ಗುಡಿಬಂಡೆ ಆಸ್ಪತ್ರೆಯಲ್ಲಿ ಮುಂದುವರಿದ ನಿರ್ಲಕ್ಷ್ಯ; ಉಳಿದ ಆಂಬ್ಯುಲೆನ್ಸ್‌ಗಳಿಗೆ ಬೇಕಿದೆ ಕಾಯಕಲ್ಪ
By GS Bharath Gudibande
ಗುಡಿಬಂಡೆ: ಸುಮಾರು 45 ದಿನಗಳಿಂದ ಕೆಟ್ಟುನಿಂತಿದ್ದ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ 108 ಆಂಬ್ಯುಲೆನ್ಸ್ ಕೊನೆಗೂ ಕಣ್ಣು ಬಿಟ್ಟಿದೆ.
ರೋಗಿಗಳ ಉಪಯೋಗಕ್ಕೆ ಬಾರದೆ ಮೂಲೆ ಸೇರಿದ್ದ ಈ ಆಂಬ್ಯುಲೆನ್ಸ್ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಕ್ಷೇತ್ರದ ಶಾಸಕರ ಗಮನ ಸೆಳೆದರೂ ಉಪಯೋಗ ಆಗಿರಲಿಲ್ಲ. ಕೊನೆಗೆ ಆರೋಗ್ಯ ಸಮಿತಿ ಸದಸ್ಯರ ಕಾಳಜಿಯಿಂದ ಅದಕ್ಕೆ ಮರುಜೀವ ಬಂದಿದೆ. ಹಾಳಾಗಿದ್ದ ಅದರ ಎರಡೂ ಹೆಡ್ ಲೈಟುಗಳನ್ನು ಬದಲಿಸಲಾಗಿದೆ.
ಗುಡಿಬಂಡೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 4 ಆಂಬ್ಯುಲೆನ್ಸ್ʼಗಳಿವೆ. ಈ ಪೈಕಿ ೧೦೮ ಆಂಬ್ಯುಲೆನ್ಸ್ ಕೆಟ್ಟು 45 ದಿನಗಳೇ ಕಳೆದಿದೆ. ನಗುಮಗು ಆಂಬ್ಯುಲೆನ್ಸ್ ರಿಪೇರಿಗೆ ಹೊಗಿ ಮತ್ತೆ ಬಂದೇ ಇಲ್ಲ. ಇನ್ನು ಶಾಸಕರು ಕೊಡುಗೆಯಾಗಿ ನೀಡಿದ್ದ ಆಂಬ್ಯುಲೆನ್ಸ್ ಗೆ ಹೆಡ್ ಲೈಟ್ ಹೋಗಿದ್ದರಿಂದ ಅದನ್ನು ಮೂಲೆಗೆ ತಳ್ಳಿದ್ದರು. ಹೀಗೆ ಎಲ್ಲ ಆಂಬ್ಯುಲೆನ್ಸ್ʼಗಳು ಒಂದಲ್ಲ ಒಂದು ಕಾರಣಕ್ಕೆ ಕೆಟ್ಟು ಮೂಲೆ ಸೇರಿದ್ದಾಗ ಲೈಟುಗಳಿಲ್ಲದ ಆಂಬ್ಯುಲೆನ್ಸ್ ಅನ್ನು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕೆ.ಎನ್. ನವೀನ್ ಕುಮಾರ್ ರಿಪೇರಿ ಮಾಡಿಸಿ ಅದಕ್ಕೆ ಹೆಡ್ ಲೈಟ್ ಗಳನ್ನು ಹಾಕಿಸಿದ್ದಾರೆ.
ಇದರೊಂದಿಗೆ ಆಸ್ಪತ್ರೆಯ ಒಂದು ಆಂಬ್ಯುಲೆನ್ಸ್ ಈಗ ಸೇವೆಯಲ್ಲಿದ್ದು, ಅದಕ್ಕೆ ಕಾರಣರಾದ ನವೀನ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಧಿಕಾರಿಗಳು ಹಾಗೂ ಚಾಲಕರು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು. ಒಬ್ಬರು ಮತ್ತೊಬ್ಬರ ಮೇಲೆ ನೆಪ ಹೇಳುವುದು ಬಿಟ್ಟು ಸಮಸ್ಯೆಗಳು ಬಾರದಂತೆ ನೋಡಿಕೊಂಡರೆ ಜನರಿಗೆ ಅನುಕೂಲವಾಗುತ್ತದೆ.
ಕೆ.ಎನ್. ನವೀನ್ ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಗುಡಿಬಂಡೆ
ಹೆರಿಗೆಗೆ ಬರುವ ತಾಯಿಗೆ ಆರೈಕೆ, ಚಿಕಿತ್ಸೆ ಬಹಳ ಮುಖ್ಯ. ಸಕಾಲಕ್ಕೆ ಆಂಬ್ಯುಲೆನ್ಸ್ ಸಿಕ್ಕಿದರೆ ಗರ್ಭೀಣಿಯರು ಬೇಗ ಆಸ್ಪತ್ರೆ ತಲುಪಬಹುದು. ಆದರೆ, ಈ ಆಸ್ಪತ್ರೆಯಲ್ಲಿ ಸಮಸ್ಯೆಯಾಗಿದೆ. ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಇದು ಖಂಡಿತಾ ಸರಿಯಲ್ಲ. ಡಾ.ವಿಜಯಲಕ್ಷ್ಮಿ, ಆಡಳಿತಾಧಿಕಾರಿಗಳ ಗಮನಕ್ಕೆ ತಂದರೆ ಮಾತ್ರ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇಲ್ಲವಾದರೆ ಅಲಕ್ಷ್ಯ ತೋರುತ್ತಾರೆ.
ಹೆಸರು ಹೇಳಲು ಇಚ್ಚಿಸದ ವ್ಯಕ್ತಿ