ಮಾಜಿ ಸ್ಪೀಕರ್ ರಮೇಶ್ ಕುಮಾರ್ ‘ಮಹಾನ್ ನಾಯಕ’ ಎಂದು ಕಾಲೆಳೆದ ದಳಪತಿ
- ಜೆಡಿಎಸ್ ಬೆಂಬಲ ಕೇಳಿದ ಯಡಿಯೂರಪ್ಪ
- ಒಂದೆರಡು ದಿನದಲ್ಲಿ ನಿರ್ಧಾರ ಎಂದ ಹೆಚ್.ಡಿ.ಕುಮಾರಸ್ವಾಮಿ
ಕೋಲಾರ: ಜೆಡಿಎಸ್ ಅಭ್ಯರ್ಥಿಗಳನ್ನು ಹಾಕದ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲ ನೀಡಬೇಕೆ ಅಥವಾ ತಟಸ್ಥವಾಗಿ ಉಳಿಯಬೇಕೆ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಕೋಲಾರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; “ಬಿಜೆಪಿಯ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜೆಡಿಎಸ್ ಜತೆ ಹೊಂದಾಣಿಕೆ ಪ್ರಸ್ತಾವನೆ ಮಾಡಿದ್ದೇನೆ. ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಕೂಡ ಒಂದೆಡರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದರು.
ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದೆ. ಬಿಜೆಪಿಗೆ ಬೆಂಬಲ ನೀಡುವುದಾಗಿ ಎಲ್ಲೂ ಹೇಳಿಲ್ಲ. ಆದರೆ, ಕೆಲವರು ಕುಮಾರಸ್ವಾಮಿ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆಂದು ತಪ್ಪಾಗಿ ಗ್ರಹಿಕೆ ಮಾಡಿದ್ದಾರೆಂದು ಅವರು ಸ್ಪಷ್ಟಪಡಿಸಿದರಲ್ಲದೆ, ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿಕ್ಕೆ ಯಾವ ತೀರ್ಮಾನ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ನಮ್ಮ ಗುರಿ 2023ರ ಚುನಾವಣೆ. ನಾವು ಆ ಕಡೆ ಗಮನ ಹರಿಸಿದ್ದೇವೆ. ಹೀಗಾಗಿ ಈ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇರುವ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಬಿಜೆಪಿ ಜತೆ ಒಳಒಪ್ಪಂದ ಎನ್ನುವ ಆರೋಪ ಬಾಲಿಶ. ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಈವರೆಗೆ ಆ ಪಕ್ಷದ ಇತರರು ಯಾರು ಕೂಡ ನಮ್ಮ ಬೆಂಬಲ ಕೇಳಿಲ್ಲ. ಈ ಅಂಶಗಳನ್ನು ಪರಿಗಣಿಸಿ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ರಮೇಶ್ ಕುಮಾರ್ ಮೇಲೆ ವಾಗ್ದಾಳಿ
ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿ ಇಲ್ಲದಿದ್ದರೂ ಆ ಪಕ್ಷದ ಅಭ್ಯರ್ಥಿ ಹಾಕಲು ಜಿಲ್ಲೆಯ ಕಾಂಗ್ರೆಸ್ ನಾಯರೊಬ್ಬರು ಕಾರಣ ಎಂದು ಕುಮಾರಸ್ವಾಮಿ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ರಮೇಶ್ ಕುಮಾರ್ ಅವರ ಹೆಸರನ್ನು ಹೇಳದೇ ಟೀಕಾ ಪ್ರಹಾರ ನಡೆಸಿದರಲ್ಲದೆ; ಪಕ್ಷದಲ್ಲೇ ಇದ್ದುಕೊಂಡು ಪಕ್ಷವನ್ನೇ ಮುಗಿಸಲು ಹೊರಟ ಅವರ ಕಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ರಮೇಶ್ ಕುಮಾರ್ ಅವರನ್ನು ಮಹಾನ್ ನಾಯಕ, ಮಾತಿನ ಮೋಡಿಗಾರ, ಕುತ್ಸಿತ ರಾಜಕಾರಣಿ ಎಂದೆಲ್ಲ ಚಾಟಿ ಬೀಸಿದ ಅವರು ಜಿಲ್ಲೆಯ ಪ್ರಮುಖ ರಾಜಕೀಯ ಷಡ್ಯಂತ್ರಗಳಿಗೆ ಅವರೇ ಕಾರಣ ಎಂದು ದೂರಿದರು.
ಕಳೆದ ಬಾರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 200 ಮತಗಳು ಸಿಕ್ಕಿದ್ದವು. ಆದರೂ ಈ ಬಾರಿ ಆ ಪಕ್ಷವು ತನಗಿಲ್ಲಿ ಮತಗಳಿಲ್ಲ ಎಂದು ಗೊತ್ತಿದ್ದರೂ ಅಭ್ಯರ್ಥಿಯನ್ನು ಹಾಕಿದೆ. ಅದರದಲ್ಲಿ ಈ ಜಿಲ್ಲೆಯ ರಾಜಕಾರಣದಲ್ಲಿ ತಾವೊಬ್ಬರೇ ಪ್ರಾಮಾಣಿಕರು, ಪರಿಶುದ್ಧರು ಎಂದು ಹೇಳಿಕೊಳ್ಳುವ ಮಹಾ ನಾಯಕರೊಬ್ಬರ ಕೈವಾಡವೂ ಇದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸತತ ಏಳು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಕೆ.ಎಚ್.ಮುನಿಯಪ್ಪ ಅವರು ಸೋಲಿಗೆ ಕಾರಣಕರ್ತರು ಯಾರು? ಆಗ ಬಿಜೆಪಿ ಅಭ್ಯರ್ಥಿ ಗೆಲ್ಲಲಿಕ್ಕೆ ಕಾರಣರು ಯಾರಿದ್ದಾರೆ? ಅವರೇ ಪರಿಷತ್ ಚುನಾವಣೆಯಲ್ಲೂ ತಮ್ಮ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಸ್ವಪಕ್ಷವನ್ನೇ ಮುಗಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಅವರು ತಮ್ಮ ಸ್ವಾರ್ಥಕ್ಕಾಗಿ ಯಾರನ್ನು ಯಾವ ಮಟ್ಟಕ್ಕಾದರೂ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೆ ಎಂಬುದು ಕಳೆದ ಹತ್ತು ವರ್ಷದಲ್ಲಿ ಈ ಜಿಲ್ಲೆಯ ರಾಜಕಾರಣದಲ್ಲಿ ಸಾಬೀತಾಗಿದೆ. ಆಗ ಮುನಿಯಪ್ಪ ಅವರ ಸೋಲಿಗೆ ಯಾವ ವ್ಯಕ್ತಿ ಕಾರಣರಾಗಿದ್ದರೋ ಅದೇ ವ್ಯಕ್ತಿ ಈಗ ಇಲ್ಲಿ ಬಿಜೆಪಿಗೆ ಶಕ್ತಿ ಇಲ್ಲದಿದ್ದರೂ ಆ ಪಕ್ಷದ ಅಭ್ಯರ್ಥಿ ಹಾಕಲಿಕ್ಕೆ ಕಾರಣರಾಗಿದ್ದಾರೆ ಎಂಬ ಅಂಶವೂ ನನಗೆ ಗೊತ್ತಿದೆ ಎಂದರು ಅವರು.
ಜೆಡಿಎಸ್ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿದ ಗೋವಿಂದೇಗೌಡರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗುತ್ತಾರೆ ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಆದರೆ, ಮಹಾ ನಾಯಕರ ಒಳರಾಜಕಾರಣದಿಂದ ಅಭ್ಯರ್ಥಿಗಳ ಬದಲಾವಣೆ ಆಗಿದೆ. ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದರೋ ಅವರೇ ಮತ್ತೆ ಅದೇ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿ ʼಹರಕೆಯ ಕುರಿʼಯನ್ನಾಗಿ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ʼನಲ್ಲಿ ಯಾರೆಲ್ಲ ಗೋವಿಂದೇಗೌಡರಿಂದ ಲಾಭ ಪಡೆದುಕೊಂಡರೋ ಅವರೆಲ್ಲ ಕೈಕೊಟ್ಟು ಈಗ ಬಿಜೆಪಿ ಜತೆ ಶಾಮೀಲಾಗಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತೆ ಒಬ್ಬರಿಂದ ವೆಂಕಟ ಶಿವಾರೆಡ್ಡಿ ಅವರನ್ನು ಸೋಲಿಸಲು ಅನುಕೂಲ ಪಡೆದುಕೊಂಡರು. ಅಲ್ಲದೆ; ಅದೇ ರೀತಿ ಈಗ ತಮ್ಮ ಕುತ್ಸಿತ ರಾಜಕಾರಣದಿಂದ ಗೋವಿಂದೇಗೌಡರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿಯನ್ನೂ ಬೀದಿಗೆ ತಂದು ನಿಲ್ಲಿಸಿದ್ದಾರೆ. ಅವರನ್ನು ಇನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕೋಲಾರ ರಾಜಕಾರಣದಲ್ಲಿ ಎಲ್ಲರನ್ನೂ ಮುಗಿಸುತ್ತಿರುವ ಆ ಮಹಾನ್ ನಾಯಕರು ಇನ್ನೂ ಯಾರು ಯಾರನ್ನು ಮುಗಿಸಲು ಸ್ಕೆಚ್ ಹಾಕಿದ್ದಾರೋ ಗೊತ್ತಿಲ್ಲ. ಅವರ ಹಾಗೆ ಮಾತನಾಡಲು ನನಗಾಗಲಿ, ವೆಂಕಟ ಶಿವಾರೆಡ್ಡಿಗಾಗಲಿ ಬರುವುದಿಲ್ಲ. ಅವರು ತಮ್ಮ ಸ್ವಾರ್ಥಕ್ಕಾಗಿ ಯಾರನ್ನು ಬೇಕಾದರೂ ಮೇಲೆತ್ತುತಾರೆ, ಯಾರನ್ನು ಬೇಕಾದರೂ ಕೆಳಕ್ಕೆ ತಳ್ಳುತಾರೆ ಎಂದು ನಾಯಕರಿಗೆ ಮಾಜಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ಟರ್ಸರಿ ಪ್ಲಾಂಟ್ ಹಾಕಲು ಹೇಳಿದ್ದೆ
ಒಂದೆರಡು ಬಾರಿ ಮಹಾ ನಾಯಕರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ನೀಡಲು ವಿರೋಧ ವ್ಯಕ್ತಪಡಿಸಿದ್ದೇನೆ ಎಂದು ಅವರು ಅಪಪ್ರಚಾರ ಮಾಡಿದ್ದಾರೆ. ಎರಡೂ ಜಿಲ್ಲೆಗಳಿಗೆ ನೀರು ಕೊಡುವ ವಿಚಾರದಲ್ಲಿ ನನ್ನದಷ್ಟೇ ಅಲ್ಲ, ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಅನೇಕ ಬಾರಿ ಹೇಳಿದ್ದೇನೆ. ಎರಡು ವರ್ಷದಲ್ಲಿ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಹೇಳಿದ್ದರು. ಈಗ ಎತ್ತಿನಹೊಳೆ ಯೋಜನೆ ಶುರುವಾಗಿ ಎಷ್ಟು ವರ್ಷ ಆಯಿತು? ಆಮೇಲೆ ಬೆಂಗಳೂರು ಕೊಳಚೆ ನೀರನ್ನು ಕೊಡಿ ಎಂದರು. ಆ ನೀರು ಕೊಡಲಿಕ್ಕೂ ನಾನು ವಿರೋಧ ಮಾಡಿಲ್ಲ. ಆದರೆ, ಖರ್ಚು ಎಷ್ಟೇ ಆಗಲಿ, ಟರ್ಸರಿ ಘಟಕ ಹಾಕಿ ಆ ನೀರನ್ನು ಪೂರ್ಣ ಶುದ್ಧ ಮಾಡಿ ಕೊಡಿ ಎಂದು ಹೇಳಿದ್ದೆ. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಅದನ್ನೇ ಹೇಳಿದ್ದೇನೆ. ಒಂದು ಕಾಲದಲ್ಲಿ ಮಾರುಕಟ್ಟೆಗೆ ಕೋಲಾರದ ತರಕಾರಿ ತೆಗೆದುಕೊಂಡು ಹೋದರೆ ಮುಗಿಬಿದ್ದು ಕೊಳ್ಳುತ್ತಿದ್ದರು. ಈಗ ಪಕ್ಕಕ್ಕಿಡಿ ಎನ್ನುತ್ತಾರೆ. ಕಾರಣ ಬೆಂಗಳೂರು ಕೊಳಚೆ ನೀರಿನಿಂದ ಬೆಳೆಲಾಗುತ್ತಿರುವ ಬೆಳೆಗಳು. ಆ ಕೊಳಚೆ ನೀರನ್ನು ಟರ್ಸರಿ ಘಟಕದಲ್ಲಿ ಪೂರ್ಣವಾಗಿ ಶುದ್ಧೀಕರಿಸಿ ಕೊಟ್ಟಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಇನ್ನು ಕೆರೆಗಳನ್ನು ಸಂಪೂರ್ಣವಾಗಿ ಹಾಳುಗೆಡವಲಾಗಿದೆ. ಈ ವರ್ಷ ಅತ್ಯುತ್ತಮ ಮಳೆಯಾಗಿದೆ. ಕೆರೆಗಳು, ಕಾಲುವೆಗಳನ್ನು ಸರಿ ಮಾಡಿಟ್ಟಿಕೊಂಡಿದ್ದಿದ್ದರೆ ಇನ್ನೆರಡು ವರ್ಷ ಎರಡೂ ಜಿಲ್ಲೆಗಳಲ್ಲಿ ನೀರಿಗೆ ಸಮಸ್ಯೆಯೇ ಆಗುತ್ತಿರಲಿಲ್ಲ. ಈಗ ಎಲ್ಲ ಕಡೆ ಮಳೆಯ ಪರಿಶುದ್ಧ ನೀರು ಕೊಳಚೆ ಎಲ್ಲ ಸೇರಿಬಿಟ್ಟಿದೆ. ಕೊಳವೆ ಬಾವಿಗಳಿಗೆ ವಿಷದ ನೀರು ಮರುಪೂರಣ ಆಗುತ್ತಿದೆ. ಇನ್ನು ನಾಲ್ಕೈದು ವರ್ಷಕ್ಕೆ ಅದರ ಪರಿಣಾಮ ಗೊತ್ತಾಗುತ್ತದೆ. ಇದಕ್ಕೆ ಯಾರು ಕಾರಣ? ಇಂಥ ವಿಷನೀರು ಜಿಲ್ಲೆಗಳಿಗೆ ಹರಿದು ಬರಲು ಕಾರಣರು ಯಾರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಎತ್ತಿನಹೊಳೆಯಲ್ಲಿ ಹಣ ಲೂಟಿ
ಕೋಲಾರ-ಚಿಕ್ಕಬಳ್ಳಾಪುರಕ್ಕೆ ತಲಾ ಐದು ಟಿಎಂಸಿ ನೀರು ಕೊಡುತ್ತೇವೆ ಎಂದು ಹೇಳಿದ್ದ ಎತ್ತಿನಹೊಳೆ ಯೋಜನೆ ಎಲ್ಲಿದೆಯೋ ಈಗಲೂ ಅಲ್ಲಿಯೇ ಇದೆ. ಈವರೆಗೆ ಡಿಪಿಆರ್ ಆಗದೆ ಕೇವಲ ಲೇನ್ ಎಸ್ಟಿಮೇಟ್ ಆಧಾರದಲ್ಲಿ ಕಾಮಗಾರಿ ಮಾಡಲಾಗುತ್ತಿರುವ ಅವೆಜ್ಞಾನಿಕ ಯೋಜನೆಯಾಗಿದೆ. ಯಾವುದೇ ಬೃಹತ್ ಯೋಜನೆ ಮಾಡಬೇಕಿದ್ದರೆ ಮೊದಲು ಸಮಗ್ರ ಯೋಜನಾ ವರದಿಯನ್ನು ತಯಾರಿಸಬೇಕು. ಅದನ್ನು ಮಾಡಿಯೇ ಇಲ್ಲ. ದೇವರಾಯನ ದುರ್ಗದ ಬಳಿ ಹತ್ತು ಟಿಎಂಸಿ ನೀರು ಸಂಗ್ರಹ ಮಾಡುವ ಪ್ರಸ್ತಾವನೆ ಹೋಯಿತು. ಇದಾದ ಮೇಲೆ ಬೈರಗೊಂಡ್ಲು ಬಳಿ ಎರಡು ಟಿಎಂಸಿ ಸಂಗ್ರಹಗಾರ ಎಂದರು. ಯಾವುದನ್ನೂ ಸರಿಯಾಗಿ ಮಾಡುತ್ತಿಲ್ಲ. ಹತ್ತು ಟಿಎಂಸಿ ನೀರು ಎಲ್ಲಿಂದ ತರುತ್ತಾರೆ? . 2010ರಲ್ಲಿ ಯೋಜನಾ ಗಾತ್ರ 8,000 ಕೋಟಿ ರೂ., 2016ರಲ್ಲಿ 16,000 ಕೋಟಿ ರೂ. ಆಯಿತು, 2021ರಲ್ಲಿ 24,000 ಕೋಟಿ ರೂ.ಗಳಿಗೆ ಹೆಚ್ಚಿಸಿಕೊಳ್ಳಲು ಸರಕಾರ ಮುಂದಾಗಿದೆ. ಬಹುಶಃ ಇನ್ನೆರಡು ಮೂರು ವರ್ಷಕ್ಕೆ ೫೦,೦೦೦ ಕೋಟಿ ರೂ.ಗಳಿಗೆ ಏರಿಕೆ ಮಾಡಬಹುದು. ಇದು ಕೋಲಾರದ ಭಗೀರಥರ ಸಾಧನೆ. ಹೀಗಾಗಿ ಎತ್ತಿನಹೊಳೆ ಹಣ ಮಾಡುವ ಯೋಜನೆಯಾಗಿದೆಯೇ ವಿನಾ ನೀರು ಕೊಡುವ ಯೋಜನೆಯಲ್ಲ. ಮಹಾನಾಯಕರು ಎಲ್ಲ ಪಕ್ಷಗಳ ಮೇಲೆ ಮೋಡಿ ಮಾಡಿ, ಯಾರ ಯಾರನ್ನು ಎಲ್ಲೆಲ್ಲಿ ದಾರಿ ತಪ್ಪಿಸಿಕೊಂಡು ಬಂದಿದ್ದಾರೆ ಅವರು ದೂರಿದರು.
ಅತಿವೃಷ್ಟಿಯಿಂದ ಭಾರೀ ಹಾನಿ
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಬೆಳೆ ನಷ್ಟವಾಗಿರುವ ರೈತರು ಪುನಾ ತಮ್ಮ ಬದುಕು ಕಟ್ಟಿಕೊಳ್ಳಬೇಕಾದರೆ ಎರಡು-ಮೂರು ವರ್ಷವಾದರೂ ಬೇಕಾಗಬಹುದು. ದ್ರಾಕ್ಷಿ, ಟೊಮೆಟೊ, ರಾಗಿ ಸೇರಿದಂತೆ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿವೆ. ಒಬ್ಬರು 5-6 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ನಾಶವಾಗಿದೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ ಎನ್ನುತ್ತಾರೆ. ಈ ಲೆಕ್ಕಕ್ಕೆ ತಾಳಮೇಳವಿಲ್ಲ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಪರಿಸ್ಥಿತಿ ಇದೆ. ಸಿಎಂ ಒಂದು ದಿನ ಕೋಲಾರಕ್ಕೆ ಬಂದಿದ್ದಾರೆ. ಎಸ್ ಡಿಆರ್ ಎಫ್ ಅಥವಾ ಎನ್ಡಿ ಆರ್ ಎಫ್ ಪರಿಹಾರದಿಂದ ರೈತರಿಗೆ ನ್ಯಾಯ ಸಿಗದು. ಈ ಮಾರ್ಗಸೂಚಿಯನ್ನು ಬದಿಗಿಟ್ಟು ಸರಕಾರ ಪರಿಹಾರ ಕೊಡಬೇಕು ಎಂದು ಮಾಜಿ ಸಿಎಂ ಒತ್ತಾಯ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಶಾಸಕರಾದ ವೆಂಕಟ ಶಿವಾರೆಡ್ಡಿ, ಕೆ.ಪಿ.ಬಚ್ಚೇಗೌಡ, ಪಕ್ಷದ ವಿಧಾಪರಿಷತ್ ಚುನಾವಣೆ ಅಭ್ಯರ್ಥಿ ವಕ್ಕಲೇರಿ ರಾಮು ಮುಂತಾದವರಿದ್ದರು.