ಗುಡಿಬಂಡೆಯ ಹಳ್ಳಿರಸ್ತೆಗಳು ಅಯೋಮಯ
By GS Bharath Gudibande
ಗುಡಿಬಂಡೆ: ತಾಲೂಕಿನ ಬಹುತೇಕ ಹಳ್ಳಿಗಳ ಪರಿಸ್ಥಿತಿ ಅಧೋಗತಿ. ಛೇ!! ಇದು ಯಾವ ರಸ್ತೆ? ಎಲ್ಲೆಂದರಲ್ಲಿ ಕೆಸರು ತುಂಬಿಕೊಂಡು ಗದ್ದೆಗಳಂತಾಗಿವೆ. ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು, ಮಳೆ ನೀರು ನಿಂತು ನಿರ್ಮಾಣಗೊಂಡಿವೆ ಬೃಹತ್ ಹೊಂಡಗಳು.. ಜೀವವನ್ನು ಅಂಗೈಯ್ಯಲ್ಲಿ ಇಟ್ಟುಕೊಂಡು ವಾಹನ ಸವಾರಿ ಮಾಡಬೇಕಾದ ದುಃಸ್ಥಿತಿ.
ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಗಾಂತಮ್ಮನಹಳ್ಳಿ ಗ್ರಾಮ ಸೇರಿದಂತೆ ಆ ಭಾಗದ ಬಹುತೇಕ ಹಳ್ಳಿಗಳ ರಸ್ತೆಗಳ ಈಗಿನ ದುಸ್ಥಿತಿ ಇದು.
ಗ್ರಾಮೀಣ ಪ್ರದೇಶ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಮಳೆ ನೀರಿನಿಂದ ಕೆಸರು ಗದ್ದೆಗಳು ಸೃಷ್ಟಿಯಾಗಿವೆ. ಹೀಗಾಗಿ ಪಾದಚಾರಿಗಳು, ವಾಹನ ಸವಾರರು ಸಂಚರಿಸುವುದು ದುಸ್ತರವಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆಯ ಅಬ್ಬರಕ್ಕೆ ರಸ್ತೆ ಚಿಂದಿಯಾಗಿವೆ. ಹೀಗಾಗಿ ಜನರು ರಸ್ತೆಗಳನ್ನು ಸುಸ್ಥಿತಿಯಲ್ಲಿಡದ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಸಂಚಾರಕ್ಕೆ ತೀವ್ರ ತೊಂದರೆ
ಕರಿಗಾಂತಮ್ಮನಹಳ್ಳಿ ಮುಖ್ಯರಸ್ತೆಯಿಂದ ಗುಡಿಬಂಡೆಗೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹೀಗೆ ಸಂಚಾರ ಮಾಡುವ ಪ್ರಯಾಣಿಕರ ವಾಹನಗಳು ಸೇರಿದಂತೆ ದ್ವಿಚಕ್ರ ಸವಾರರು, ಆಟೋ, ಬಸ್, ಟ್ರ್ಯಾಕ್ಟರ್ ಮುಂತಾದವುಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಕೆಸರು ಗದ್ದೆಯಲ್ಲಿ ಓಟಕ್ಕೆ ಒಳಿದಂತೆ ಪ್ರಯಾಸಪಟ್ಟು ವಾಹನ ಚಾಲನೆ ಮಾಡಬೇಕಿದೆ. ಅಲ್ಲದೆ, ವಾಹನಗಳ ಆಯತಪ್ಪಿ, ಕೆಸರನಲ್ಲಿ ಜಾರಿಬಿದ್ದು ಜನರು ಗಾಯಗೊಳ್ಳುವುದು ಸಾಮಾನ್ಯ ಎನ್ನುವಂತೆ ಆಗಿಬಿಟ್ಟಿದೆ.
ಈಗಾಗಲೇ ಬಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಅನೇಕ ಬೈಕ್ ಸವಾರರು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ. ರಸ್ತೆಯ ತಿರುವು ಇದ್ದು, ಅಪಘಾತಕ್ಕೂ ಕಾರಣವಾಗುತ್ತಿದೆ. ಮಣ್ಣನ್ನು ರಸ್ತೆಗೆ ಹಾಕಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯು ತುರ್ತಾಗಿ ಸ್ಪಂದಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಎಲ್ಲಿದೆ?
ಗ್ರಾಮದ ಎಸ್.ಸಿ ಕಾಲೋನಿ ಬಳಿ ಗುಂಡಿ ನೋಡಿದರೇ ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ ಹೇಗಿದೆ ಎನ್ನುವುದು ಅರ್ಥವಾಗುತ್ತದೆ. ತೆರಿಗೆ ನೀಡುವ ಸಾರ್ವಜನಿಕರಿಗೆ ಕನಿಷ್ಠ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎನ್ನುವ ಜನಪ್ರತಿನಿಧಿಗಳಿಗೆ ಬರ ಬಂದಿದೆ. ರಸ್ತೆ ಉದ್ದಕ್ಕೂ ದೊಡ್ಡ ಗುಂಡಿಗಳೇ ಬಿದ್ದು, ಅವು ಸಾವಿಗೆ ಆಹ್ವಾನಿಸುವ ಯಮ ಗುಂಡಿಗಳಾಗಿವೆ. ಬಹುತೇಕ ಕಡೆಗಳಲ್ಲಿ ರಸ್ತೆ ಮೇಲಿನ ಪದರವು ಕಿತ್ತು ಹೋಗಿದೆ. ಇದರಿಂದ ರಸ್ತೆಯಲ್ಲಿ ಸಂಚಾರ ಮಾಡುವುದಿರಲಿ, ಪಾದಚಾರಕ್ಕೆ ಆಯೋಗ್ಯವಾಗಿವೆ.
ಕೂಡಲೇ ಈ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಸಕಾಲಕ್ಕೆ ಡಾಂಬರೀಕರಣ ಮಾಡಿ ಸಾರ್ವಜನಿಕರ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಣ್ಣ ಪ್ರಮಾಣದ ಮಳೆಗೇ ಈ ಭಾಗದ ರಸ್ತೆಗಳು ಹದಗೆಡುತ್ತಿವೆ. ಹೀಗಿದ್ದರೂ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ರಸ್ತೆಗಳು ಕಿತ್ತುಹೋಗಿವೆ. ಕಳಪೆ ಕಾಮಗಾರಿ ಮತ್ತು ಕಳಪೆ ನಿರ್ವಹಣೆಯಿಂದ ರಸ್ತೆಗಳು ಅಪಾಯದ ಕೂಪಗಳಾಗಿವೆ.
ಶಾಲಾ ಮಕ್ಕಳಿಗೆ ಅಪಾಯ
ಸುಮಾರು ಆರು ಹಳ್ಳಿಗಳಿಂದ ಶಾಲಾ ಮಕ್ಕಳು ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇನ್ನೂ ರಸ್ತೆಯ ಮೇಲೆ ನೀರು ನಿಂತಿದ್ದು, ಸಂಚರಿಸಲು ಕಷ್ಟವಗಿದೆ. ಶಾಲಾ ಮಕ್ಕಳು ಅನ್ಯಮಾರ್ಗ ಇಲ್ಲದ ಕಾರಣ ಈ ರಸ್ತೆಯಲ್ಲೆ ಸಂಚರಿಸಬೇಕಿದೆ. ಇದರಿಂದ ಅವರಿಗೆ ಕಷ್ಟ ಮತ್ತು ಅಪಾಯ ಎದುರಾಗಿದೆ.
ಬೆಳಗ್ಗೆ ಹಾಗೂ ಸಂಜೆ ಶಾಲಾ ಮಕ್ಕಳಿಗೆ ಇದು ತೊಂದರೆ ಹಾಗೂ ಸಮಸ್ಯೆಯಾಗಿ ಪರಿಣಮಿಸಿದೆ. ಈಗಾಗಲೇ ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ವಿಷಯವನ್ನು ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಪೋಷಕರು ಅಳಲು ತೊಡಗಿಕೊಂಡಿದ್ದಾರೆ.
ಯಾರು ಏನಂತಾರೆ?
ಗ್ರಾಮದಿಂದ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಾಕಿರುವ ಮಣ್ಣನ್ನು ಶೀಘ್ರವೇ ತೆರವು ಮಾಡಬೇಕು. ಕಾಟಾಚಾರಕ್ಕೆ ಗುಂಡಿಗಳಿಗೆ ಮಣ್ಣು ಹಾಕಿದ್ದು ಯಾವುದೇ ಪ್ರಯೋಜನವಿಲ್ಲ. ಸುಮಾರು ಮೂರು ತಿಂಗಳ ಹಿಂದೆ ಗುಂಡಿಗಳಿಗೆ ಮಣ್ಣು ಹಾಕಿದ್ದು ಮಳೆ ನೀರು ನಿಂತಲ್ಲೇ ನಿಂತು ರಸ್ತೆ ಕೆಸರು ಗದ್ದೆಯಂತಾಗಿದೆ.
ಶ್ರೀಕಾಂತ್, ವಿದ್ಯಾರ್ಥಿ ಕರಿಗಾನತಮ್ಮನಹಳ್ಳಿ
ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ. ಶಾಲಾ ಮಕ್ಕಳಂತು ದಿನ ನಿತ್ಯ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದು. ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಯಾವೊಬ್ಬ ಅಧಿಕಾರಿಯು ಸಹಾ ನಮ್ಮೂರಿನತ್ತ ಮುಖ ಮಾಡಿಲ್ಲ. ನಮ್ಮೂರಿನ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ, ಶಾಸಕರು ನಮ್ಮ ಗ್ರಾಮದ ಕಡೆ ಇದುವರೆಗೂ ಬಂದಿಲ್ಲ.
ರಾಜೇಶ್ ಕೆ., ಗ್ರಾಮದ ಯುವಕ
ರಸ್ತೆ ಹದಗೆಟ್ಟಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಈ ರಸ್ತೆಯನ್ನು ಶೀಘ್ರ ಸರಿಪಡಿಸಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಅನುವು ಮಾಡಿಕೊಡುತ್ತೆವೆ.
ಪೂಜಪ್ಪ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗುಡಿಬಂಡೆ