ಪ್ರೊ.ಕೆ.ಎಸ್.ನಾರಾಯಣಚಾರ್ಯರು ಇನ್ನಿಲ್ಲ
by Dr.Guruprasad Rao Hawaldar
ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಲೋಕದಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಮತ್ತು ಮಾತನಾಡಬಲ್ಲಂತಹವರು ಸಾಹಿತ್ಯಾಸಕ್ತರಿಂದ “ರಾಮಾಯಣಾಚಾರ್ಯರು” ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದವರು, ಕೇವಲ ಕನ್ನಡಕ್ಕೆ ಸೀಮಿತವಾಗದೇ ಭಾರತೀಯ ಸಂಸ್ಕೃತಿಯ ಬಗ್ಗೆ ತಮ್ಮ ವಿದ್ವತ್ಪೂರ್ಣ ವಿಚಾರಗಳ ಮೂಲಕ ಉಪನ್ಯಾಸವನ್ನು ನೀಡಿದಂತವರು, ಹಿರಿಯ ವಿದ್ವಾಂಸರು, ಲೇಖಕರು, ಧರ್ಮ ಪ್ರಚಾರಕರು ಮತ್ತು ಹೆಮ್ಮೆಯ ಪ್ರವಚನಕಾರರೂ ಆದ ಪ್ರೊ.ಕೆ.ಎಸ್.ನಾರಾಯಣಚಾರ್ಯ ಅವರು ತಮ್ಮ 88ನೇ ವಯಸ್ಸಿನಲ್ಲಿ ಹರಿಪಾದ ಸೇರಿದರು.
ಪ್ರೊ. ಡಾ. ಕೆ.ಎಸ್ ನಾರಾಯಣಾಚಾರ್ಯ (88) ಅವರು ನ.26 ರಂದು ಮಧ್ಯರಾತ್ರಿ ಮೈಸೂರಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.
ಬೆಂಗಳೂರು ಜಿಲ್ಲೆಯ ಕಾನಕನಹಳ್ಳಿ ಅಂದರೆ ಈಗಿನ ಕನಕಪುರದ ಶ್ರೀ ಕೆ.ಎನ್.ಶ್ರೀನಿವಾಸ ದೇಶಿಕಾಚಾರ್ ಮತ್ತು ರಂಗನಾಯಕಮ್ಮ ದಂಪತಿಗಳಿಗೆ 1933ರ ಅಕ್ಟೋಬರ್ 30ರಂದು ಜನಿಸಿದರು. ಅವರದ್ದು ವೈಷ್ಣವ ಸಂಪ್ರದಾಯದ ವೈದಿಕ ವಿದ್ವಾಂಸರ ಕುಟುಂಬ. ಮನೆಯ ಮಾತೃಭಾಷೆ ತಮಿಳಾದರೂ ಸ್ಥಳೀಯ ಭಾಷೆ ಕನ್ನಡ ಮತ್ತು ಸಂಸ್ಕೃತವನ್ನು ಬಾಲ್ಯದಿಂದಲೇ ತಮ್ಮ ಮನೆಯಲ್ಲಿಯೇ ಕರಗತಮಾಡಿಕೊಂಡಿದ್ದಲ್ಲದೇ, ತಮ್ಮ ಸ್ವಹಿತಾಸಕ್ತಿಯಿಂದ ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯವನ್ನು ಸಂಪಾದಿಸಿಕೊಂಡರು.
ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕನಕಪುರದಲ್ಲಿಯೇ ಮುಗಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತಮ್ಮ ಬಿ.ಎಸ್ಸಿ. ಪದವಿಯ ನಂತರ ಬಿ.ಎ. ಆನರ್ಸ್ ಕೂಡಾ ಪಡೆದದ್ದಲ್ಲದೇ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವದ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದು ಅಧಿಕಾರಯುತವಾಗಿ ಡಾ. ಕೆ.ಎಸ್.ನಾರಾಯಣಚಾರ್ಯರೆನಿಸಿದರು.
ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ಆದೇ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಆಚಾರ್ಯರು, ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ಬಹುತೇಕ ಸಾಹಿತಿಗಳ ಜತೆ ನಿಕಟ ಸಂಬಂಧ ಹೊಂದಿದ್ದ ಆಚಾರ್ಯರು, ವರಕವಿ ದ.ರಾ.ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಅದುವರೆವಿಗೂ ಪ್ರವಚನದಲ್ಲೇ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಲ್ಲದೇ ಅಲ್ಲಿಂದ ಮುಂದೆ ಲೇಖನಗಳನ್ನು ಬರೆಯುತ್ತಾ ಸಾಹಿತಿಗಳೆನಿಸಿದರು.
ಬೇಂದ್ರೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಕೃತಿ ರಚಿಸಿದರಲ್ಲದೆ, ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಗಳಸಿ ಸುಮಾರು 180ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿ ಸುಮಾರು 200ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ . ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಪಡೆದಿರುವ ಆಚಾರ್‍ಯರು 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.
ವೇದ ಸಂಸ್ಕೃತಿಯ ಪರಿಚಯ, ರಾಮಾಯಣಸಹಶ್ರೀ, ಗೀತಾರತ್ನನಿಧಿ, ವೇದ ಸಂಸ್ಕೃತಿಯ ಪರಿಚಯ, ರಾಮಾಯಣ ಸಹಶ್ರೀ, ಗೀತಾರತ್ನ ನಿಧಿ, ರಾಮಾಯಣ ಪಾತ್ರ ಪ್ರಪಂಚ,ಅಗಸ್ತ್ಯ, ಶ್ರೀಮಾತೇ ಕುನ್ತಿ ಕಂದೆರೆದಾಗ, ಚಾಣಕ್ಯ ನೀತಿ ಸೂತ್ರಗಳು ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಆಚಾರ್ಯ ಚಾಣಕ್ಯ, ತಿರುಪ್ಪಾವೈ, ತಿರುಮಲೈ, ಸ್ತೋತ್ರರತ್ನಂ, ವಿಶಿಷ್ಟಾದ್ವೈತ ಮೂಲ ಪರಿಕಲ್ಪನೆಗಳು, ಮಹಾತ್ಮಗಾಂಧಿಯನ್ನು ಕೊಂದಿದ್ದು ಯಾರು? ಸುಭಾಷರ ಕಣ್ಮರೆ, ವಾಲ್ಮೀಕಿ ಯಾರು?, ಮತಾಂತರ, ಶ್ರೀ ರಾಮಜನ್ಮಭೂಮಿ ತೀರ್ಪು, ಮಹಾಮಾತೆ ಕುಂತಿ ಕಣ್ತೆರೆದಾಗ, ದೇವಕಿಯ ಚಿಂತನೆಗಳು, ಮಹಾ ಪ್ರಸ್ಥಾನ, ಕೃಷ್ಣಾವತಾರದ ಕೊನೆಯ ಗಳಿಗೆಗಳು-ಈ ಕೃತಿಯು ಅಪಾರ ಸಂಖ್ಯೆಯಲ್ಲಿ ಓದುಗರನ್ನು ಸೆಳೆದಿದ್ದು, ಸುಮಾರು 20000ಕ್ಕೂ ಅಧಿಕ ಕೃತಿಗಳು ಮಾರಾಟವಾಗಿವೆ.
‘ಶ್ರೀ ರಾಮಾವತಾರ ಸಂಪೂರ್ಣವಾದಾಗ’ ಕೃತಿಯು ಸಹ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಶ್ರೀರಾಮಾಯಾಣದ ಮಹಾಪ್ರಸಂಗಗಳು, ಶ್ರೀಮದ್ ರಾಮಾಯಣದ ಮಹಾಪ್ರಸಂಗಗಳು, ವೇದ ಸಂಸ್ಕೃತಿಯನ್ನು 10 ಕೃತಿಗಳಲ್ಲಿ ಪರಿಚಯಿಸಿದ್ದಾರೆ. ರಾಮಾಯಣ, ರಾಮಕಥಾ ಸಾರ, ರಾಮಾಯಣ ಪಾತ್ರ ಪರಿಚಯ, ರಾಮಾಯಣ ಸಾಹಶ್ರೀ, ಮಹಾಭಾರತ ಪಾತ್ರ ಪರಿಚಯ, ವನದಲ್ಲಿ ಪಾಂಡವರು, ರಾಜಸೂಯದ ರಾಜಕೀಯ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ಆ ಹದಿನೆಂಟು ದಿನಗಳು (2 ಬೃಹತ್ ಸಂಪುಟಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡಿವೆ) ಗುರುದೇವ ರಾನಡೆ ಅವರ ಉಪನ್ಯಾಸ ಸರಣಿ ಮಾಲಿಕೆಯ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ, ವನಪರ್ವ, ವಿರಾಟಪರ್ವ ಸೇರಿದಂತೆ ಮಹಾಭಾರತ, ರಾಮಾಯಣ, ವೇದ ಸಂಸ್ಕೃತಿ, ಸನಾತನ ಪರಂಪರೆಯ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ.
ಸಮಾಕಾಲೀನ ವಿಷಯಗಳಿಗೂ ಅವರು ಸ್ಪಂದಿಸಿ ಬರೆದ ಹಲವಾರು ಲೇಖನಗಳು ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇನ್ನು ಹಲವಾರು ಕೃತಿಗಳನ್ನು ರಚಿಸಿರುವುದಲ್ಲದೇ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿನ ಅಂಕಣ, ಬರಹಗಳು, ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಯಗಳಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಆಧಿಕಾರಯುತವಾಗಿ ಆರ್ಥಪೂರ್ಣ ವಿಷಯಗಳನ್ನು ಪ್ರತಿಪಾದಿಸುವ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದರು ಡಾ. ಕೆ.ಎಸ್. ನಾರಾಯಣಾಚಾರ್ಯರು ಆಚಾರ್ಯರ ಪಾಂಡಿತ್ಯಕ್ಕೆ ಹಲವಾರು ಪ್ರಶಸ್ತಿಗಳು ದೊರಕಿವೆ ಅದರಲ್ಲಿ ರಾಮಾಯಣ, ಭಾಗವತ, ಮಹಾಭಾರತ, ವೇದಗಳು, ಭಗವದ್ಗೀತೆ, ಹರಿದಾಸ ಸಾಹಿತ್ಯ ಪ್ರಸಾರಕ್ಕಾಗಿ ಪ್ರೊ.,ಕೆ.ಎಸ್. ನಾರಾಯಣಾಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಜರುಗಿದ ( 2016), ವಿಶ್ವ ರಾಮಾಯಣ ಸಮ್ಮೇಳನದಲ್ಲಿ ಇವರಿಗೆ ‘ವಾಲ್ಮೀಕಿ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಬಿರುದು ಸಂದಿವೆ. ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ರಾಮಾಯಣವನ್ನು ಆಧಿಕೃತವಾಗಿ ಉಪನ್ಯಾಸ ನೀಡುವ ವಿದ್ವತ್ ಗಾಗಿ ಸಾಹಿತ್ಯಾಸಕ್ತರು ಅವರಿಗೆ ‘ರಾಮಾಯಣಾಚಾರ್ಯರು’ ಎಂದೇ ಕರೆಯುತ್ತಿದ್ದರು. ಆಚಾರ್ಯರು 88 ವರ್ಷಗಳ ಜೀವನ ಯಾತ್ರೆಯನ್ನು ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ.
ಹೋಗಿ ಬನ್ನಿ ಆಚಾರ್ಯರೇ, ನಿಮಗೆ ನಮ್ಮೆಲ್ಲರ ನಮಸ್ಕಾರಳು.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.