ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಚುನಾವಣಾ ಪ್ರಚಾರ
ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ತಮ್ಮ ಬಗ್ಗೆ ಟೀಕೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಿಡಿಕಿಡಿಯಾದ ಪ್ರಸಂಗ ಗುರುವಾರ ನಡೆಯಿತು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡುವಾಗ ಸಿದ್ದರಾಮಯ್ಯ ಹೇಳಿಕೆಯ ಬಗ್ಗೆ ಪತ್ರಕರ್ತರು ಮಾಜಿ ಪ್ರಧಾನಿಗಳ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಬಗ್ಗೆ ಸಿಟ್ಟಾದ ಗೌಡರು, “ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯ ಪರ್ಮಿಷನ್ ಬೇಕಾ? ನಾನ್‌ಸೆನ್ಸ್” ಎಂದು ಗುಡುಗಿದರು.
“ನಾನು ಪ್ರಧಾನಿಗಳನ್ನು ಭೇಟಿ ಮಾಡುವುದಕ್ಕೆ ಸಿದ್ದರಾಮಯ್ಯನ ಪರ್ಮಿಷನ್ ಬೇಕಾ? ಮನಮೋಹನ್ ಸಿಂಗ್ ಅವರನ್ನು ಭೇಟಿ ಮಡಿದ್ದೇನೆ, ವಾಜಪೇಯಿ ಅವರನ್ನು ಭೇಟಿ ಮಾಡಿದ್ದೇನೆ. ಸಿದ್ದರಾಮಯ್ಯನಿಗೆ ನನ್ನ ಪಕ್ಷವನ್ನು ಸರಂಡರ್ ಮಾಡ್ತೀವಿ ಅಂತ ಹೇಳಿದ್ದೀವಾ? ನಾನ್ಸೆನ್ಸ್” ಎಂದು ಅವರು ಕಟುವಾಗಿ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ಗೆ ಬೆಂಬಲ ಕೊಡಬೇಕಾ ಬೇಡವಾ ಎನ್ನುವುದು 2023 ಚುನಾವಣೆಯಲ್ಲಿ ತೀರ್ಮಾನವಾಗುತ್ತದೆ. ಕುಮಾರಸ್ವಾಮಿ ಅವರು ನನ್ನ ಅನುಮತಿ ಇಲ್ಲದೆ ಬಿಜೆಪಿ ಜೊತೆ ಸರಕಾರ ಮಾಡಿದರು. ಆಮೇಲೆ ಸರಕಾರ ಮಾಡಲು ಕಾಂಗ್ರೆಸ್ ಪಕ್ಷದವರೇ ನಮ್ಮ ಮನೆ ಬಾಗಿಲಿಗೆ ಬಂದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಆಮೇಲೆ ಸರಕಾರವನ್ನು ಕೆಡವಿದವರು ಯಾರು ಅಂತ ಉತ್ತರ ಕೊಡಲಿ ಎಂದು ಗೌಡರು ಹೇಳಿದರು.
ಬೆಂಗಳೂರಿನಿಂದ ಶಿಡ್ಲಘಟ್ಟ ತಾಲೂಕಿನ ಹಿಂಡಿಗನಾಳಕ್ಕೆ ಆಗಮಿಸಿದ ಮಾಜಿ ಪ್ರಧಾನಿಗಳು, ಹೆಚ್.ಕ್ರಾಸ್ ಸಮೀಪದ ಬಾಲಾಜಿ ಕನ್ವೆವೆನ್ಷನ್ ಹಾಲ್ʼನಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ವಕ್ಕಲೇರಿ ರಾಮು ಪರ ಮತಯಾಚನೆ ಮಾಡಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಗೌಡರು; ಜೆಡಿಎಸ್ ಪಕ್ಷ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಗಟ್ಟಿಯಾಗಿ ಕಟ್ಟಿದ್ದಾರೆ. ಅದನ್ನು ನಿರ್ನಾಮ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಾನು ಎಂದೂ ನನ್ನ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಗೆ ಹೋಗಲಿಲ್ಲ. ಅವರೇ ನಮ್ಮ ಬಾಗಿಲಿಗೆ ಬಂದರು. ಐದು ವರ್ಷ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಮಾತು ಕೊಟ್ಟರು. ಸಿದ್ದರಾಮಯ್ಯ ಏನೆಲ್ಲಾ ಮಾಡಿದರು ಎನ್ನುವುದು ಗೊತ್ತಿದೆ. ಅವರ ಎಲ್ಲ ಭಾಗ್ಯಗಳನ್ನು ನಿಲ್ಲಿಸುವಂತಿರಲಿಲ್ಲ. ಆದರೂ ಕುಮಾರಸ್ವಾಮಿ ೨೩,೦೦೦ ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡಿದರು ಎಂದು ಮಾಜಿ ಪ್ರಧಾನಿಗಳು ವಿವರಿಸಿದರು.
ನಮ್ಮ ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು ಒಳ್ಳೆಯ ಹುಡುಗ. ರೈತ ಕುಟುಂಬದಿಂದ ಬಂದವನು. ಹಿಂದೆ ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಕೊಟ್ಟಿದ್ದೆ. ಕೊನೆ ಕ್ಷಣದಲ್ಲಿ ಪಕ್ಷವೂ ಮತ್ತೊಬ್ಬರಿಗೆ ಟಿಕೆಟ್ ನೀಡಿದಾಗ ರಾಮು ಭೀ ಫಾರಂ ಅನ್ನು ವಾಪಸ್ ತಂದುಕೊಟ್ಟರು. ಅಂಥ ಪಕ್ಷನಿಷ್ಠೆ ಅವರದ್ದು ಎಂದರು ದೇವೇಗೌಡರು.
ನಾನೇನು ಕೆಲಸ ಮಾಡಿದ್ದೇನೆ ಎನ್ನುವುದು ಜನರಿಗೆ ಗೊತ್ತಿದೆ. ರೈತರಿಗಾಗಿ ಏನೆಲ್ಲ ಮಾಡಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅಲ್ಪಸಂಖ್ಯಾತರಿಗೆ ಮೀಸಲು ಸೌಲಭ್ಯ ಕೊಟ್ಟಿದ್ದೇ ಈ ದೇವೇಗೌಡನೇ. ಜಮೀರ್ʼಗೆ ಅಧಿಕಾರ ಕೊಟ್ಟಿದ್ದು ಯಾರು? ಗೆಲ್ಲಿಸಿದ್ದು ಯಾರು? ನಾನೇ. ಅಲ್ಲದೆ ಮಿರಾಜುದ್ದೀನ್ ಪಾಟೀಲ್, ಸಿಎಂ ಇಬ್ರಾಹಿಂ ಅಂಥವರಿಗೆ ಅಧಿಕಾರ ಕೊಟ್ಟಿದ್ದು ಕೂಡ ನಾನೇ ಎಂದು ಅವರು ಹೇಳಿದರು.
ದೇಶಕ್ಕೆ ದೇವೇಗೌಡರು ಏನು ಮಾಡಿದರು ಎಂದು ಕೆಲವರು ಕೇಳುತ್ತಾರೆ. ಅವರಿಗೆ ಉತ್ತರ ಕೊಡುವ ಕಾಲ ಬಂದಿದೆ. ಇದೇ ಡಿಸೆಂಬರ್ ೧೩ರಂದು ನನ್ನ ಕುರಿತಾದ ಪುಸ್ತಕವೊಂದು ಬಿಡುಗಡೆ ಆಗುತ್ತಿದೆ. ದೇಶಕ್ಕೆ ನಾನು ಏನೆಲ್ಲ ಕೆಲಸ ಮಾಡಿದೆ ಎನ್ನುವುದು ಆ ಪುಸ್ತಕದಲ್ಲಿದೆ. ಎಲ್ಲರೂ ಓದಬೇಕು ಎಂದರು ಗೌಡರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮುಂತಾದವರಿದ್ದರು.
ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.