ಅಡ್ಡ ಬಂದವರ ಮೇಲೂ ಲಾಂಗ್ ಬೀಸಿದ ಕಿರಾತಕ; ಮೊದಲ ಪತ್ನಿಯನ್ನು ಹತ್ಯೆ ಮಾಡಿ ಜೈಲಿಗೆ ಹೋಗಿಬಂದಿದ್ದ ಪಾಪಿ
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ನವಿಲೂರಿನಲ್ಲಿ ಕೊಲೆಪಾತಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಕೊಲೆಪಾತಕನ ಹುಚ್ಚಾಟಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪಾತಕಿಯಿಂದ ಮಹಿಳೆಯನ್ನು ರಕ್ಷಿಸಲು ಬಂದ ಗ್ರಾಮದ ನಾಲ್ವರ ಮೇಲೆಯೂ ಲಾಂಗ್ ಬೀಸಿದ್ದಾನೆ ಹಂತಕ. ಕೈಯನಲ್ಲಿ ಲಾಂಗ್ ಹಿಡಿದು ಸಿಕ್ಕಸಿಕ್ಕವರ ಮೇಲೆ ಬೀಸಿದ್ದಾನೆ. ಈರಯ್ಯ ಅಲಿಯಾಸ್ ಕುಂಡ ಎಂಬಾತನಿಂದ ಕೃತ್ಯ ನಡೆದಿದ್ದು, ಜೈಲಿನಿಂದ ಹೊರ ಬಂದಿದ್ದ ಈ ಕೊಲೆಗಡುಕನ ಅಟ್ಡಹಾಸಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಕುಡಿದ ಅಮಲಿನಲ್ಲಿದ್ದ ಈರಯ್ಯ ತನ್ನ 2ನೇ ಪತ್ನಿಯನ್ನು ಕೊಚ್ಚಿ ಕೊಲೆಗೈದಿದ್ದಾನೆ. ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ನಾಲ್ವರ ಮೇಲೂ ಲಾಂಗ್ ಬೀಸಿದ್ದಾನೆ. 10 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಕೊಲೆಗೈದು ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರ ಬಂದಿದ್ದ ಕೊಲೆಪಾತಕಿ, ಇಂದು ಕುಡಿದ ಅಮಲಿನಲ್ಲಿ ಎರಡನೆಯ ಪತ್ನಿ ನಿಂಗಮ್ಮಳನ್ನ ದಾರುಣವಾಗಿ ಕೊಚ್ಚಿ ಹಾಕಿದ್ದಾನೆ.
ದುರಂತವೆಂದರೆ; ನಿಂಗಮ್ಮ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕೆಯ ತಾಯಿ ಮತ್ತು ತಂದೆಯ ಮೇಲೂ ಗಂಭೀರ ಹಲ್ಲೆ ನಡೆಸಿರುವ ಕಟುಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೊಳಗಾದ ನಾಲ್ವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಉದ್ವಿಗ್ನ ಸ್ಥಿತಿಯಲ್ಲಿರುವ ನವಿಲೂರಿನಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಗಾಯಾಳುಗಳನ್ನ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಸೇರಿಸಲಾಗಿದೆ.