ಕಿರಿಯ ವಯಸ್ಸಿನಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಕಿಡಿ
ಇಂದು ಯುವ ಸ್ವಾತಂತ್ರ್ಯ ವೀರ ಖುದಿರಾಮ್ ಬೋಸ್ ಅವರ ಜನ್ಮದಿನ. ತನ್ನಿಮಿತ್ತ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅರ್ಥಪೂರ್ಣ ಲೇಖನ.
ಕ್ರಾಂತಿಕಾರಿ ಮಾರ್ಗದಲ್ಲಿಯೇ ಭಾರತವನ್ನು ಸ್ವತಂತ್ರಗೊಳಿಸಬೇಕೆಂಬ ಗುರಿ ಹೊಂದಿದ್ದ ದೇಶಪ್ರೇಮಿಗಳಲ್ಲಿಯೇ ಕಿರಿಯರೆನಿಸಿದ, ತಮ್ಮ 18ನೇ ವಯಸ್ಸಿನಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಖುದಿರಾಮ್ ಬೋಸ್ ಅವರ 133ನೇ ಜನ್ಮದಿನವಿಂದು.
ತ್ರೈಲೋಕ್ಯನಾಥ ಬಸು ಮತ್ತು ಲಕ್ಷ್ಮೀಪ್ರಿಯ ದೇವಿ ದಂಪತಿಗಳ ಪುತ್ರರಾಗಿ 1889ರ ಡಿಸೆಂಬರ್ 3ರಂದು ಬಂಗಾಳದ ಮಿಡ್ನಾಪುರ ಜಿಲ್ಲೆಯ ಹಬೀಬ್ ಪುರದಲ್ಲಿ ಜನಿಸಿದರು. ತಮ್ಮ 6ನೇ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅಕ್ಕ ಅನುರೂಪ ಮತ್ತು ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸರು, ಬಾಲ್ಯದ ದಿನಗಳಲ್ಲೇ ಸ್ವಾತಂತ್ರ್ಯ ಚಳವಳಿಯತ್ತ ಆಕರ್ಷಿತರಾದರು. ಅವರು ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಳ್ಳಲು ಪ್ರೇರಿಪಿಸಿದ್ದು ಬಂಕಿಮಚಂದ್ರರು ಬರೆದ ಆನಂದ ಮಠ ಮತ್ತು ಆನಂದದಾತ ಎಂಬ ಕಾದಂಬರಿಗಳು.
ವಂದೇ ಮಾತರಂ ಗೀತೆಯಂತೂ ಇವರ ನರನಾಡಿಗಳಲ್ಲಿ ದೇಶ ಭಕ್ತಿ ಉಕ್ಕಿ ಹರಿಯುವಂತೆ ಮಾಡಿತ್ತಲ್ಲದೇ ಖುದಿರಾಮ್ ಬೋಸರು ಶಾಲೆಯ ದಿನಗಳಿಂದ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಮೆರವಣಿಗೆಗಳಲ್ಲಿ ಭಾಗವಹಿಸುತ್ತಾ, ಇಂಗ್ಲಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. 9ನೇ ತರಗತಿಯ ನಂತರ ವಿದ್ಯಾಭ್ಯಾಸ ತೊರೆದು ಜಂಗ್-ಎ-ಆಜಾದಿಗೆ ಸೇರಿದರು. ಶಾಲೆಯನ್ನು ತೊರೆದ ನಂತರ ಖುದಿರಾಮ್ ಕ್ರಾಂತಿಕಾರಿ ಪಕ್ಷದ ಸದಸ್ಯರಾಗಿ ವಂದೇ ಮಾತರಂ ಕರಪತ್ರಗಳನ್ನು ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕರಪತ್ರ ಹಂಚಿಕೆಯ ಸಮಯದಲ್ಲಿಯೇ ಪೋಲಿಸರ ಕೈಗೆ ಸಿಕ್ಕಿಬಿದ್ದು ಬಿಡುಗಡೆಗೆಯಾದ ನಂತರವಂತೂ ಅವರ ಮತ್ತು ಕ್ರಾಂತಿಕಾರಿಗಳ ಸಂಬಂಧ ಇನ್ನೂ ಗಟ್ಟಿಯಾಯಿತು.
ಭಾರತದ ಕ್ರಾಂತಿಕಾರಿ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿದ ಬಂಗಾಳವನ್ನು ವಿಭಜಿಸಿದರೆ ಜನತೆಯ ಐಕ್ಯತೆಯನ್ನು ಮುರಿದು ಕ್ರಾಂತಿಕಾರಿಗಳ ಹೋರಾಟವನ್ನು ತಡೆಗಟ್ಟಬಹುದು ಎಂಬ ಆಲೋಚನೆಯನ್ನು ಹೊಂದಿದ ಬ್ರಿಟೀಷರು ಅದಕ್ಕನುಗುಣವಾಗಿ 1905ರಲ್ಲಿ ಆಗಿನ ವೈಸರಾಯ್ ಆಗಿದ್ದ ಕರ್ಜನ್ ಬಹುಸಂಖ್ಯಾತ ಹಿಂದೂಗಳ ಪಶ್ಚಿಮ ಪ್ರಾಂತ್ಯ (ಈಗಿನ ಪಶ್ಚಿಮ ಬಂಗಾಳ), ಬಹುಸಂಖ್ಯಾತ ಮುಸ್ಲಿಮರ ಪೂರ್ವ ಪ್ರಾಂತ್ಯ (ಈಗಿನ ಬಾಂಗ್ಲಾದೇಶ) ಎಂಬುದಾಗಿ ಬಂಗಾಳವನ್ನು ಇಬ್ಭಾಗ ಮಾಡಿದರು.
ಜನತೆಯು ಇದರ ವಿರುದ್ಧ ಉಗ್ರ ಪ್ರತಿಭಟನೆ ಆರಂಭಿಸಿದರು. ಭುಗಿಲೆದ್ದಿದ್ದ ಪ್ರತಿಭಟನೆಯನ್ನು ತಣ್ಣಗಾಗಿಸುವುದು ಮತ್ತು ಭಾರತದಲ್ಲಿ ನಾವು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಪ್ರಚಾರ ಮಾಡುವ ಉದ್ದೇಶದಿಂದ 1906ರ ಫೆಬ್ರವರಿ ತಿಂಗಳಿನಲ್ಲಿ ಬಂಗಾಳದ ಮೇಧನಿಪುರದಲ್ಲಿ ಬ್ರಿಟೀಷರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಬ್ರಿಟಿಷರ ಈ ಕುತಂತ್ರದ ವಿರುದ್ಧ ಖುದಿರಾಮರು ಸೋನಾರ್ ಬಾಂಗ್ಲಾ ಎಂಬ ಕರಪತ್ರಗಳನ್ನು ಹಂಚಿ ಭಾರತೀಯರಿಗೆ ವಾಸ್ತವದ ಅರಿವನ್ನು ಮೂಡಿಸುತ್ತಿದ್ದರು.
ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆಬ್ಬಿಸುವ ಕಾರ್ಯದಲ್ಲಿ ಅನೇಕ ಪತ್ರಿಕೆಗಳು ಉಗ್ರ ಲೇಖನಗಳ ಮೂಲಕ ದೇಶದ ನಾಗರೀಕರನ್ನು ಬಡಿದೆಬ್ಬಿಸಿ, ಬ್ರಿಟೀಷರ ವಿರುದ್ಧ ಹೋರಾಟ ಮಾಡುವ ಕುಮ್ಮಕ್ಕು ನೀಡುತ್ತಿದ್ದವು. ಬ್ರಿಟಿಷರ ವಿರುದ್ಧವಾಗಿ ಬರೆದ ಪತ್ರಿಕೆಗಳ ವಿರುದ್ಧ ಮೊಕದ್ದಮೆ ಹೂಡಲಾಗುತ್ತಿತ್ತು. ಇದೇ ಕಾರಣಕ್ಕಾಗಿಯೇ, ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ವಂದೇ ಮಾತರಂ ಪತ್ರಿಕೆಯೂ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟೀಷರು ಅನವಶ್ಯಕವಾಗಿ ಏಕಾಎಕಿ ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಎಂಬ ಪೋರ, ಬ್ರಿಟೀಷ್ ಅಧಿಕಾರಿಗೇ ತಿರುಗಿಸಿ ಹೋಡದೇ ಬಿಟ್ಟ. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡ್ ಆ ಕಿಶೋರನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನೂ ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ತನ್ನ ಕ್ರೌರ್ಯ ಮೆರೆದನು. ಈ ಕಲ್ಕತ್ತಾ ಪ್ರೆಸಿಡೆನ್ಸಿಯ ಮೆಜಿಸ್ಟ್ರೇಟ್ ಕಿಂಗ್ಸ್ ಪೋರ್ಡ್ʼನು ಸ್ವಾತಂತ್ರ ಹೋರಾಟಗಾರರಿಗೆ ಅನ್ಯಾಯಯುತವಾದ ಹಾಗೂ ಕ್ರೂರ ಶಿಕ್ಷೆಯನ್ನು ವಿಧಿಸುವುದರಲ್ಲಿ ಕುಖ್ಯಾತನಾಗಿದ್ದ. ಈತನ ವಿರುದ್ಧ ಜನತೆಯ ಆಕ್ರೋಶ ಹೆಚ್ಚುತ್ತಲೇ ಹೋಯಿತು.
ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರ ಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಅನೇಕ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದ ವಿಷಯ ಬ್ರಿಟಿಷ್ ಸರ್ಕಾರಕ್ಕೆ ಗುಪ್ತಚರರ ಮೂಲಕ ತಿಳಿದು ಬಂದ ಕಾರಣ, ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತ್ತು.
ಕಿಂಗ್ಸ್ ಪೋರ್ಡ್ʼನನ್ನು ಕೊನೆಗಾಣಿಸುವ ಕಾರ್ಯವನ್ನು ‘ಯುಗಾಂತರ ಗುಂಪಿ’ನ ನಾಯಕರುಗಳು ಚರ್ಚಿಸಿ ನಿರ್ಧರಿಸಿದಂತೆ ಖುದಿರಾಮ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಲ ಚಾಕಿಗೆ ವಹಿಸಿದರು. ಇದು ತನ್ನ ಜೀವನದಲ್ಲಿ ಲಭಿಸಿದ ಶ್ರೇಷ್ಠ ಕಾರ್ಯವೆಂದು ಭಾವಿಸಿದ ಖುದಿರಾಮ್, ಪ್ರಫುಲ್ಲ ಚಾಕಿಯೊಂದಿಗೆ ಮುಜಾಫರ್ʼಗೆ ತೆರಳಿ ಕಿಂಗ್ಸ್ ಪೋರ್ಡ್ ವಾಸವಿದ್ದ ಬೀದಿಯಲ್ಲಿರುವ ಮನೆಯೊಂದರಲ್ಲೆ ಹರೇನ್ ಶಂಕರ್ ಎಂದು ಹೆಸರನ್ನು ಬದಲಿಸಿಕೊಂಡು ವಾಸಿಸತೊಡಗಿದರು. ಕಿಂಗ್ಸ್ ಫೋರ್ಡʼನ ಚಲನ-ವಲನಗಳನ್ನು ಗಮನಿಸಿ ಯೋಜನೆಯನ್ನು ರೂಪಿಸಿದರು. ಆತ ಸಂಜೆ ಕುದುರೆಗಾಡಿಯಲ್ಲಿ ಯುರೋಪಿಯನ್ ಕ್ಲಬ್ʼನ ಪೂರ್ವ ದ್ವಾರದ ಮೂಲಕ ಹೊರಟು ಬರುವಾಗ ಬಾಂಬ್ ಹಾಕಲು ನಿರ್ಧರಿಸಿದರು. ಆದರೆ ಅನಿರೀಕ್ಷಿತವಾಗಿ ಆ ಗಾಡಿಯಲ್ಲಿ ಕಿಂಗ್ಸ್ ಪೋರ್ಡ್ʼನ ಗೆಳೆಯ ಕೆನಡಿಯ ಪತ್ನಿ ಮತ್ತು ಗೆಳತಿ ಮಾತ್ರವಿದ್ದರು. ಇದನ್ನರಿಯದೆ ಬಾಂಬ್ ಹಾಕಿ, ತಾವು ಕಿಂಗ್ಸ್ ಪೋರ್ಡ್ʼನನ್ನೇ ಮುಗಿಸಿದ್ದೇವೆ ಎಂದೆನಿಸಿ ಪ್ರಫುಲ್ಲ ಒಂದು ಕಡೆ, ಖುದಿರಾಮ್ ಇನ್ನೊಂದು ಕಡೆ ಓಡಿದರು.
ಕ್ರಾಂತಿಕಾರಿ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆಯೇ ಚಂದ್ರಶೇಖರ ಆಜಾದರಂತೆ ತನಗೆ ತಾನೇ ಗುಂಡಿಟ್ಟುಕೊಂಡು ಹುತಾತ್ಮನಾದ. ಇತ್ತ ರಾತ್ರಿಯಿಡಿ 22 ಮೈಲಿ ಬರಿಗಾಲಲ್ಲಿ ಓಡಿ ಧಣಿದಿದ್ದ ಖುದಿರಾಮ್ ವೈನಿ ರೈಲ್ವೇ ಸ್ಟೇಷನ್ನಿನ ಅಂಗಡಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಈತನ ಕೊಳೆಯಾಗಿದ್ದ ವಸ್ತ್ರ, ಕೈ-ಕಾಲನ್ನು ಕಂಡು ಸಂಶಯಗೊಂಡ ಪೊಲೀಸರು ಬಾಂಬ್ ಸ್ಫೋಟಿಸಿದ ಖುದಿರಾಮ್ ಇವನೇ ಇರಬೇಕೆಂದು ಬಂಧಿಸಿದರು. ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಈ ಘಟನೆ ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿದ್ದಂತೂ ಸುಳ್ಳಲ್ಲ. ಆ ತರುಣರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡನ ವಾಹನ ಚೂರು ಚೂರು ಮಾಡಿದ್ದಲ್ಲದೇ, ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ಸಹಾ ನುಚ್ಚುನೂರು ಮಾಡಿ ಹಾಕಿತ್ತು.
ಈ ಘಟನೆಯನ್ನು ಸುಮ್ಮನೇ ಬಿಟ್ಟರೇ ಇದರಿಂದ ಇಂತಹ ಹತ್ತಾರು ಘಟನೆಗಳು ಮರುಕಳಿಸಬಹುದು ಎಂಬುದನ್ನು ಮನಗಂಡ ಬ್ರಿಟೀಷರು ಆ ಕ್ರಾಂತಿಕಾರಿಗಳನ್ನು ತೀವ್ರವಾಗಿ ಹುಡುಕುತ್ತಿದ್ದ ಪರಿಣಾಮ ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ಯುವಕ ಖುದಿರಾಮ್ ಬೋಸ್ ಪೋಲಿಸರ ಕಣ್ಣಿಗೆ ಪತ್ತೆಯಾಗುತ್ತಾರೆ. ಪೋಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧಿತನಾಗುತ್ತನೆ, ವಿಚಾರಣೆ ಮಾಡಲು ಭೋಸ್ʼರನ್ನು ಮುಜಾಫರ್ ನಗರಕ್ಕೆ ಕರೆತರುತ್ತಾರೆ. ಈ ಸಂದರ್ಭದಲ್ಲಿ ಈತನನ್ನು ಸ್ವಾಗತಿಸಲು ಮುಜಾಫರ್ ನಗರದಲ್ಲಿ ಜನಸಾಗರವೇ ನೆರೆದಿತ್ತು.
ನಂತರ ವಿಚಾರಣೆ ಎಂಬ ನಾಟಕ ನಡೆದು ಮರಣದಂಡನೆಗೆ ಗುರಿಯಾಗಿ, ದೇಶವನ್ನು ಸ್ವಾತಂತ್ರ್ಯಗೊಳಿಸಲು ಅತ್ಯಂತ ಕಿರಿಯ ವಯಸ್ಸಿಗೆ ಗಲ್ಲುಗಂಬವೇರಿದ ಕೀರ್ತಿಗೆ ಪಾತ್ರರಾಗಿ 1908ರ ಅಗಸ್ಟ್ 11ರಂದು ಕೇವಲ ತನ್ನ 18ನೇ ವಯಸ್ಸಿನ 8ನೇ ತಿಂಗಳ 8ನೇ ದಿನದಂದು ತನ್ನ ಪ್ರಾಣವನ್ನು ಅರ್ಪಿಸಿದರು.
ಖುದಿರಾಮ್ ಹುತಾತ್ಮರಾದಾಗ ವಿದ್ಯಾರ್ಥಿಗಳು ಮತ್ತು ಇತರರು ಶೋಕಿಸಿದರು. ಶಾಲೆಗಳು, ಕಾಲೇಜುಗಳು ಹಲವು ದಿನಗಳವರೆಗೆ ಮುಚ್ಚಲ್ಪಟ್ಟವು, ಮತ್ತು ಯುವಕರು ಧೋತಿ ಧರಿಸಲು ಪ್ರಾರಂಭಿಸಿದರು. ಕೇವಲ ಹದಿನೆಂಟನೇಯ ವಯಸ್ಸಿಗೆ ಈ ಮಟ್ಟಕ್ಕೆ ಜನಸ್ತೋಮದ ಮನಸ್ಸನ್ನು ಗೆದ್ದಿದ್ದ ಸ್ವಾತಂತ್ರ ಹೋರಾಟಗಾರ ಭಾರತದ ಇತಿಹಾಸ ಉದ್ದಕ್ಕೂ ಗಮನಿಸಿದರೆ ಯಾರು ಸಿಗುವುದಿಲ್ಲ.
ಖುದಿರಾಮ ಗಲ್ಲುಗಂಬವೇರಿದ ಮರುದಿನ ಅಂದಿನ ಪ್ರಸಿದ್ಧ ಪತ್ರಿಕೆ ಅಮೃತ ಬಜಾರ್ ಹುತಾತ್ಮನ ಮರಣದ ಸುದ್ದಿಯನ್ನು ವಿವರವಾಗಿ ಪ್ರಕಟಿಸಿ-
KHUDIRAM END: CHEERFULL AND SMILING ಎಂಬ ತಲೆಬರಹ ನೀಡಿತ್ತು.
ಬಾಲಗಂಗಾಧರ ತಿಲಕರು ಹೀಗೆ ಬರೆದರು-
“1897ರ ಜುಬಲಿ ಹತ್ಯೆಯಾಗಲಿ, ಸಿಖ್ ರೆಜಿಮೆಂಟ್ʼಗಳನ್ನು ಹಾಳು ಮಾಡಿದ ವರದಿಯಾಗಲಿ ಇಷ್ಟು ಗದ್ದಲವನ್ನುಂಟು ಮಾಡಲಿಲ್ಲ. 1857ರ ದಂಗೆಯ ನಂತರ ನಡೆದ ಅಸಾಧಾರಣ ಘಟನೆಯಿದು ಎಂಬುದು ಇಂಗ್ಲಿಷ್ ಸಾರ್ವಜನಿಕ ಅಭಿಪ್ರಾಯವಾಗಿದೆ!”.
ಭಾರತ ಸರ್ಕಾರ ಖುದೀರಾಮ್ ಬೋಸರ ನೆನಪಿನಾರ್ಥವಾಗಿ ಅಂಚೇ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರ ತ್ಯಾಗ ಮತ್ತು ಬಲಿದಾನಗಳಿಗೆ ಗೌರವವನ್ನು ಸೂಚಿಸಿದೆ. ದೇಶವನ್ನು ಸ್ವಾತಂತ್ರ್ಯಗೊಳಿಸಲು ಅತ್ಯಂತ ಕಿರಿಯ ವಯಸ್ಸಿಗೆ ಗಲ್ಲುಗಂಬವೇರಿದ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಅವರಿಗೆ ನಮನಗಳು. ದೇಶಕ್ಕಾಗಿ ಅವರು ಮಾಡಿದ ಅತ್ಯುನ್ನತ ತ್ಯಾಗವನ್ನು ಅನಾದಿ ಕಾಲದವರೆಗೆ ಭಾರತೀಯರಾದ ನಾವು ಸ್ಮರಿಸುತ್ತೇವೆ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.