ಇಂದಿನಿಂದ ಪ್ರವಾಸಿಗರಿಗೆ ಪ್ರವೇಶ
ಚಿಕ್ಕಬಳ್ಳಾಪುರ: ಮೇಘ ಸ್ಪೋಟದಿಂದ ತತ್ತರಿಸಿದ್ದ ನಂದಿ ಗಿರಿಧಾಮ ಇಂದಿನಿಂದ (ಡಿಸೆಂಬರ್ 1) ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಕಳೆದ ಅಗಸ್ಟ್ ತಿಂಗಳಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದ ಸುರಿದ ಭಾರೀ ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಗತ್ಪ್ರಸಿದ್ಧ ನಂದಿ ಗಿರಿಧಾಮದ ರಸ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದ ಪರಿಣಾಮ ಸಾರ್ವಜನಿಕರು ಮತ್ತು ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು.
ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ರಸ್ತೆ ತುಂಡಾದ ಹಿನ್ನೆಲೆಯಲ್ಲಿ ನಂದಿ ಗಿರಿಧಾಮದ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಈಗ ರಸ್ತೆ ದುರಸ್ಥಿ ಕಾಮಗಾರಿ ಪೂರ್ಣಗೊಂಡಿದ್ದು, ನಾಳೆಯಿಂದಲೇ (ಡಿ.1) ಗಿರಿಧಾಮಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಭೂಕುಸಿತವಾಗಿ ಶಿಥಿಲಗೊಂಡು ನಂತರ ಮರು ನಿರ್ಮಾಣಗೊಂಡಿರುವ ಗಿರಿಧಾಮದ ರಸ್ತೆ ಹಾಗೂ ಸೇತುವೆಯನ್ನು ಅಧಿಕಾರಿಗಳೊಂದಿಗೆ ಸೋಮವಾರ ಖುದ್ದು ಪರಿವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೆಚ್ಚಿನ ಮಳೆಯಿಂದಾಗಿ ಕಳೆದ ಅಗಸ್ಟ್ ತಿಂಗಳಲ್ಲಿ ಗಿರಿಧಾಮದ ರಸ್ತೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದ್ಯತೆಯ ಮೇಲೆ ಈ ರಸ್ತೆ ದುರಸ್ಥಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ನಾಳೆ (ಡಿ.1) ಯಿಂದಲೇ ನಂದಿ ಗಿರಿಧಾಮ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಗಿರಿಧಾಮದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ವಾರಾಂತ್ಯದ ಶನಿವಾರ ಮತ್ತು ಭಾನುವಾರದ ದಿನಗಳಂದು ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಗಿರಿಧಾಮದ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ವಾರಾಂತ್ಯದ ದಿನಗಳಂದು ಪ್ರವೇಶವಿರುತ್ತದೆ. ಪ್ರಕೃತಿ ರಮಣೀಯತೆ ಮತ್ತು ಸಸ್ಯಗಳು ಹಾಗೂ ಜೀವ ವೈವಿಧ್ಯತೆಯ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ವಿಶಿಷ್ಠವಾಗಿ ಗುರುತಿಸಿಕೊಂಡಿರುವ ನಂದಿ ಗಿರಿಧಾಮ ಜಿಲ್ಲೆಯ ಅತ್ಯಮೂಲ್ಯವಾದ ಆಸ್ತಿ ಮತ್ತು ಹೆಮ್ಮೆಯಾಗಿದ್ದು, ಈ ಸುಪ್ರಸಿದ್ದ ಪ್ರವಾಸಿ ತಾಣದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಸ್ವಚ್ಛತೆ ಕಾಪಾಡುವ ಮೂಲಕ ಗಿರಿಧಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಜಿಲ್ಲಾಡಳಿತ ಈಗಾಗಲೇ ನಂದಿಗಿರಿಧಾಮದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದ್ದು, ಗಿರಿಧಾಮಕ್ಕೆ ಬರುವವರೆಲ್ಲರೂ ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಗಿರಿಧಾಮದ ಸುರಕ್ಷತೆ, ಸ್ವಚ್ಛತೆ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಹಕರಿಸಬೇಕು. ಅಲ್ಲದೇ, ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಪಾಲಿಸಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದ್ದಾರೆ.
ನಂದಿ ಗಿರಿಧಾಮದಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮ
ಡಿ.1ರಿಂದ ಆರಂಭವಾಗುತ್ತಿರುವ ನಂದಿ ಗಿರಿಧಾಮದ ಪ್ರವೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು, ಗಿರಿಧಾಮಕ್ಕೆ ಬರುವ ವಾಹನಗಳ ಸಂಖ್ಯೆಗೆ ಮಿತಿ ಹೇರಲಾಗಿದೆ. ಗಿರಿಧಾಮದ ವಾಹನ ನಿಲುಗಡೆ ಪ್ರದೇಶದಲ್ಲಿನ ಸ್ಥಳಾವಕಾಶಕ್ಕೆ ಅನುಗುಣವಾಗಿ 350 ನಾಲ್ಕು ಚಕ್ರಗಳ ಲಘು ಮೋಟಾರು ವಾಹನಗಳು, ಮತ್ತು 1,500 ದ್ವಿಚಕ್ರ ವಾಹನಗಳನ್ನು ಗಿರಿಧಾಮದ ಕೆಳಭಾಗದಲ್ಲಿರುವ ಮುಖ್ಯ ಪ್ರವೇಶದ್ವಾರದಲ್ಲಿಯೇ ತಪಾಸಣೆ ನಡೆಸಿ ಪಾಸ್ ಹೊಂದಿರುವ ವಾಹನಗಳನ್ನು ಮಾತ್ರ ಮೇಲ್ಭಾಗಕ್ಕೆ ಬಿಡಲಾಗುವುದು.
ನಂದಿ ಗಿರಿಧಾಮದ ಪ್ರವೇಶ ಬಯಸುವವರು ಪಾಸ್ ಗಳನ್ನು ಹೊಂದುವುದು ಕಡ್ಡಾಯವಾಗಿದ್ದು, ಪಾಸ್ʼಗಳನ್ನು ವಿತರಿಸಲು ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, “ಈ ಹಿಂದೆ ನಂದಿ ಗಿರಿಧಾಮದಲ್ಲಿ ಜಾರಿಯಲ್ಲಿದ್ದ ಪೊಲೀಸ್ ಗಸ್ತನ್ನು ಡಿ.1ರಿಂದ ಮುಂದುವರಿಸಲಾಗುವುದು. ವಾರಾಂತ್ಯದ ದಿನಗಳೂ ಸೇರಿದಂತೆ ಎಲ್ಲಾ ದಿನಗಳಲ್ಲಿಯೂ ನಂದಿ ಗಿರಿಧಾಮದಲ್ಲಿ ಪೊಲೀಸ್ ಬಂದೋಬಸ್ತ್ ಇರಲಿದೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ವಿರುದ್ಧ ದಂಡ ವಿಧಿಸಸಲಾಗುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗಿರಿಧಾಮದ ತಪ್ಪಲಿನ ಪ್ರವೇಶ ದ್ವಾರದಲ್ಲಿಯೂ ಈ ಹಿಂದಿನಂತೆ ವಾಹನಗಳ ತಪಾಸಣೆ ನಡೆಯಲಿದೆ. ಗಿರಿಧಾಮದ ಪ್ರವೇಶಕ್ಕೆ ಸರಕಾರ ನೀಡಿರುವ ಎಲ್ಲಾ ನೀತಿ ನಿಯಮಗಳನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ನಂದಿ ಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು