ ರೀತಿಯ ದೌರ್ಜನ್ಯ ನಡೆಯಬಾರದು.
ಸಚಿವರು ವೀಕ್ಷಿಸಿದ್ದ ರಾಜಕಾಲುವೆ ಬಳಿಗೆ ಭೇಟಿ
ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು, ನಗರದ ಶನಿ ಮಹಾತ್ಮ ಸ್ವಾಮಿ ದೇವಾಲಯ ಮುಂಭಾಗದ ರಾಜ ಕಾಲುವೆ ಪ್ರದೇಶವನ್ನು ಪರಿಶೀಲಿಸಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಇದೇ ಜಾಗಕ್ಕೆ ಮೊದಲು ಸಚಿವ ಡಾ.ಕೆ.ಸುಧಾಕರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಬಳಿಕ ತಾಲೂಕಿನ ನುಗತಿಹಳ್ಳಿ ಸಮೀಪ ಕೆರೆ ನೀರು ಕಾಲುವೆಗಳಲ್ಲಿ ಹರಿದು ತೋಟದ ಜಮೀನುಗಳಲ್ಲಿ ತುಂಬಿರುವುದನ್ನು ಅವರು ಪರಿಶೀಲಿಸಿದರು. ಮಳೆ ಬರುವ ಮೊದಲೇ ಈ ಕಾಲುವೆಗಳನ್ನು ಸರಿಪಡಿಸಿ ತೋಟಗಳಿಗೆ ನೀರು ಹರಿಯದಂತೆ ತಡೆಯಬೇಕಿತ್ತು. ಜಿಲ್ಲಾಡಳಿತ ಈ ತಕ್ಷಣ ಹಾನಿಯಾಗಿರುವ ರೈತರಿಗೆ ಪರಿಹಾರ ಕೊಟ್ಟು ಮುಂದೆ ಹೀಗೆ ಆಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮಳೆ ಹಾನಿ ಪರಿಶೀಲನೆ ವೇಳೆ ಮಾಜಿ ಸಿಎಂ ವೀರಪ್ಪ ಮೊಯಿಲಿ, ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಪುರದಗಡ್ಡೆ ಮುನೇಗೌಡ, ಮಾಜಿ ಶಾಸಕ ನಜೀರ್ ಅಹಮದ್, ಮಮತಾ ಮೂರ್ತಿ, ನಗರಸಭೆ ಸದಸ್ಯ ಅಂಬರೀಶ್, ಮುನೀಂದ್ರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ
ವಿಧಾನ ಪರಿಷತ್ ಚುನಾವಣೆ ಸಂಬಂಧ ಕಾಂಗ್ರೆಸ್ ವಿರುದ್ಧದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗಳಿಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ; ಕುಮಾರಸ್ವಾಮಿ ಹೇಳಿಕೆಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.